ಫೆ. 28ರಿಂದ ಮಾ. 7ರವರೆಗೆ ಪುತ್ತಿಗೆಯ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ
ಮೂಡುಬಿದಿರೆ: ಫೆ. 28ರಿಂದ ಮಾ. 7ರವರೆಗೆ ಪುತ್ತಿಗೆಯ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಜರಗಲಿರುವ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಬಗ್ಗೆ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಚೌಟರ ಅರಮನೆಯ ಕುಲದೀಪ್ ಎಂ. ಅವರು ಪತ್ರಿಕಾಗೋಷ್ಠಿ ನಡೆಸಿದರು.
ವಿವರಗಳನ್ನು ನೀಡಿದ ಕುಲದೀಪ್ ಎಂ. ಅವರು ಸುಮಾರು ರೂ. 16 ಕೋಟಿ ವೆಚ್ಚದಲ್ಲಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ನಡೆಸಲಾಗಿದೆ. ವಾಸ್ತುತಜ್ಞ ಅವಧಾನಿ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಅವರ ಮಾರ್ಗದರ್ಶನದಲ್ಲಿ ಶಿಲ್ಪಶಾಸ್ತ್ರಜ್ಞ ಎಲ್ಲೂರು ವಿಷ್ಣುಮೂರ್ತಿ ಭಟ್ ಅವರು ಅತ್ಯಂತ ಸುಂದರವಾಗಿ ದೇವಾಲಯದ ಪುನರ್ ನಿರ್ಮಾಣ ಮಾಡಿದ್ದಾರೆ. ಪ್ರಾಚೀನ ಶೈಲಿಯಲ್ಲಿ ಕಾಷ್ಠಶಿಲ್ಪ ಕೆತ್ತನೆಯ ಕಾರ್ಯ ಕಲ್ಲಮುಂಡ್ಕೂರು ನಾರಾಯಣ ಆಚಾರ್ಯ ಅವರ ತಂಡದಿಂದ ನಡೆದಿದೆ. ದೇವಸ್ಥಾನ ಪ್ರವೇಶಿಸಲು ಎರಡು ಮುಖ್ಯ ದ್ವಾರಗಳಿದ್ದು ಉತ್ತರ ಮತ್ತು ದಕ್ಷಿಣ ದಿಕ್ಕುಗಳಲ್ಲಿಯೂ ಪ್ರತ್ಯೇಕ ಬಾಗಿಲುಗಳು ಇರುವುದರಿಂದ ಭಕ್ತಾದಿಗಳ ಸಂಖ್ಯೆ ಎಷ್ಟೇ ದೊಡ್ಡದಿದ್ದರೂ ದೇವರ ದರ್ಶನಕ್ಕೆ ಅಡಚಣೆಯಾಗಲಿಕ್ಕಿಲ್ಲ ಎಂದರು. ಸುಮಾರು 15 ಲಕ್ಷ ವೆಚ್ಚದಲ್ಲಿ ಪುತ್ತಿಗೆಯ ಜನರ ಆರಾಧ್ಯ ದೈವ ಪಂಚ ಧೂಮಾವತಿ ಮತ್ತು ಪರಿವಾರ ದೈವಗಳ ಸ್ಥಾನಗಳನ್ನೂ ನವೀಕರಿಸಿ ಅಲ್ಲಿ ದೈವ ಬಿಂಬಗಳ ಪುನರ್ ಪ್ರತಿಷ್ಟೆ ನಡೆಸಲಾಗಿದೆ ಎಂದರು.
