ಬೆಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಗಷ್ಟ್ 1 ಹಾಗೂ 2ರಂದು ನಡೆಯಲಿರುವ ಬೃಹತ್ ಉದ್ಯೋಗ ಮೇಳ -ಆಳ್ವಾಸ್ ಪ್ರಗತಿಯ ಪೂರ್ವಭಾವಿಯಾಗಿ ಕರಾವಳಿ ಮೂಲದ ಹಾಗೂ ವಿವಿದೆಡೆಯ ವಿವಿಧ ಉದ್ಯೋಗದಾತ ಕಂಪೆನಿಗಳ ಅಧಿಕಾರಿಗಳು ಹಾಗೂ ಹಿರಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರುಗಳ ಸಮಾಗಮ ‘ಕರಾವಳಿ ಕನೆಕ್ಟ್- ಹೆಚ್‌ಆರ್ ಗ್ರೀಟ್ ಅಂಡ್ ಮೀಟ್’ ಶನಿವಾರ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆಯಿತು.

ಅಧ್ಯಕ್ಷತೆವಹಿಸಿ ಮಾತನಾಡಿದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಾ ಎಂ ವೀರಪ್ಪ ಮೊಯಿಲಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕಳೆದ ಎರಡು ದಶಕಗಳಿಂದ ನಡೆಸಿಕೊಂಡು ಬರುತ್ತಿರುವ ಬಹೃತ್ ಉದ್ಯೋಗಮೇಳದಿಂದಾಗಿ ಗ್ರಾಮೀಣ ಭಾಗದ ಪ್ರತಿಭಾನ್ವಿತ ಯುವಕ ಯುವತಿಯರು ಕಂಪೆನಿಗಳಲ್ಲಿ ಕೆಲಸಗಿಟ್ಟಿಸುವಂತಾಗಿದೆ. ಬರಡು ಭೂಮಿಯಾಗಿದ್ದ ವಿದ್ಯಾಗಿರಿಯನ್ನು ಇಂದು ಶಿಕ್ಷಣಕಾಶಿಯನ್ನಾಗಿಸಿದ ಕೀರ್ತಿ ಡಾ ಎಮ್ ಮೋಹನ್ ಆಳ್ವರಿಗೆ ಸಲ್ಲುತ್ತದೆ. ಅವರು ಮಾನವ ನಿರ್ಮಾಣದ ಶಿಲ್ಪಿ. ಇಂದು ಅವರ ಮಗ ವಿವೇಕ್‌ಆಳ್ವ ಶಿಕ್ಷಣಕಾಶಿಯಲ್ಲಿ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳುವ ಮೂಲಕ ಸಾವಿರಾರು ಜನರ ಬದುಕಿಗೆ ದಾರಿದೀಪವಾಗಿದ್ದಾರೆ ಎಂದು ಬಣ್ಣಿಸಿದರು.
