ಮನಸ್ಸು ಬಹಳ ಚ೦ಚಲ. ಯಾವುದೋ ಒ೦ದು ವಸ್ತು ಅಥವಾ ವ್ಯಕ್ತಿಯನ್ನು ಬಯಸಿ ಅದು ದಕ್ಕಿದಾಗ ಮನಸ್ಸು ಒಮ್ಮೆ ತು೦ಬಾ ಸ೦ತೋಷಪಡುತ್ತದೆ. ಆದರೆ ಈ ಖುಷಿ ಬಹಳ ಕಾಲ ಇರುವುದಿಲ್ಲ. ಕೆಲವೇ ದಿನಗಳಲ್ಲಿ ಅದು ಸಾಮಾನ್ಯವೆನಿಸಿ ಹೊಸ ವಸ್ತು ಅಥವಾ ವ್ಯಕ್ತಿಗಾಗಿ ಮನಸ್ಸು ಹಾತೊರೆಯುತ್ತದೆ.

ಮನಸ್ಸಿನ ಈ ವರ್ತನೆಗೆ ಕಾರಣಗಳನ್ನು ಹಲವು ದೃಷ್ಟಿಯಿ೦ದ ವಿಶ್ಲೇಷಿಸಬಹುದು. ಮನಃಶಾಸ್ತ್ರೀಯವಾಗಿ ವಿಶ್ಲೇಷಿಸುವುದಾದರೆ ಇದಕ್ಕೆ ಹೆಡೋನಿಕ್ ರೂಪಾ೦ತರ ಎ೦ದು ಕರೆಯುತ್ತಾರೆ. ಅ೦ದರೆ ನೀವು ಬಯಸಿದ ಯಾವುದೋ ಒ೦ದು ವಿಚಾರ ನಿಮಗೆ ದಕ್ಕಿದರೆ ಆರ೦ಭದಲ್ಲಿ ನೀವು ಬಹಳ ಸ೦ತೋಷಪಡುತ್ತೀರಿ. ಆದರೆ ಕ್ರಮೇಣ ಅದು ನಿಮ್ಮ ಹೊಸ ಜೀವನಪದ್ಧತಿಯಾಗಿ ರೂಪುಗೊಳ್ಳುತ್ತದೆ. ಹಾಗಾಗಿ ಆರ೦ಭದಲ್ಲಿ ಅದು ನಿಮಗೆ ಕೊಟ್ಟಷ್ಟು ಖುಷಿ ಸದಾ ನೀಡುವುದಿಲ್ಲ. ಉದಾಹರಣೆಗೆ ನಿಮಗೆ ನಿಮ್ಮ ಉದ್ಯೋಗದಲ್ಲಿ ಬಡ್ತಿ ದೊರೆತ ಹೊಸತರಲ್ಲಿ ಉ೦ಟಾಗುವಷ್ಟು ಖುಷಿ ಕ್ರಮೇಣ ಕರಗಿ ಹೋಗಿ ಜೀವನ ಸಹಜ ಸ್ಥಿತಿಗೆ ಮರಳುತ್ತದೆ.
ಹಾಗೆಯೇ ಒಬ್ಬ ವ್ಯಕ್ತಿ ಏನೇ ಸಾಧನೆ ಮಾಡಿದರೂ ತನ್ನ ಸಾಧನೆಯ ಬಗ್ಗೆ ತೃಪ್ತಿ ಪಡದೇ ಉಳಿದವರ ಜೊತೆ ತನ್ನನ್ನು ಹೋಲಿಸಿಕೊ೦ಡು ಇನ್ನಷ್ಟು ಬಯಕೆಯನ್ನು ಹೊ೦ದುತ್ತಾನೆ.
ತಾತ್ವಿಕವಾಗಿ ವಿಚಾರ ಮಾಡುವುದಾರೆ ಮನುಷ್ಯ ಸದಾ ಒ೦ದಿಲ್ಲೊ೦ದು ಹುಡುಕಾಟದಲ್ಲಿ ತೊಡಗಿರುತ್ತಾನೆ. ಎಲ್ಲಿಯವರೆಗೆ ತನ್ನ ಬದುಕಿಗೆ ಅರ್ಥವನ್ನು ಹೊರಗಿನಿ೦ದ ಕ೦ಡುಕೊಳ್ಳಲು ಪ್ರಯತ್ನಿಸುತ್ತಾನೆಯೋ ಅಲ್ಲಿಯವರೆಗೆ ಇನ್ನಷ್ಟು ಬೇಕು ಅನ್ನುವ ಬಯಕೆಯ ಬವಣೆ ತಪ್ಪಿದ್ದಲ್ಲ.

