ನಿರಾಶೆ ಮೂಡಿಸುವ ಸೊರಗಿದ ಜೋಗ…!

ಶಿವಮೊಗ್ಗ: ಜಗತ್ ಪ್ರಸಿದ್ಧಿಯ ಜೋಗ ಜಲಪಾತ ನೀರಿಲ್ಲದೆ ಸೊರಗಿದೆ. ಜೋಗದ ವೈಭವವನ್ನು ನೋಡಲು ದೂರದೂರುಗಳಿಂದ ಜನ ಪ್ರತಿನಿತ್ಯ ಆಗಮಿಸುತ್ತಿದ್ದಾರೆ. ಈ ಹಿಂದೆ ಇದ್ದ ಅಬ್ಬರದ, ರಾಜ ಗಾಂಭೀರ್ಯದ ಜೋಗದ ವೈಭವ ಕಾಣದೆ ಪ್ರವಾಸಿಗರು ಬೇಸರದಿಂದ ಮರಳುತ್ತಿದ್ದಾರೆ.

ಜೋಗ ಜಲಪಾತ ನೀರಿಲ್ಲದೆ ಸೊರಗಿದೆ

ಜೋಗ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರು ಹರ ಸಾಹಸ ಪಡುವಂತಾಗಿದೆ. ಅಭಿವೃದ್ಧಿಯ ನೆಪದಲ್ಲಿ ಜೋಗದಲ್ಲಿ ಪ್ರವಾಸಿಗರಿಗೆ ಸರಿಯಾದ ವ್ಯವಸ್ಥೆ ಇಲ್ಲವಾಗಿದೆ. ಪಾರ್ಕಿಂಗಿಗಾಗಿ ಹರಸಾಹಸ. ಜೋಗದ ಜಲಪಾತ ವೀಕ್ಷಣೆಗೆ ಹೋಗುವ ಮಂದಿ ದುಡ್ಡು ಕೊಟ್ಟು ಟಿಕೆಟ್ ಖರೀದಿಸಬೇಕು. ಸರಿಯಾದ ವ್ಯವಸ್ಥೆಯಿಲ್ಲದೆ, ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲದೆ, ಸೊರಗಿದ ಜೋಗ ನೋಡಿ ತೆರಳುವಂತಹ ಪರಿಸ್ಥಿತಿ. ಬೆಂಗಳೂರಿನಿ೦ದ ೪೦೦ ಕಿ.ಮೀ ದೂರದಲ್ಲಿರುವ ಶಿವಮೊಗ್ಗ ಜಿಲ್ಲೆಯ ಜೋಗದಲ್ಲಿನ ಜಲಪಾತ ಭಾರತದ ಎರಡನೇ ಅತಿ ಎತ್ತರದ ಜಲಪಾತವಾಗಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಜಲಪಾತ ಇದಾಗಿದ್ದು ಶರಾವತಿ ನದಿ ಇಲ್ಲಿ ಬಂಡೆಗಳ ಮೇಲಿನಿಂದ ೨೫೩ ಮೀಟರ್ ಆಳಕ್ಕೆ ಧುಮ್ಮಿಕ್ಕುವ ಅದ್ಭುತ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲವು.

ಶರಾವತಿ ನದಿ ಜೋಗದಲ್ಲಿ ರಾಜ, ರೋರರ್, ರಾಕೆಟ್ ಮತ್ತು ರಾಣಿ ಎಂಬ ನಾಲ್ಕು ಪ್ರಮುಖ ಜಲಪಾತಗಳನ್ನು ಸೃಷ್ಟಿಸುತ್ತದೆ. ಕನ್ನಡದ ಹಲವು ಹಾಡು, ಚಲನಚಿತ್ರಗಳಲ್ಲಿ ಜೋಗ ಜಲಪಾತದ ಉಲ್ಲೇಖವಿದೆ. “ಜೋಗದ ಸಿರಿ ಬೆಳಕಿನಲ್ಲಿ” ಎಂದು ಪ್ರಾರಂಭಗೊಳ್ಳುವ ನಿತ್ಯೋತ್ಸವ ಕವಿತೆ, “ಇರೋದ್ರೊಳಗೆ ಒಮ್ಮೆ ನೋಡು ಜೋಗದ್ ಗುಂಡಿ” ಜೀವನ ಚೈತ್ರ ಚಿತ್ರದ ಹಾಡು ಇವುಗಳಲ್ಲಿ ಪ್ರಮುಖವಾದುದು. ಮುಂಗಾರು ಮಳೆ ಸಿನೆಮಾದಲ್ಲಿ ಜೋಗ ಜಲಪಾತದ ರಮಣೀಯ ದೃಶ್ಯಗಳಿವೆ. ಆದರೆ ಅಂತಹ ರುದ್ರ ರಮಣೀಯ ಸೌಂದರ್ಯದ ಜೋಗ ಇಂದು ನೀರಿಲ್ಲದೆ ಸೊರಗುತ್ತಿದೆ. ಜೋಗದ ಛಾಯಾಚಿತ್ರಗಳನ್ನು ಸೆರೆಹಿಡಿಯುವ, ಪ್ರವಾಸಿಗರಿಗೆ ಜೋಗದ ಫೋಟೋ ಸೆರೆಹಿಡಿದು ನೀಡುವ ಸ್ಥಳೀಯ ಫೋಟೋಗ್ರಾಫರ್‌ಗಳ ಕ್ಯಾಮೆರಾದೊಳಗೆ ಮಾತ್ರ ಅಂತಹ ವೈಭವ ಕಾಣಸಿಗುತ್ತಿವೆ!

Share

Leave a Reply

Your email address will not be published. Required fields are marked *