ಪ್ರತಿಭೆ ಗುರುತಿಸಿ: ಡಾ ಮೊಯಿಲಿ
ಪ್ರತಿಭೆ ಪ್ರತಿಯೊಬ್ಬರಲ್ಲೂ ಅಡಗಿರುತ್ತದೆ. ಅದನ್ನು ಗುರುತಿಸಿ, ಪೋಷಿಸುವ ಕೆಲಸವನ್ನು ಮಾಡಬೇಕು. ಅದರಲ್ಲೂ ಮುಖ್ಯವಾಗಿ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರುಗಳು ವ್ಯಕ್ತಿಯ ಮುಖನೋಡಿ ಮಣೆ ಹಾಕದೆ, ಪ್ರತಿಭೆಯ ಆಧಾರದಲ್ಲಿ ಕೆಲಸ ನೀಡಬೇಕು. ಸಾಧಿಸುವ ಹಸಿವಿರುವವರನ್ನು ಗುರುತಿಸಬೇಕು ಎಂದು ಸಲಹೆ ನೀಡಿದರು. ಜೀವನದಲ್ಲಿ ಬರುವ ಸನ್ನವೇಶಗಳನ್ನು ರ‍್ಯದಿಂದ ಎದುರಿಸಬೇಕು. ಸಮಾಜಕ್ಕೆ ನಮ್ಮಿಂದಾಗುವ ಸಹಾಯವನ್ನು ಪ್ರತಿಯೊಬ್ಬರೂ ಮಾಡಬೇಕು. ತಾನು ಮುಖ್ಯಮಂತ್ರಿಯಾಗಿದ್ದ ಸಂಧರ್ಭದಲ್ಲಿ ಅನೇಕಲ್ ತಾಲೂಕಿನಲ್ಲಿ ಐಟಿ ಕಂಪೆನಿಗಳನ್ನು ಸ್ಥಾಪಿಸಿದ್ದರಿಂದ ಇಂದು ಬೆಂಗಳೂರು ಪ್ರಪಂಚದ ಸಿಲಿಕಾನ್ ವ್ಯಾಲಿಯಾಗಿ ಮಾರ್ಪಡಾಯಿತು. ವೈಟ್‌ಫೀಲ್ಡನಲ್ಲಿ ಇಂಟರನ್ಯಾಷನಲ್ ಟೆಕ್ ಪಾರ್ಕ ಸ್ಥಾಪಿಸಿದ್ದರಿಂದ ಅಭೂತಪೂರ್ವ ಬೆಳವಣಿಗೆ ಸಾಧ್ಯವಾಯಿತು. ಕಂಪೆನಿ ಕಾನೂನಿನಲ್ಲಿ ತಿದ್ದುಪಡಿ ತಂದು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯನ್ನು ಪ್ರತಿ ಕಾರ್ಪೋರೇಟ್ ಕಂಪೆನಿಗಳಿಗೆ ಕಡ್ಡಾಯಗೊಳಿಸಿದ್ದರಿಂದ,ಅದು ಇಂದು ದೊಡ್ಡ ಯಶಸ್ಸಾಗಿ ಮಾರ್ಪಟ್ಟಿದೆ. ಪ್ರತಿಷ್ಠಿತ ಕಂಪೆನಿ ಕಿರ್ಲೋಸ್ಕರ್‌ಗಾಗಿ ತೆರಿಗೆ ವ್ಯವಸ್ಥೆಯಲ್ಲಿ ತಂದ ಸಣ್ಣ ಬದಲಾವಣೆಯಿಂದಾಗಿ ಕರ್ನಾಟಕದಲ್ಲಿ ಉಳಿಯುವಂತಾಯಿತು ಎಂದರು.

ಮುಖ್ಯ ಅತಿಥಿಯ ನೆಲೆಯಲ್ಲಿ ಮಾತನಾಡಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ರಾಜ್ಯದ ರಾಜಧಾನಿಯಲ್ಲಿ ಕರಾವಳಿ ಕನೆಕ್ಟ್ ಎಂಬ ರ‍್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಕರಾವಳಿ ಭಾಗದ ಜನರ ಉದ್ಯೋಗದ ಕನಸುಗಳನ್ನು ನನಸಾಗಿಸುತ್ತಿದೆ. ಕರಾವಳಿಯು ಅದ್ಭುತ ಸಾಮಾರ್ಥ್ಯವನ್ನು ಹೊಂದಿರುವ ಪ್ರದೇಶ. ಈ ಸಾಧ್ಯತೆಯನ್ನು ನಾವೆಲ್ಲರೂ ಸೇರಿ ಸಾಕರಗೊಳಿಸುವ ಕೆಲಸಮಾಡಬೇಕಿದೆ. ತಾನು ಲೋಕಸಭಾ ಸದಸ್ಯನಾದ ನಂತರ ಹಮ್ಮಿಕೊಂಡ ‘ಬ್ಯಾಕ್ ಟು ಊರು’ ಅಭಿಯಾನ ಜಗತ್ತಿನದ್ಯಾಂತ ಹರಡಿರುವ ಕರಾವಳಿಗರು ತಮ್ಮ ಊರಿನಲ್ಲಿ ಉದ್ಯಮವನ್ನು ಸ್ಥಾಪಿಸಲು ಪ್ರೇರೆಪಿಸುವ ರ‍್ಯಕ್ರಮ ಯಶಸ್ವಿಗೊಂಡಿದ್ದು, ಈಗಾಗಲೇ ಜರ್ಮನಿ ಹಾಗೂ ಇಟೆಲಿ ಮೂಲದ ಎರಡು ಕಂಪೆನಿಗಳು ಮಂಗಳೂರಿನಲ್ಲಿ ಸುಮಾರು ೧೦೦೦ ಕೋಟಿಯಷ್ಟು ಹೂಡಿಕೆ ಮಾಡಿವೆ. ಇಂತಹ ಯೋಜನೆಗಳು ಹೆಚ್ಚು ಸಂಖ್ಯೆಯಲ್ಲಿ ಮೂಡಿಬರಬೇಕು. ಆ ಮೂಲಕ ಕರಾವಳಿಯು ಅಭಿವೃದ್ಧಿಯಲ್ಲಿ ಅಗ್ರಪಂಕ್ತಿಯ ಸ್ಥಾನ ಪಡೆಯುವಂತಾಗಬೇಕು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ ಆಳ್ವ ಕರಾವಳಿಯ ಮಹಾತ್ವಾಕಾಂಕ್ಷೆಯ ಸಂಪರ್ಕಕ್ಕಾಗಿ ಈ ಕರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರ ಮೂಲಕ ಆಳ್ವಾಸ್ ಪ್ರಗತಿ ಉದ್ಯೋಗಮೇಳ ದೊಡ್ಡ ಯಶಸ್ವಿ ಮೇಳವಾಗಿ ಮೂಡಿಬರಲಿದೆ. ಈ ಬಾರಿಯ ಉದ್ಯೋಗ ಮೇಳದಲ್ಲಿ ೩೦೦೦ ಐಟಿ ೪೦೦೦ ಪದವಿ ೨೦೦೦ ಸ್ನಾತಕೋತ್ತರ, ೨೫೦೦ ಡಿಪ್ಲೋಮಾ ಹಾಗೂ ೧೫೦೦ ನರ್ಸಿಂಗ್ ಆಕಾಂಕ್ಷಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಈ ಬೇಡಿಕೆಯನ್ನು ಇಡೇರಿಸಲು ನೆರೆದಿದ್ದ ಎಲ್ಲರ ಸಹಕಾರ ಅಪೇಕ್ಷಿಸಿದರು. ನಂತರ ಔದ್ಯೋಗಿಕವಲಯದ ಬೇಡಿಕೆ ಮತ್ತು ಆಕಾಂಕ್ಷೆಗಳ ಕುರಿತು ಮಾಹಿತಿ ಪಡೆದರು.
ಅದಾನಿ ಗ್ರೂಪ್‌ನ ಕಿಶೋರ್ ಆಳ್ವ ಮಾತನಾಡಿ, ದಕ್ಷಿಣ ಕನ್ನಡದವರೂ ಸದಾ ಪರಾಕ್ರಮಶಾಲಿಗಳು. ತೊಡಗಿಕೊಂಡ ಕೆಲಸದಲ್ಲಿ ಸದಾ ಯಶಸ್ವಿಯಾಗುತ್ತಾರೆ. ಕರಾವಳಿಯು ಎಲ್ಲಾ ರೀತಿಯ ಸಂಪನ್ಮೂಲದಿ೦ದ ಕೂಡಿರುವುದರಿಂದ ಕರ್ನಾಟಕದ ಐಟಿ ಹಬ್ ಆಗುವಂತೆ ನಾವೆಲ್ಲ ಶ್ರಮಿಸಬೇಕು ಎಂದರು. ಈ ನಿಟ್ಟಿನಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ವಿವಿಧ ಕಂಪೆನಿಗಳ ೮೫ಕ್ಕೂ ಅಧಿಕ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಪಾಲ್ಗೊಂಡರು.
ಸುಕೇಶ್ ಶೆಟ್ಟಿ ನಿರೂಪಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಉದ್ಯೋಗ ಹಾಗೂ ತರಬೇತಿ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.