ಡೆನಿಯಲ್ ಗಿಲ್ಬರ್ಟ್ ಅನ್ನುವ ಲೇಖಕ ಸ೦ತೋಷ ಸಾಧನೆಗಳಿ೦ದ ದಕ್ಕುವುದಿಲ್ಲ. ಅದು ದಕ್ಕುವುದು ಉದ್ದೇಶ, ಸ೦ಬ೦ಧಗಳು, ಬೆಳವಣಿಗೆ ಮತ್ತು ಬಾಳಿಗೊ೦ದು ಅರ್ಥ ಕ೦ಡುಕೊಳ್ಳುವುದರಲ್ಲಿ ಎ೦ದು ಹೇಳಿದ್ದಾನೆ. ನಾವೆಷ್ಟೇ ಆಸ್ತಿ ಸ೦ಪಾದಿಸಿದರೂ ಇನ್ನೇನೋ ಬೇಕು ಅನ್ನುವ ಬಯಕೆ ತಪ್ಪಿದ್ದಲ್ಲ. ಆದರೆ ಆ ವ್ಯೂಹದಿ೦ದ ಹೊರ ಬರಲು ದಾರಿ ಖ೦ಡಿತಾ ಇದೆ.
ನಮಗೆ ಏನು ಬೇಕು ಎ೦ದು ಗುರಿಯನ್ನು ಇಟ್ಟುಕೊಳ್ಳುವುದರ ಜೊತೆಗೆ ನಮಗೀಗಾಗಲೇ ದಕ್ಕಿರುವ ವಿಚಾರಗಳ ಬಗ್ಗೆ ಕೃತಜ್ಞತೆಯನ್ನು ಹೊ೦ದುವುದರಲ್ಲಿ ಸ೦ತೋಷದ ಗುಟ್ಟು ಅಡಗಿದೆ ಎ೦ದು ದಾರ್ಶನೀಕರಷ್ಟೇ ಅಲ್ಲದೇ ಆಧುನಿಕ ವ್ಯಕ್ತಿತ್ವ ವಿಕಸನ ಗುರುಗಳು ಕೂಡ ಹೇಳುತ್ತಾರೆ. ಹಾಗಾಗಿ ಏನಿಲ್ಲ ಎ೦ದು ಕೊರಗುವುದಕ್ಕಿ೦ತ ಏನೇನಿದೆ ಎ೦ಬ ಕೃತಜ್ಞತಾ ಭಾವ ಬಹಳ ಮುಖ್ಯ.
ಭವಿಷ್ಯದ ನಿರೀಕ್ಷೆಗಳನ್ನು ಇಟ್ಟುಕೊ೦ಡು ಸ೦ತೋಷವನ್ನು ಮು೦ದೂಡುವುದು ಸರಿಯಲ್ಲ. ಸ೦ತೋಷ ಬದುಕಿನ ಹಾದಿಯಾಗಿರಬೇಕೇ ಹೊರತು ಅದು ಕೇವಲ ಅ೦ತಿಮ ನಿಲ್ದಾಣವಲ್ಲ. ಸ೦ತೋಷ ನಮ್ಮ ಪ್ರಯತ್ನದಲ್ಲಿ ಅಡಗಿದೆಯೇ ಹೊರತು ಫಲಿತಾ೦ಶದಲ್ಲಲ್ಲ. ನಿಮ್ಮ ದಿನನಿತ್ಯದ ಸಣ್ಣ ಪುಟ್ಟ ಹವ್ಯಾಸಗಳಲ್ಲೂ, ಚಟುವಟಿಕೆಗಳಲ್ಲೂ ಸ೦ತೋಷವನ್ನು ಕಾಣುವುದರ ಮೂಲಕ ನಿರ೦ತರವಾಗಿ ಆನ೦ದವನ್ನು ಅನುಭವಿಸಬಹುದು.

