ವಿಟ್ಲ: ಕೇಂದ್ರ ಸರಕಾರವು ಉಡುಪಿ ಪವರ್ ಟ್ರಾನ್ಸಮಿಶನ್ ಕಾರ್ಪೊರೇಷನ್ ಲಿಮಿಟೆಡ್ ೪೦೦ ಕೆ ವಿ. ವಿದ್ಯುತ್ ಪ್ರಸರಣ ಕಾಮಗಾರಿಯನ್ನು ಮತ್ತೆ ವಿಟ್ಪ ಪರಿಸರದಲ್ಲಿ ಆರಂಭಿಸಲು ಪ್ರಯತ್ನಿಸಿದ್ದು ಇದನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಉಡುಪಿ ಕಾಸರಗೋಡು ೪೦೦ ಕೆ ವಿ ವಿದ್ಯುತ್ ಪ್ರಸರಣ ವಿರೋಧಿ ಸಮಿತಿ ಮತ್ತು ಕರ್ನಾಟಕ ರಾಜ್ಯ ರೈತಸಂಘದ ಹಸಿರು ಸೇನೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕ ಎಚ್ಚರಿಕೆ ನೀಡಿದೆ.
ವಿಟ್ಲದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಬೈಲುಗುತ್ತು ಶ್ರೀಧರ ಶೆಟ್ಟಿ ಅವರು ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದರು. ಗೋ ಬ್ಯಾಕ್ ಯುಕೆಟಿಎಲ್ ಎಂಬುದೇ ಇಲ್ಲಿನ ಕೃಷಿಕರ ಒಕ್ಕೊರಲ ದನಿಯಾಗಿದೆ ಎಂದು ಸ್ಪಷ್ಟಪಡಿಸಿದರು.
ಕೃಷಿ ಬದುಕು ನಾಶ
ಈ ೪೦೦ ಕೆ ವಿ ವಿದ್ಯುತ್ ಪ್ರಸರಣ ಮಾರ್ಗ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ೧೭ ಗ್ರಾಮಗಳ ಮೇಲೆ ಹಾದು ಹೋಗಲಿದೆ. ಇದರಿಂದಾಗಿ ನೂರಾರು ಎಕರೆ ಪ್ರದೇಶಗಳ ಕೃಷಿಭೂಮಿ ಸರ್ವನಾಶವಾಗಲಿದೆ. ಹಸಿರು ನಾಶವಾಗಿ ಅಪಾಯಕಾರಿ ವಿದ್ಯುತ್ ಲೈನ್ ಹಾದುಹೋಗಲಿದೆ. ಜನರ ಜೀವನ ದುಸ್ತರವಾಗಲಿದೆ. ಅಡಿಕೆ, ತೆಂಗು ಭತ್ತ, ಬಾಳೆ ಕಾಳುಮೆಣಸು,ರಬ್ಬರ್ ಇತ್ಯಾದಿ ಬೆಳೆಗಳಿಗೆ ಹಾನಿಯಾಗಲಿವೆ. ರೈತನ ಬದುಕು ನಾಶವಾಗಲಿ ಎಂದು ಅವರು ಹೇಳಿದರು. ಈ ವಿಷಯಕ್ಕೆ ಸಂಬAಧಿಸಿದAತೆ ಅಧಿಕಾರಿಗಳಿಗೆ ಪತ್ರ ಬರೆದರೆ ಉತ್ತರಿಸುವುದಿಲ್ಲ. ಬದಲಾಗಿ ಕಾಮಗಾರಿ ಮುಂದುವರಿಸುವ ಉದ್ಧಟತನ ತೋರುತ್ತಿದ್ದಾರೆ ಇದನ್ನು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.