ಫೆ. 28ರಂದು ನಡೆಯುವ ಅಭೂತಪೂರ್ವ ಹೊರೆಕಾಣಿಕೆ ಮೆರವಣಿಗೆಯಲ್ಲಿ ದೇವಸ್ಥಾನದ ಪಲ್ಲಕಿ, ಮುಗುಳಿ, ದೈವದ ಮಂಚ ಹಾಗೂ ಸ್ವರ್ಣ ಶಿರ ಕಲಶ ಸಾಗಿಬರಲಿದ್ದು, 500ಕ್ಕೂ ಹೆಚ್ಚು ಪೂರ್ಣಕುಂಭ ಕಲಶ ಹೊತ್ತ ಸುಮಂಗಲಿಯರು, ಚೆಂಡೆ, ಭಜನೆ ಕುಣಿತ ತಂಡಗಳ ಸದಸ್ಯರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದರಲ್ಲದೆ ದೇವಸ್ಥಾನದಲ್ಲಿ ಒಟ್ಟು 10 ಸೇವಾ ಕೌಂಟರ್ ಗಳು ತೆರೆಯಲಿದ್ದು 2 ಸಾವಿರ ವಾಹನಗಳಿಗೆ ಏಕ ಕಾಲದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಸುಮಾರು 30ಸಾವಿರ ಆಮಂತ್ರಣ ಪತ್ರಿಕೆಗಳನ್ನು ಇದುವರೆಗೆ ಹಂಚಲಾಗಿದ್ದು, ಒಟ್ಟು 1 ಲಕ್ಷ ಭಕ್ತಾದಿಗಳು ಬ್ರಹ್ಮಕಲಶೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ದೇವಸ್ಥಾನದ ಪೂರ್ವ ದಿಕ್ಕಿನಲ್ಲಿರುವ ಅಂಗಣಿಮಾರು ಗದ್ದೆಯಲ್ಲಿ ಸುಮಾರು 1 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಪೆಂಡಾಲ್ ನಿರ್ಮಿಸಲಾಗಿದ್ದು ಅಲ್ಲಿ ಪಾಕಶಾಲೆ, ಉಗ್ರಾಣ, ಅನ್ನ ಪ್ರಸಾದ ವಿತರಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಿಗ್ಗೆ ಮತ್ತು ಸಂಜೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಅನ್ನ ಪ್ರಸಾದ ವಿತರಣೆ ನಡೆಯಲಿದೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿ ಕೆ. ಶ್ರೀಪತಿ ಭಟ್ ಅವರು ಮಾತನಾಡಿ ಅತ್ಯಂತ ಪ್ರಾಚೀನ ಇತಿಹಾಸವಿರುವ ಶ್ರೀ ಕ್ಷೇತ್ರ ಪುತ್ತಿಗೆಯ ಸಮಗ್ರ ಜೀರ್ಣೋದ್ಧಾರದಲ್ಲಿ ವಿವಿಧ ದಾನಿಗಳಲ್ಲದೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕರಸೇವಕರು ಕೈ ಜೋಡಿಸಿದ್ದಾರೆ. ಬ್ರಹ್ಮಕಲಶೋತ್ಸವವು ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಲಿದ್ದು ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುವ ಎಲ್ಲಾ ಭಕ್ತಾದಿಗಳು ಶಾಂತಚಿತ್ತರಾಗಿ ದೇವರ ದರ್ಶನ ಮತ್ತು ಪ್ರಸಾದ ಸ್ವೀಕರಿಸಲು ಅನುಕೂಲವಾಗುವಂತೆ ಸರ್ವ ರೀತಿಯ ಸಿದ್ಧತೆ ನಡೆಸಲಾಗಿದೆ ಎಂದರು.
ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಪುತ್ತಿಗೆಗುತ್ತು ಕೊಲಕಾಡಿ ನೀಲೇಶ್ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರುಗಳಾದ ಎಂ.ಸಿ.ಎಸ್. ಬ್ಯಾಂಕ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಕುಂಗೂರು ಶಿವಪ್ರಸಾದ್ ಆಚಾರ್, ಕಾರ್ಯದರ್ಶಿಗಳಾದ ನಡಿಗುತ್ತು ವಿದ್ಯಾ ರಮೇಶ್ ಭಟ್, ವಾದಿರಾಜ ಮಡ್ಮಣ್ಣಾಯ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಯತಿರಾಜ ಶೆಟ್ಟಿ ಸ್ವಾಗತಿಸಿದರು.