ಪ್ರೆಸ್ ಸ್ಟಿಕ್ಕರೂ…ನನ್ನ ಸೈಕಲ್ಲೂ!
ಕಾರಿನಲ್ಲಿ `ಪ್ರೆಸ್’ ಸ್ಕಿಕ್ಕರ್ ಹಾಕಿ ಬಂದಿಳಿದ ವ್ಯಕ್ತಿಯನ್ನು ಗೌರವದಿಂದ ಕಂಡ ಘಟನೆ ಮನದಲ್ಲಿ ಅಚ್ಚಾಗಿಯೇ ಉಳಿದಿತ್ತು… ನನಗೂ ಒಂದಲ್ಲಾ ಒಂದು ದಿನ ದೊಡ್ಡ ಕಾರು, ಪ್ರೆಸ್ ಸ್ಟಿಕ್ಕರ್, ಬಿಳಿಯಂಗಿ, ಕಪ್ಪು ಪ್ಯಾಂಟ್ ಧರಿಸಿ ಅದೇ ಸಂಘಟಕರ ಮುಂದೆ ಹೋಗಲೇ ಬೇಕು ಎಂಬ ದೃಢವಾದ ನಿರ್ಧಾರ ಮತ್ತೆ ಮತ್ತೆ ಮನದಲ್ಲಿ ಮೂಡುತ್ತಿತ್ತು. ನಾನದನ್ನು ಒಂದು ಡೈರಿಯಲ್ಲಿ ದಾಖಲಿಸಿದ್ದೆ. ೨೦೨೦ರ ಜನವರಿ ೧ರಂದು ನಾನು ದೊಡ್ಡ ಕಾರು ಖರೀದಿಸುತ್ತೇನೆ ಎಂದು ಅಂದೇ ಬರೆದಿದ್ದೆ!. ಅಬ್ಬ… ಇಪ್ಪತ್ತು ವರುಷ ನಂತರ ಮಾಡಬೇಕಾದ ಕೆಲಸವನ್ನು ಬರೆದು ನಿಟ್ಟುಸಿರು ಬಿಟ್ಟಾಗ ಒಂದು ಸಂತೃಪ್ತಿಯ ಭಾವನೆ. ನಾನು ಕಾರು ತೆಗೆದೇ ಬಿಟ್ಟೆ ಎಂಬ0ತಹ ಸಂತಸ!. ಸತ್ಯ ಹೇಳಬೇಕಾದರೆ ಆ ಸಂದರ್ಭದಲ್ಲಿ ನನ್ನಲ್ಲೊಂದು ಸೈಕಲ್ಲು ಕೂಡಾ ಇದ್ದಿರಲಿಲ್ಲ!
ನಾನು ಶಾಲೆಗೆ ಹೋಗುತ್ತಿರುವ ಸಮಯವದು. ಅರೆಕಾಲಿಕ ಪತ್ರಕರ್ತನಾಗಿಯೇ ಇದ್ದೆ. ಆಗ ಬೆಳ್ತಂಗಡಿ ತಾಲೂಕಿನ ಕಾಶೀ ಬೆಟ್ಟಿನಲ್ಲಿ ನನ್ನ ವಾಸ್ತವ್ಯವಿತ್ತು. ಉಜಿರೆಯ ಎಸ್.ಡಿ.ಎಂ. ಶಾಲೆಯಲ್ಲಿ ಮೂರು ವರುಷ ನನ್ನ ವ್ಯಾಸಂಗ. ಉಜಿರೆಯಿಂದಲೇ ಪ್ರಕಟಗೊಳ್ಳುತ್ತಿದ್ದ ಪಶ್ಚಿಮ ಘಟ್ಟದ ದೀವಟಿಗೆ ಎಂಬ ಪತ್ರಿಕೆಗೆ ವ್ಯಂಗ್ಯಚಿತ್ರ, ಚುಟುಕು ಕಳಿಸುತ್ತಿದ್ದೆ. ಆ ಸಂದರ್ಭದಲ್ಲಿ ಬೆಳ್ತಂಗಡಿಯಿ0ದ `ಸುದ್ದಿ ಬಿಡುಗಡೆ’ ವಾರ ಪತ್ರಿಕೆ ಹೊರಬರುತ್ತಿತ್ತು. ಅಪ್ಪ, ಅಮ್ಮ, ಅಕ್ಕ ನಿರಂತರವಾಗಿ ಪತ್ರಿಕೆಗೆ ಬರೆಯುತ್ತಿದ್ದರು. ಅವರ ಹೆಸರು ಹೊಂದಿದ ಬರಹಗಳು ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಲೇ ಇತ್ತು. ಪತ್ರಿಕೆಯಿಂದ ಗೌರವ ಪ್ರತಿಗಳು, ಎಂ.