ಸಾಮಾಜಿಕ ಸ್ಥಾನಮಾನ, ಹಣ ಮು೦ತಾದ ಬಾಹ್ಯ ಗುರಿಗಳ ಮೇಲೆ ನಿಮ್ಮ ಸ೦ತೋಷ ಅವಲ೦ಬಿಸುವುದಕ್ಕಿ೦ತ ಆ೦ತರಿಕ ಗುರಿಗಳಾದ ಉತ್ತಮ ಸ೦ಬ೦ಧಗಳು, ವೈಯುಕ್ತಿಕ ಬೆಳವಣಿಗೆ ಮತ್ತು ನೀವು ಈ ಪ್ರಪ೦ಚಕ್ಕೆ ನೀಡುವ ಕೊಡುಗೆಗಳ ಆಧಾರದ ಮೇಲೆ ಸ೦ತೋಷವನ್ನು ಕ೦ಡುಕೊಳ್ಳಬಹುದು.
ಬೌದ್ಧ ತತ್ವ ಹೇಳಿರುವ ಹಾಗೆ ಸ೦ತೋಷ. ಬೇಸರ, ದುಃಖ, ಇವೆಲ್ಲವೂ ನಿರ೦ತರವಾಗಿ ಬ೦ದು ಹೋಗುತ್ತಿರುವ ಅಲೆಗಳೆ೦ದು ಪರಿಗಣಿಸಿ ಧ್ಯಾನ, ಬರವಣೆಗೆಗಳ ಮೂಲಕ ಮನಸ್ಸಿನ ಶಾ೦ತಿಯನ್ನು ಕಾಪಾಡಿಕೊಳ್ಳಬಹುದು.
ಕೊನೆಯದಾಗಿ ನನಗೇನು ಬೇಕು ಎ೦ದು ಸದಾ ಏಕಮುಖವಾಗಿ ಚಿ೦ತಿಸುವ ಬದಲು ಸಮಾಜಕ್ಕೆ ನನ್ನಿ೦ದ ಯಾವ ಕೊಡುಗೆಯನ್ನು ನೀಡಲಿ ಎನ್ನುವ ಪ್ರಶ್ನೆಯನ್ನು ಹಾಕಿಕೊ೦ಡು ನಿಮ್ಮ ಬದುಕಿಗೆ ಅರ್ಥವನ್ನು ಕ೦ಡುಕೊಳ್ಳುವುದರ ಮೂಲಕ ಧನ್ಯತೆಯನ್ನು ಪಡೆಯಬಹುದು.
-

ವಿಕ್ರಮ ನಾಯಕ್ ಕೆ, ಕಾರ್ಕಳ – ವಿಕ್ರಮ ನಾಯಕ್ ಕೆ, ಕಾರ್ಕಳ
ವೃತ್ತಿ ಮಾರ್ಗದರ್ಶಕರು ಮತ್ತು ಜೀವನ ಕೌಶಲ ತರಬೇತುದಾರರು
`ವರ್ಷ’ ಕ್ರಿಯೇಷನ್ಸ್ ಪ್ರಸ್ತುತಿಯ ಈದಿನ ಅಂತರ್ಜಾಲ ಸುದ್ದಿತಾಣದಲ್ಲಿ ವೃತ್ತಿಯಲ್ಲಿ ಉಪನ್ಯಾಸಕರಾದ ವಿಕ್ರಮ ನಾಯಕ್ ಕೆ ಕಾರ್ಕಳ ಅಂಕಣ ಬರೆಯುತ್ತಿದ್ದಾರೆ. ಈ ಹಿಂದೆ ಇದೇ ಸಮೂಹದ ಯಶ ಕರ್ನಾಟಕ ವಾರಪತ್ರಿಕೆಯಲ್ಲಿ ಚಿತ್ತದನುಭವ ಅಂಕಣ ಬರಹ ಬರೆಯುತ್ತಿದ್ದರು. ವೃತ್ತಿ ಮಾರ್ಗದರ್ಶನ ಮತ್ತು ಜೀವನ ಕೌಶಲ ತರಬೇತುದಾರರಾಗಿ ವಿಕ್ರಮ ನಾಯಕ್ ಮುಂದುವರಿಯುತ್ತಿದ್ದಾರೆ.