ಪೈಪ್ ಲೈನ್ ಹಾದು ಹೋಗುವ ಗ್ರಾಮಗಳ ರೈತರನ್ನು ಅಧಿಕಾರಿಗಳು ಭೇಟಿ ಮಾಡಿ ತಪ್ಪು ಮಾಹಿತಿ ನೀಡುತ್ತಿದ್ದಾರೆ ಹಣದ ಆಮಿಷವೊಡ್ಡಿ ಕಾಮಗಾರಿ ನಡೆಸಲು ಪ್ರಯತ್ನಿಸುತ್ತಿದ್ದಾರೆ ಎಂದು ಶ್ರೀಧರ ಶೆಟ್ಟಿ ಆರೋಪಿಸಿದರು. ಈಗಾಗಲೇ ಉಡುಪಿ, ಮೂಡುಬಿದಿರೆ ಮಂಗಳೂರು ವ್ಯಾಪ್ತಿಯಲ್ಲಿ ಜನರು ತೀವ್ರಭಟನೆ ಮಾಡಿ ಕಾಮಗಾರಿಗೆ ತಡೆಯೊಡ್ಡಿದ್ದಾರೆ. ನಿಡ್ಡೋಡಿ ಭಾಗದಲ್ಲಿ ಭಾರೀ ಪ್ರತಿಭಟನೆ ನಡೆದಿದ್ದು ಯಾವ ಕಾರಣಕ್ಕೂ ಯೋಜನೆಯ ವಿದ್ಯುತ್ ಲೈನ್ ಹಾದುಹೋಗಲು ಬಿಡದಿರುವಂತೆ ತೀರ್ಮಾನ ಮಾಡಿದ್ದಾರೆ. ಅದೇ ರೀತಿ ಇಲ್ಲಿಯೂ ಮಾಡುತ್ತಿದ್ದೇವೆ ಎಂದರು. ತಕರಾರು ಅರ್ಜಿ ನ್ಯಾಯಾಲಯ ದಲ್ಲಿ ಇರುವ ಸಂದರ್ಭದಲ್ಲಿ ತರಾತುರಿಯಲ್ಲಿ ಕಾಮಗಾರಿ ಆರಂಭಿಸಿದ್ದು ಯಾಕೆ ಎಂದು ಪ್ರಶ್ನಿಸಿದರು.
ಜಿಲ್ಲೆಯ ನಾಲ್ವರು ಶಾಸಕರು ಕಾಮಗಾರಿಗೆ ಅಂದು ವಿರೋಧ ವ್ಯಕ್ತಪಡಿಸಿದ್ದರು.ಕ್ಷೇತ್ರದ ಅಂದಿನ ಶಾಸಕರು ಯೋಜನೆ ಬರದಂತೆ ತಡೆದಿದ್ದೇವೆ ಎಂದಿದ್ದರು. ತಡೆದಿದ್ದರೆ ಮತ್ತೆ ಈಗ ಕಾಮಗಾರಿ ಆರಂಭಿಸುವುದು ಹೇಗೆ ಎಂದು ರೈತಸಂಘಟನೆ ಪದಾಧಿಕಾರಿಗಳು ಪ್ರಶ್ನೆ ಮಾಡಿದರು. ಚುನಾವಣಗೆ ಮುನ್ನ ಹಾಲಿ ಶಾಸಕರು ಯೋಜನೆಯನ್ನು ವಿರೋಧಿಸುವುದಾಗಿ ತಿಳಿದಿದ್ದರು. ಈಗ ಮೌನವಾಗಿದ್ದಾರೆ ಇದರ ಹಿಂದಿನ ಮರ್ಮವೇನು ಎಂದು ಪ್ರಶ್ನಿಸಿದ ಅವರು ಎತ್ತಿನಹೊಳೆ ಯೋಜನೆ ಬರದಂತೆ ತಡೆಯಲು ರಾಜಕಾರಣಿಗಳು, ಕೆಲವು ಸಂಘಟನೆಗಳು ಪಾದಯಾತ್ರೆ ನಡೆಸಿದ್ದರು. ಅವರೆಲ್ಲರೂ ಈಗ ಮೌನ ವಹಿಸಿರುವುದು ಯಾಕೆ? ಇದರ ಗೂಢಾರ್ಥವೇನು ಎಂದರು. ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ರಾಜೀವ ಗೌಡ, ಶ್ಯಾಮಪ್ರಸಾದ್, ಮಹಾಬಲೇಶ್ವರ ಭಟ್, ಅಣ್ಣು ಗೌಡ ಮೊದಲಾದವರು ಉಪಸ್ಥಿತರಿದ್ದರು