ಒ(ಮನಿ ಓರ್ಡರ್) ಅವರಿಗೆ ನಿಯಮಿತವಾಗಿ ಬರುತ್ತಲೇ ಇದ್ದವು. ನನಗೂ ಬರೆಯಬೇಕೆಂಬ ತುಡಿತ. ನಾನೂ ಕೆಲವು ಬರಹಗಳನ್ನು, ಚುಟುಕು, ಕವನಗಳನ್ನು ವಿವಿಧ ಪತ್ರಿಕೆಗಳಿಗೆ ಕಳುಹಿಸುತ್ತಿದ್ದೆ. ಬೆಳ್ತಂಗಡಿಯ ಸುದ್ದಿ ಬಿಡುಗಡೆ, ತರಂಗ, ಸುಧಾ, ಮಂಗಳ, ಉದಯವಾಣಿಗಳಲ್ಲಿ ನನ್ನ ನುಡಿಚಿತ್ರ, ವ್ಯಂಗ್ಯಚಿತ್ರ, ಚುಟುಕುಗಳು ಪ್ರಕಟಗೊಳ್ಳಲಾರಂಭಿಸಿದ್ದವು. ಹೈಸ್ಕೂಲು ಮುಗಿಯುವಷ್ಟರಲ್ಲಿ ಸುದ್ದಿ ಬಿಡುಗಡೆ ಪತ್ರಿಕೆಯ ದೀಪಾವಳೀ ವಿಶೇಷಾಂಕಕ್ಕೆ ನಾನು ಪ್ರವಾಸಕಥನಗಳನ್ನು ಬರೆದು ಕಳುಹಿಸಿದ್ದೆ. ಒಂದಷ್ಟು ನುಡಿಚಿತ್ರಗಳನ್ನು ನಿರಂತರವಾಗಿ ಕಳುಹಿಸುತ್ತಿದ್ದೆ. ಅವೆಲ್ಲವನ್ನೂ ಯಥಾವತ್ತಾಗಿ ಪತ್ರಿಕೆಯಲ್ಲಿ ಪ್ರಕಟಿಸುತ್ತಾ ನನ್ನನ್ನು ಪ್ರೋತ್ಸಾಹಿಸುತ್ತಿದ್ದರು. ನನ್ನ ಹೆಸರೂ ಪತ್ರಿಕೆಯಲ್ಲಿ ಅಚ್ಚಾಗತೊಡಗಿದಾಗ ಆಗುತ್ತಿದ್ದ ಖುಷಿಯನ್ನು ವರ್ಣಿಸಲು ಸಾಧ್ಯವೇ ಇಲ್ಲ!.
ನನಗೂ ಸೈಕಲ್ ಬಂತು!: ಮೂಲತಃ ಗಡಿನಾಡು ಕಾಸರಗೋಡಿನ ಆದೂರು ನಮ್ಮ ಊರು. ನನ್ನಪ್ಪ ಹೈಸ್ಕೂಲ್ ಮೇಸ್ಟಾçಗಿದ್ದರು. ಅಡೂರು,ಆದೂರು, ಪಾಂಡಿ ಹೀಗೆ ಹಲವು ಶಾಲೆಗಳಲ್ಲಿ ಶಿಕ್ಷಕರಾಗಿ, ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಆದೂರಿನಲ್ಲಿರುವಾಗಲೇ ನನಗೆ ಸೆಕೆಂಡ್ ಹ್ಯಾಂಡ್ ಸೈಕಲ್ ಇತ್ತು. ಆದೂರಿನಿಂದ ಬೆಳ್ತಂಗಡಿಗೆ ಬಂದಾಗ ಆ ಸೈಕಲ್ ನೀಡಿ ಮತ್ತೊಂದು ಹಳೆಯ ಸೈಕಲ್ ಖರೀದಿಸಿ ನನಗೆ ನನ್ನಪ್ಪ ನೀಡಿದರು. ಅದನ್ನು ಒಂದಷ್ಟು ತಿಂಗಳು ಬಳಸಿದ ನಂತರ ದೊಡ್ಡ ಸೈಕಲ್ ಬೇಕೆಂದು ಮತ್ತೆ ಸೈಕಲ್ ಬದಲಾಯಿಸಿದೆ. ಅದೂ ಸೆಕೆಂಡ್ ಹ್ಯಾಂಡ್ ದೊಡ್ಡ ಸೈಕಲ್. ಆ ಸೈಕಲ್‌ನಲ್ಲಿ ಡೈನಾಮೋ, ಹೆಡ್ ಲೈಟ್ ಎಲ್ಲವೂ ಇತ್ತು. ಸುಮಾರು ಒಂದು ವರುಷಗಳ ಕಾಲ ಆ ಸೈಕಲ್ ಬಳಸಿದ ನಂತರ ಅದನ್ನೂ ಮಾರಾಟ ಮಾಡಿದೆ. ಅಷ್ಟೊತ್ತಿಗಾಗಲೇ ನನ್ನ ಹೈಸ್ಕೂಲ್ ಜೀವನ ಮುಗಿದಿತ್ತು. ಅದೇ ಸಮಯಕ್ಕೆ ಕಾಶೀಬೆಟ್ಟು ಬಿಟ್ಟು ಹೊಸಂಗಡಿಯತ್ತ ನಾವು ಬಂದೆವು. ಎರಡು ತಿಂಗಳ ರಜೆಯ ಸಮಯದಲ್ಲಿ ನಿರಂತರವಾಗಿ ಸುದ್ದಿ ಬಿಡುಗಡೆ ಪತ್ರಿಕೆಗೆ ವೇಣೂರು ಪೆರಿಂಜೆ ಭಾಗದ ಸುದ್ದಿಗಳನ್ನು, ವಿಶೇಷ ವರದಿಗಳನ್ನು ಬರೆದು ಕಳುಹಿಸತೊಡಗಿದೆ.
ನಾನು ಬರೆದ ಪ್ರತಿಯೊಂದು ಲೇಖನ, ವರದಿಗಳನ್ನು ನನ್ನ ಹೆಸರು ಸಮೇತ ಪ್ರಕಟಿಸುತ್ತ ಪ್ರೋತ್ಸಾಹ ನೀಡಿದರು. ಆ ಪ್ರದೇಶದ ಗೌರವ ವರದಿಗಾರನಾಗಿಯೂ ನನಗೆ ಅವಕಾಶ ನೀಡಿದರು. ಅದಾಗಿ ಸ್ವಲ್ಪ ಸಮಯದಲ್ಲೇ ವೇಣೂರು ಎಸ್.ಡಿ.ಎಮ್ ಐಟಿಐಯಲ್ಲಿ ನನಗೆ ಎಂ.ಆರ್.ಎ0ಡ್ ಎ.ಸಿ ವಿಭಾಗದಲ್ಲಿ ಪ್ರವೇಶ ಲಭ್ಯವಾಯಿತು. ಕಲಿಕೆಯ ಜೊತೆಯಲ್ಲಿಯೇ ಪತ್ರಿಕೆಯ ವರದಿಗಾರಿಕೆ ಮುಂದುವರಿಸಿದೆ. ವೇಣೂರು ಭಾಗದಲ್ಲಿ, ಹೊಸಂಗಡಿ, ಪೆರಿಂಜೆ ಭಾಗದಲ್ಲಿ ನಡೆಯುವ ಕಾರ್ಯಕ್ರಮಗಳ ವರದಿ, ಸಂದರ್ಶನ ಬರಹಗಳು, ವಿಶೇಷ ಲೇಖನಗಳು, ನುಡಿಚಿತ್ರಗಳು ಯತೇಚ್ಚವಾಗಿ ಪ್ರಕಟಗೊಂಡವು. ಒಂದೇ ಪತ್ರಿಕೆಯಲ್ಲಿ ಎರಡು ಮೂರು ಬೈಲೈನ್ ಪಡೆದದ್ದೂ ಇದೆ!. ಇವೆಲ್ಲವೂ ಆಗುತ್ತಿದ್ದಂತೆಯೇ ಬೆಳ್ತಂಗಡಿಯಿ0ದ ಜೈ ಕನ್ನಡಮ್ಮ ಪತ್ರಿಕೆ ಹೊರಬರಲಾರಂಭಿಸಿತು. ಪಾಕ್ಷಿಕ ಪತ್ರಿಕೆಯಾಗಿ ಆರಂಭದಲ್ಲಿ ಮೂಡಿಬಂದ ಜೈಕನ್ನಡಮ್ಮ, ನಂತರ ವಾರ ಪತ್ರಿಕೆಯಾಯಿತು. ತರಂಗದ0ತೆ ಪುಸ್ತಕ ರೂಪದಲ್ಲಿ ಹೊರಬರುತ್ತಿದ್ದ ಪತ್ರಿಕೆ ನಂತರ ಟ್ಯಾಬ್ಲಾಯ್ಡ್ ಆಕಾರ ಪಡೆದುಕೊಂಡು, ಇದೀಗ ದಿನಪತ್ರಿಕೆಗಳ ಗಾತ್ರದಲ್ಲಿಯೇ ಪ್ರಕಟಗೊಳ್ಳುತ್ತಾ ಬಂದಿದೆ. ಎರಡನೇ ಸಂಚಿಕೆಯಲ್ಲಿಯೇ ನನ್ನ ಚುಟುಕು ಹಾಗೂ ವ್ಯಂಗ್ಯಚಿತ್ರವನ್ನು ಪ್ರಕಟಿಸಿ ಪ್ರೋತ್ಸಾಹಿಸಿದ್ದರು. ಜೈಕನ್ನಡಮ್ಮ ಪತ್ರಿಕೆಗೆ ನಿರಂತರ ವ್ಯಂಗ್ಯಚಿತ್ರ ಹಾಗೂ ಚುಟುಕು ನೀಡತೊಡಗಿದೆ. ಪ್ರತೀ ಸಂಚಿಕೆಯಲ್ಲೂ ನನ್ನ ವ್ಯಂಗ್ಯಚಿತ್ರ, ಚುಟುಕು ಪ್ರಕಟಗೊಳ್ಳಲಾರಂಭಿಸಿದವು. ಸಂಪಾದಕ ದೇವಿಪ್ರಸಾದ್ ಒಂದು ದಿನ ನಮ್ಮ ಮನೆಗೆ ಬಂದು ನನ್ನ ಹೆತ್ತವರ ಬಳಿ `ನಿಮ್ಮ ಮಗನನ್ನು ನಮ್ಮ ಪತ್ರಿಕೆಗೆ ವರದಿಗಾರನಾಡಿ ಕೊಡಿ’ ಎಂದು ಕೇಳಿಕೊಂಡರು. ಅಲ್ಲಿಂದ ವೇಣೂರು ಹೋಬಳಿಯ ವರದಿಗಾರನಾಗಿ ಜೈಕನ್ನಡಮ್ಮ ಪತ್ರಿಕೆಗೆ ಅಧಿಕೃತವಾಗಿ ನೇಮಕಗೊಂಡೆ. ಅದೇ ಸಮಯಕ್ಕೆ ನನ್ನಪ್ಪ ನನಗೆ ಹರ್ಕ್ಯೂಲಸ್ ಸೈಕಲ್ ಒಂದನ್ನು ಖರೀದಿಸಿ ಉಡುಗೊರೆಯಾಗಿ ನೀಡಿದ್ದರು. ಮಿರಿ ಮಿರಿ ಮಿಂಚುತ್ತಿದ್ದ ಹೊಸ ಸೈಕಲ್… ಅದರ ಹಿಂಭಾಗದಲ್ಲಿ `ಪ್ರೆಸ್’ ಎಂಬ ಸ್ಟಿಕ್ಕರ್ ಒಂದನ್ನು ನಾನೇ ಬರೆದು ಅಂಟಿಸಿಕೊ0ಡಿದ್ದೆ!. ಅಬ್ಬ…ಅಂತೂ ಇಂತೂ ಪ್ರೆಸ್ ಸ್ಟಿಕ್ಕರ್ ಅಂಟಿಸಿ ಹೋಗುವ ಸದಾವಕಾಶ ನನಗೆ ಲಭಿಸಿತು ಎಂಬ ಖುಷಿ ಒಂದೆಡೆ!
ಜೊತೆ ಜೊತೆಗೆ ಬಂಧುಗಳ ಅಪಹಾಸ್ಯದ ನಗು ಮತ್ತೆ ನನ್ನ ಮನಸ್ಸಿಗೆ ಭಾರೀ ಘಾಸಿ ಉಂಟು ಮಾಡಿತು…
ಮುಂದುವರಿಯುತ್ತದೆ….