ಮಸಾಲ ನೀರು ದೋಸೆ ಮತ್ತು ಅಮಟೆ ಕಾಯಿ ಚಟ್ನಿ

ಹೊಸ ರುಚಿಯನ್ನು ಹೀಗೆ ಮಾಡಿ ನೋಡಿ…

ಹೌದು ದಿವ್ಯ ಇಶಾನ್ ಅವರ ಹೊಸ ರುಚಿ ಇದು…ನೀವೂ ಒಮ್ಮೆ ಟ್ರೆöÊ ಮಾಡಿ ನೋಡಿ. ದಿನ ದಿನವೂ ಹೊಸ ಹೊಸ ತಿಂಡಿ ಮಾಡುವ ಅನಿವಾರ್ಯತೆ ಪ್ರತಿಯೊಬ್ಬರದ್ದು. ಹಾಗಾಗಿ ಈ ದಿನ ಅಂತರ್ಜಾಲ ಸುದ್ದಿ ತಾಣ ನಿಮಗಾಗಿ ಹೊಸ ಹೊಸ ಅಡುಗೆಯನ್ನು ಪರಿಚಯಿಸುತ್ತಿದೆ…ನೀವೂ ಮಾಡಿ ನೋಡಿ…

 

1 ಲೋಟ ದೋಸೆ ಅಕ್ಕಿಯನ್ನು ಕನಿಷ್ಠ 8 ಗಂಟೆಗಳ ಕಾಲ ನೆನೆಸಿಡಿ. ಬೆಳಗ್ಗೆ ತಿಂಡಿಗೆ ಮಾಡುವುದಾದಲ್ಲಿ ರಾತ್ರಿ ನೆನೆಸಿಟ್ಟು ಬೆಳಗ್ಗೆ ನುಣ್ಣಗೆ ರುಬ್ಬಿಕೊಳ್ಳಿ. ನೀರು ದೋಸೆ ಹದಕ್ಕೇ ರುಬ್ಬಿಕೊಳ್ಳಿ. ರುಚಿಗೆ ಬೇಕಾದಷ್ಟು ಉಪ್ಪು ಹಾಕಿ. 2 ಸಣ್ಣ ಚಮಚ ತೆಂಗಿನೆಣ್ಣೆ ಕಾಯಿಸಿ 1/4 ಚಮಚ ಸಾಸಿವೆ, 1/2 ಚಮಚ ಜೀರಿಗೆ, ಚಿಕ್ಕದಾಗಿ ಹೆಚ್ಚಿಕೊಂಡ 1 ಹಸಿಮೆಣಸು, ಚಿಕ್ಕದಾಗಿ ಹೆಚ್ಚಿಕೊಂಡ 5 ಅಥವಾ 6 ಕರಿಬೇವಿನ ಎಲೆಗಳು, 2 ಚಮಚೆ ಆಗುವಷ್ಟು ಹೆಚ್ಚಿದ ಕೊತ್ತಂಬರಿ ಸೊಪ್ಪು, 1/4 ಚಮಚ ಅರಿಶಿಣ 1/4 ಚಮಚ ಹಿಂಗು ಇಷ್ಟನ್ನು ಒಗ್ಗರಣೆ ಹಾಕಿ ಚೆನ್ನಾಗಿ ಫ್ರೈ ಮಾಡಿ ರುಬ್ಬಿಟ್ಟಿರುವ ದೋಸೆ ಹಿಟ್ಟಿಗೆ ಹಾಕಿ ಚೆನ್ನಾಗಿ ಕದಡಿ. ದೋಸೆ ಹಿಟ್ಟು ತಯಾರಾಗಿದೆ.

ಕಾವಲಿ ಚೆನ್ನಾಗಿ ಕಾಯಿಸಿ, ತೆಂಗಿನೆಣ್ಣೆ ಸವರಿ ನೀರು ದೋಸೆ ಎರೆದಂತೆ ತೆಳುವಾಗಿ ದೋಸೆ ಎರೆಯಿರಿ. ಮುಚ್ಚಳ ಮುಚ್ಚಿ, ಒಂದು ನಿಮಿಷ ಬೇಯಿಸಿ. ಹಿಟ್ಟು ನಯವಾಗಿ ರುಬ್ಬಿದ್ದಲ್ಲಿ ದೋಸೆ ಎರೆಯುವಾಗ ಸುತ್ತಲೂ ಸಿಡಿಯುವುದಿಲ್ಲ. ಹದ ಸರಿಯಾಗಿದ್ದಲ್ಲಿ ದೋಸೆ ಕಾವಲಿಯಿಂದ ಎತ್ತುವುದಕ್ಕೆ ಕಷ್ಟ ಆಗುವುದಿಲ್ಲ.

ನೆಂಚಿ ಕೊಳ್ಳಲು ಒಂದು ಅಮಟೆ ಕಾಯಿಯ ಗೊರಟೆ ಬಿಟ್ಟು ಸಿಪ್ಪೆ ಸಮೇತ ತಿರುಳನ್ನು ಕೆತ್ತಿ ತೆಗೆದು ಒಂದು ಬಟ್ಟಲು ಹಸಿ ಕಾಯಿ ತುರಿ, ಒಂದು ದೊಡ್ಡ ಚಮಚ ಹುರಿಗಡಲೆ, ರುಚಿಗೆ ತಕ್ಕಷ್ಟು ಉಪ್ಪು( ಬೇಕಾದಲ್ಲಿ ಒಂದು ಚಿಟಿಕೆ ಹಿಂಗು ಅಥವಾ ಎರಡೇ ಎರಡು ಬೆಳ್ಳುಳ್ಳಿ ಎಸಳು ಹಾಕ ಬಹುದು) ಚಟ್ಣಿ ಮಾಡಿ ಎಣ್ಣೆಯಲ್ಲಿ ಸಾಸಿವೆ, ಉದ್ದಿನ ಬೇಳೆ, ಕರಿಬೇವು, ತುಂಡು ಮಾಡಿದ ಒಂದು ಒಣ ಮೆಣಸಿನ ಒಗ್ಗರಣೆ ಹಾಕಿ. ಹುಳಿ ಹುಳಿ ಖಾರ ಖಾರವಾದ ಅಮಟೆ ಕಾಯಿ ಚಟ್ನಿ ಮಸಾಲ ನೀರುದೋಸೆ ಸವಿಯಲು ಸಿದ್ಧವಾಗಿದೆ.

 

ಈ ಹೊಸ ರುಚಿಯನ್ನು ನೇರವಾಗಿ ನೋಡಲು ದಿವ್ಯ ಇಶಾನ್ ಅವರ ಯೂ ಟ್ಯೂಬ್ ಲಿಂಕ್ ಬಳಸಿಕೊಳ್ಳಿ…

Share

Leave a Reply

Your email address will not be published. Required fields are marked *