ವಿನಾಯಕ ಚತುರ್ಥಿ ಆಚರಣೆಯಲ್ಲಿ ಗೊಂದಲ ಬೇಡ

 

ವಿದ್ವಾನ್ ವಿನಾಯಕ ಭಟ್ಟ ಗಾಳಿಮನೆ
ನಾವೇ ಗೊಂದಲ ಎಂದು ಹೇಳಿ ಪ್ರಸಾರ ಮತ್ತು ಪ್ರಚಾರ ಮಾಡಿದರೆ ಇಂತಹ ಸೂಕ್ಷ್ಮ ವಿಚಾರಗಳನ್ನು ಮನನ ಮಾಡಬೇಕಾದ ಮನಸ್ಸುಗಳು ಯುವಜನತೆ ನಮ್ಮ ಪರಂಪರೆಯ ಕುರಿತು ಏನೆಂದು ತಿಳಿದೀತು? ಒಮ್ಮೆ
ಯೋಚಿಸಿ ನೋಡಿ. ಈ ವರ್ಷದ ಚೌತಿ ಹಬ್ಬದ ಸಂದರ್ಭ ಗ್ರಾಹ್ಯ ಇದರ ಕುರಿತು ಚಿಂತನೆ ಮಾಡಬೇಕಿದೆ. ಭಾರತದಲ್ಲಿ ಅತ್ಯಂತ ವೈಭವದಿಂದ ಆಚರಿಸುವ ಹಬ್ಬಗಳಲ್ಲಿ ಗಣೇಶ ಚತುರ್ಥಿ ಅನ್ಯತಮ. ವಿಘ್ನ ವಿನಾಯಕನ ಹಬ್ಬವು ಪ್ರತಿವರ್ಷ ಭಾದ್ರಪದ ಶುಕ್ಲ ಚತುರ್ಥಿ ತಿಥಿಯಂದು ಬರುತ್ತದೆ ಎಂಬುದು ತಿಳಿದೇ ಇದೆ. ಮೂಲತಃ ಚೌತಿ ತಿಥಿಯು ೧೮/೦೯/೨೦೨೩ ಬಂದಿರುವದರಿAದ ಅಂದೇ ಆಚರಿಸಬೇಕಿದೆ ಎಂಬುದು ಮೊದಲ ಅಭಿಪ್ರಾಯ. ಎರಡನೇ ಅಭಿಪ್ರಾಯ ೧೯.೯.೨೦೨೩ ರಂದು ಆಚರಿಸಬೇಕು ಎನ್ನುವುದಾಗಿದೆ. ಹೀಗೆ ಒಂದೇ ಹಬ್ಬ ಎರಡು ದಿನ ಆಚರಣೆ ಮಾಡಬೇಕಾದ ಸ್ಥಿತಿ ನಿರ್ಮಾಣ ಆಗಿದ್ದು ಯಾವ ಕಾರಣದಿಂದ ಎಂಬುದು ಯೋಚಿಸಬೇಕಾದ ವಿಚಾರ. ಯಾವ ತಿಥಿಯಂದು ಹಬ್ಬ ಆಚರಿಸುತ್ತೇವೋ ಅದು ಮಧ್ಯಾಹ್ನ ವ್ಯಾಪಿನಿ ಇದ್ದಾಗ ಮಾತ್ರ ಹಬ್ಬದ ಆಚರಣೆ ಸೂಕ್ತ ಎಂಬ ವಿಚಾರ ನಿರ್ವಿವಾದ. ಎಲ್ಲರೂ ಒಪ್ಪಿದ್ದಾರೆ.

 

ಆದರೆ ಸೂರ್ಯ ಸಿದ್ಧಾಂತ ಮತ್ತೂ ದೃಕ್ ಸಿದ್ಧಾಂತಗಳಲ್ಲಿ ಈ ತಿಥಿಯ ಅವಧಿ ಅಥವಾ ವ್ಯಾಪ್ತಿಯ ಬಗ್ಗೆ ಲೆಕ್ಕಾಚಾರ ಬದಲಿದೆ. ಸೂರ್ಯ ಸಿದ್ಧಾಂತದ ಪ್ರಕಾರ ಅಕ್ಷಾಂಶ ರೇಖಾಂಶ ಗಳ ಆಧಾರದಲ್ಲಿ ಚತುರ್ಥೀ ತಿಥಿ ೧೮ ರ ಅಪರಾಹ್ಣ ಸಮಯ ೧೨:೩೮ರ ನಂತರ ಬರುತ್ತದೆ. ಆದ್ದರಿಂದ ಅಂದು ಮುಂಜಾನೆ ತತ್ ಪೂರ್ವದಲ್ಲಿ ಗೌರೀ ಹಬ್ಬವನ್ನು, ತದನಂತರ ಮಧ್ಯಾಹ್ನ ವ್ಯಾಪ್ತವಾದ ಚೌತಿ ತಿಥಿ ಇರುವ ಕಾರಣ ಅಂದೇ ಮಧ್ಯಾಹ್ನ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಬೇಕೆಂದು ಅವರ ಅಭಿಪ್ರಾಯ. ತದಿಗೆ ಯುಕ್ತ ಚೌತಿ ಶ್ರೇಷ್ಠ ಎಂದು ಈ ಸಿದ್ಧಾಂತ ದ ಅಂಬೋಣ. ದೃಕ್ ಸಿದ್ಧಾಂತ ಪ್ರಕಾರ ೧೯ಕ್ಕೆ ಆಚರಣೆ ಸೂಕ್ತ. ಸೂರ್ಯೋದಯಕ್ಕೆ ಅಂದು ಚೌತಿ ತಿಥಿ ಇರುವ ಕಾರಣ ಗಣೇಶ ಹಬ್ಬ ೧೯ಕ್ಕೆ ಸೂಕ್ತ ಎಂಬುದು ಇವರ ಅಭಿಪ್ರಾಯ. ಹಾಗಾಗಿ ಅದನ್ನು ಅನುಸರಿಸುವ ಪಂಚಾ೦ಗ ಗಳೂ ಆಯಾ ಸಿದ್ಧಾಂತ ಗಳ ಆಧಾರದಲ್ಲಿ ಹೇಳಿವೆ. ಸಮಗ್ರ ಭಾರತೀಯ ಆರ್ಷ ಪರಂಪರೆಯು ಈ ಎರಡೂ ಸಿದ್ಧಾಂತಗಳನ್ನು ಒಪ್ಪಿ ಅನುಸರಿಸುತ್ತಾ ಸಾಗಿ ಬಂದಿದೆ. ಅರ್ಥಾತ್ ಈ ಎರಡೂ ಸಿದ್ಧಾಂತಗಳು ಮಾನ್ಯವೇ ಆಗಿದೆ..ಇವುಗಳು ನಿನ್ನೆ ಮೊನ್ನೆ ಜನಿಸಿದ್ದಲ್ಲ.. ಇವಕ್ಕೆ ಶತ-ಶತಮಾನಗಳ ಇತಿಹಾಸ ಇವೆ. ಇವುಗಳು ಇಂದು ನಮ್ಮ ಶ್ರದ್ಧಾಮೂಲವಾದ ಆಚರಣೆಗಳ ಮೂಲಸ್ತಂಭಗಳಾಗಿವೆ.

 

ಪ್ರಜ್ಞಾವಂತರಾದ ಭಾರತೀಯರು ಎರಡನ್ನೂ ಪುರಸ್ಕರಿಬೇಕಿದೆ. ಆದ್ದರಿಂದ ಇದನ್ನು ಗೊಂದಲ ಎಂದು ಗ್ರಹಿಸುವ ಅಗತ್ಯ ಕಾಣದು..ಇದರ ಹಿನ್ನೆಲೆಯನ್ನು ಹಾಗೂ ಆ ಲೆಕ್ಕಾಚಾರ ತಿಳಿಯದೇ ಇರುವುದು ನಮ್ಮ ಅಜ್ಞಾನ..ಈ ಕಾರಣದಿಂದ ಪಂಚಾ೦ಗವನ್ನಾಗಲಿ, ಅವರ ಕರ್ತೃಗಳನ್ನಾಗಲಿ , ಅವರ ಸಿದ್ಧಾಂತವನ್ನಾಗಲಿ ಗೊಂದಲವೆ೦ದು ಶೀರ್ಷಿಕೆ ಕೊಟ್ಟು ಮಾತಾಡುವುದು ಅಥವಾ ಅದನ್ನು ಹಾಗೇ ಬರೆಯುವುದು ಯಾಕೋ ಏನೋ ನನಗಂತೂ ಒಪ್ಪಲು ಕಷ್ಟವಾಗುತ್ತದೆ.. ಎರಡೂ ಕೂಡ ನಮ್ಮ ಸಿದ್ಧಾಂತಗಳೇ ಆಗಿವೆ. ಸ್ವಧರ್ಮೇ ನಿಧನಂ ಶ್ರೇಯಃ ಎಂಬ ಗೀತಾಚಾರ್ಯನ ಮಾತಿನಂತೆ ನಮ್ಮ ನಮ್ಮ ಪಾರಂಪರಿಕ ಅನುಸರಣೆಗೆ ಅನುಗುಣವಾಗಿ ಗಣೇಶ ಹಬ್ಬ ಆಚರಿಸುವಲ್ಲಿ ಹೆಚ್ಚು ಔಚಿತ್ಯ ಇದೆ ಎಂಬುದು ನನ್ನ ಭಾವವಾಗಿದೆ..
ಪಂಚಾ೦ಗ ನೋಡುವ ಪರಿಪಾಠ ಇದ್ದವರು, ಪಂಚಾ೦ಗ ಲೆಕ್ಕಾಚಾರ ತಿಳಿದವರು ಈ ಗೊಂದಲ ಮಾಡಿಕೊಳ್ಳಲು ಅವಕಾಶವೇ ಇಲ್ಲ. ಅವರವರ ಪಂಚಾ೦ಗ ಉಕ್ತ ರೀತಿಯಲ್ಲಿ ಮುಂದೆ ಸಾಗುತ್ತಾರೆ. ಅದೇ ಪ್ರಮಾಣ..
ಸೂರ್ಯ ಚಂದ್ರ ಭೂಮಿಗಳ ನಡುವಿನ ವ್ಯವಸ್ಥೆ ಯ ಲೆಕ್ಕಾಚಾರದಲ್ಲಿ ಎರಡು ಸಿದ್ಧಾಂತವೂ ಶ್ರೇಷ್ಠ ವೇ ಆಗಿದೆ. ಹಾಗೂ ಇವುಗಳಲ್ಲಿ ದೋಷವಿಲ್ಲ. ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಳ್ಳುವ ಅವಕಾಶ ಇದೆ..ಹಾಗಾಗಿ ಆಚರಣೆ ನಿಲ್ಲದಿರಲಿ.. ಗೊಂದಲ ಗೊಂದಲ ಎಂದು ಬಾಯಿ ಬಡಿದುಕೊಳ್ಳುವ ಜನ ಮೊದಲು ಪಂಚಾAಗ ನೋಡುವ ಕ್ರಮ ಹಾಗೂ ಅನುಸರಿಸುವ ಬಗ್ಗೆ ಯೋಚಿಸುವುದಕ್ಕೆ ಇದು ಸೂಕ್ತ ಸಮಯ..

 

 

Share

Leave a Reply

Your email address will not be published. Required fields are marked *