ಮೂಡುಬಿದಿರೆ: ಆಗಸದಲ್ಲಿ ಕೆಂಪು ಹಸಿರು ಬಣ್ಣದ ಮಿನುಗುವ ಆಕೃತಿಯೊಂದು ವೃತ್ತಾಕಾರದಲ್ಲಿ ಬಲುದೂರದಲ್ಲಿ ಸಂಚರಿಸುವ ದೃಶ್ಯವೊಂದು ಮಂಗಳವಾರ ರಾತ್ರಿ ಗೋಚರಿಸಿದೆ. ರಾತ್ರಿ ೯.೪೫ಕ್ಕೆ ಆಗಸದಲ್ಲಿ ಈ ದೃಶ್ಯ ಗೋಚರವಾಗಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಇದುಗೋಚರವಾದ ಬಗ್ಗೆ ಮಾಹಿತಿಯಿದೆ. ವೃತ್ತಾಕಾರದಲ್ಲಿ ಚಂದ್ರನ ಸುತ್ತ ಸುತ್ತುವ ರೀತಿಯಲ್ಲಿ ಇದು ಭಾಸವಾಗಿದೆ. ನಾಲ್ಕು ಮಿನುಗುವ ಆಕೃತಿಗಳು ಸುತ್ತುವರಿಯುವಂತೆ ಒಮ್ಮೆ ಗೋಚರವಾದರೆ ಮತ್ತೆ ಅವೆಲ್ಲ ಒಂದಾದಂತೆ ಕಾಣುತ್ತಿತ್ತು.

ಸ್ಥಳೀಯ ಹಾರಾಟವಲ್ಲ!: ಇದು ಸ್ಥಳೀಯವಾಗಿ ಹಾರಾಡಿದ ಡ್ರೋನ್ ಅಥವಾ ವಿಮಾನವಾಗಲು ಸಾಧ್ಯವೇ ಇಲ್ಲ. ಏಕೆಂದರೆ ಏಕ ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯ ಕೆಲವು ಭಾಗಗಳಲ್ಲಿಯೂ ಇದು ಗೋಚರವಾಗಿದೆ. ಸಾಗರದ ಕುಗ್ವೆಯ ಸುಬ್ರಹ್ಮಣ್ಯ ಹೆಗಡೆಯವರು ನೀಡಿದ ಮಾಹಿತಿಯನ್ವಯ ಆಗಸ ವೀಕ್ಷಿಸಿದಾಗ ಮೂಡುಬಿದಿರೆಯಲ್ಲೂ ಇದೇ ರೀತಿಯ ಆಕೃತಿ ಚಲನೆಯಾಗುತ್ತಿದ್ದುದು ಗೋಚರವಾಗಿದೆ!
ಎರಡೂ ಪ್ರದೇಶಗಳ ನಡುವೆ ಸಾಕಷ್ಟು ಅಂತರವಿರುವುದರಿಂದ, ವಿಶಾಲ ಪ್ರದೇಶದಿಂದ ಗೋಚರಿಸುವ ಆಕಾಶಕಾಯ ಅಥವಾ ಎತ್ತರದ ವಾತಾವರಣದಲ್ಲಿನ ಬೆಳಕಿನ ವಿದ್ಯಮಾನವಾಗಿರಬಹುದು.
ಮಂಗಳವಾರ ರಾತ್ರಿ ಆಕಾಶದ ಚಲನವಲನದ ಮಾಹಿತಿಯನ್ನು ಪರಿಶೀಲಿಸಿದಾಗ, Starlink-1364 ಉಪಗ್ರಹವು ಭೂಮಿಯ ವಾತಾವರಣಕ್ಕೆ ಮರುಪ್ರವೇಶಿಸುವ ನಿರೀಕ್ಷೆ ಇತ್ತು. ಅದರ ಅಂದಾಜು ಸಮಯ ರಾತ್ರಿ 9:01, ಸುಮಾರು ಒಂದು ಗಂಟೆಯ ವ್ಯತ್ಯಾಸದ ಸಾಧ್ಯತೆಯೊಂದಿಗೆ ಎಂದು ಒಂದು ಉಪಗ್ರಹ ಟ್ರ್ಯಾಕಿಂಗ್ ಮೂಲ ತಿಳಿಸಿತ್ತು.
ಹೀಗಾಗಿ ಉಪಗ್ರಹದ ಮರುಪ್ರವೇಶ ಅಥವಾ ಅದರ ಅವಶೇಷಗಳು ಉರಿಯುವ ವಿದ್ಯಮಾನ ಒಂದು ಪ್ರಮುಖ ಸಾಧ್ಯತೆ ಇದೆಂದು ವೈಜ್ಞಾನಿಕ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ. ಆದರೆ ಮೂಡುಬಿದಿರೆ ಮತ್ತು ಸಾಗರದಲ್ಲಿ ಕಂಡ ಬೆಳಕು ಇದೇ ಎಂದು ಇನ್ನೂ ಖಚಿತಪಡಿಸಲು ಸಾಧ್ಯವಿಲ್ಲ