ಯೆಸ್…ಸ್ಪಷ್ಟ ಗುರಿ, ಮಾಡಿಯೇ ತೀರುತ್ತೇವೆಂಬ ಛಲ. ಇದು ವ್ಯಕ್ತಿಯನ್ನು ಯಾವ ಎತ್ತರಕ್ಕೂ ಕೊಂಡೊಯ್ಯಬಲ್ಲದು. ಈ ಸಾಧನೆಯ ಹಿನ್ನಲೆಯಿರುವ ವ್ಯಕ್ತಿಗಳೇ ಸಿನೆಮಾ ಕ್ಷೇತ್ರಕ್ಕೆ ಕೈಯಿಕ್ಕಿದ್ದು, ನೂರಕ್ಕೆ ನೂರು ಚಿತ್ರ ಯಶಸ್ಸಾಗುವುದರಲ್ಲಿ ಸಂದೇಹವೇ ಇಲ್ಲ. ವರಾಹರೂಪಂ ಚಿತ್ರ ಅದ್ದೂರಿಯಿಂದ ಕನ್ನಡಿಗರ ಮನಗೆಲ್ಲಲಿದೆ. ಇದಕ್ಕಾಗಿ ಚಿತ್ರ ತಂಡ ಸಾಕಷ್ಟು ತಯಾರಿ ನಡೆಸಿದೆ. ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿರುವುದು ಚಿತ್ರದ ವಿಶೇಷ. ಪೋಸ್ಟರ್ ಅದ್ದೂರಿಯಲ್ಲಿ ಬಿಡುಗಡೆಯಾಗಿದೆ. ಚಿತ್ರದ ಟೈಟಲ್ ಅಷ್ಟೇ ಆಕರ್ಷಣೆಯಿಂದ ಕೂಡಿದ್ದು ಕುತೂಹಲ ಸೃಷ್ಠಿಸುವಂತಿದೆ. ಕನ್ನಡಿಗರ ಈ ಸಿನೆಮಾ ಕರಾವಳಿ ಹಾಗೂ ಕರ್ನಾಟಕದ ಹಲವು ಭಾಗಗಳಲ್ಲಿ ಚಿತ್ರೀಕರಣಗೊಳ್ಳಲಿದೆ. ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ. ಅಬ್ಬರದ ಅದ್ದೂರಿಯ ಅನಾವರಣವೇ ಚಿತ್ರದ ಯಶಸ್ಸನ್ನು ಸಾಬೀತು ಪಡಿಸಿದೆ ಎಂದರೆ ತಪ್ಪಲ್ಲ. ಮಂಜು ಮಸ್ಕಲ್ ಮಟ್ಟಿ ನಿರ್ದೇಶನದ ನೂತನ ಚಿತ್ರ ಅನೇಕ ನಿರೀಕ್ಷೆಗಳನ್ನು, ಕುತೂಹಲಗಳನ್ನು ಮೂಡಿಸಿದೆ. ಜನತೆ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.
ಹಿರಿಯನಟಿ ಪ್ರೇಮಾ, ಸಾಯಿಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ `ವರಾಹಚಕ್ರಂ’ ಚಿತ್ರವನ್ನು ಮನ್ವಂತರಿ ಮೂವಿಮೇಕರ್ಸ್ ಬ್ಯಾನರ್ ಅಡಿಯಲ್ಲಿ ಗೆಳೆಯರೇ ಸೇರಿ ನಿರ್ಮಿಸುತ್ತಿದ್ದಾರೆ.
ಮನಸುಗಳ ಮಾತು ಮಧುರ, ಯುಗಪುರುಷ, ಗೌರೀಪುತ್ರ ಚಿತ್ರಗಳನ್ನು ನಿರ್ದೇಶಿಸಿದ್ದ ಮಂಜು ಮಸ್ಕಲ್ ಮಟ್ಟಿ ದೊಡ್ಡ ಬ್ರೇಕಿನ ನಂತರ ಚಿತ್ರ ನಿರ್ದೇಶನಕ್ಕೆ ಮತ್ತೊಮ್ಮೆ ಬಂದಿದ್ದಾರೆ. ಇದು ಪ್ರೇಕ್ಷಕ ವರ್ಗದ ಕುತೂಹಲಕ್ಕೆ ಕಾರಣವಾಗಿದೆ. ವರಹಾರಚಕ್ರಂ ಒಂದು `ಜಾಗೃತಿ’ಮೂಡಿಸುವ ಕಥೆಯಾಗಿದೆ ಎಂದು ಕಥೆಯ ಸೂಕ್ಷö್ಮವನ್ನು ನಿರ್ದೇಶಕ ಮಂಜು ಬಿಚ್ಚಿಟ್ಟಿದ್ದಾರೆ. ಅನೇಕ ಧನಾತ್ಮಕ ಅಂಶಗಳೇ ಸಿನೆಮಾದ ಪ್ಲಸ್ ಪಾಯಿಂಟ್ ಎಂದ ಅವರು ಇದೊಂದು ವಿಭಿನ್ನ ಚಿತ್ರವಾಗಿ ಮೂಡಿಬರುವುದರಲ್ಲಿ ಸಂದೇಹವೇ ಇಲ್ಲ ಎಂದಿದ್ದಾರೆ. ಕಥೆಯನ್ನು ಕೇಳಿಯೇ ಚಿತ್ರದಲ್ಲಿ ನಟಿಸುವ ನಿರ್ಧಾರ ಕೈಗೊಂಡೆ ಎಂದು ನಟಿ ಪ್ರೇಮ ಹೇಳಿದ್ದಾರೆ. ಚಿತ್ರಕ್ಕೆ ಸಾಹಿತ್ಯ, ಸಂಗೀತ ಸಂಯೋಜನೆಯ ಜೊತೆ ಪ್ರಮುಖ ಪಾತ್ರವನ್ನು ಡಾ.ವಿ. ನಾಗೇಂದ್ರಪ್ರಸಾದ್ ಮಾಡುತ್ತಿದ್ದಾರೆ. ಅರವಿಂದ್ ಗಗನ್ ನಿರ್ಮಾಪಕರಾಗಿದ್ದಾರೆ. ಶರತ್‌ಕುಮಾರ್ ಜಿ ಅವರ ಛಾಯಾಗ್ರಹಣ, ಭಾರ್ಗವ ಅವರ ಸಂಕಲನವಿದೆ. ಲಾವಣ್ಯ ಗ್ರೂಪ್, ನಾಗಭೂಷಣ್ ಎಂ.ರಾವ್, ಮಂಜುನಾಥ್ ಸಿ.ಗೌಡ್ರು, ಕೆ.ಎಸ್.ಜೈ ಸುರೇಶ್ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.
ಗೆಳೆಯನ ಸಾಹಸಕ್ಕೆ ಶುಭ ಹಾರೈಸೋಣ
ಅರವಿಂದ್ ಗಗನ್ ಸ್ನೇಹಜೀವಿ. ದೈವಭಕ್ತ. ಏನಾದರೊಂದು ಸಾಧಿಸುವ ಛಲ ಹೊಂದಿದ ವ್ಯಕ್ತಿ. ಪ್ರೀತಿ, ಸ್ನೇಹ, ಆತ್ಮೀಯತೆಗೆ ಬೆಲೆಕೊಡುವ, ಗೌರವಿಸುವ ಸಹೃದಯಿ. ಇದೀಗ ದೊಡ್ಡ ಸಾಹಸಕ್ಕೆ ಒಂದಷ್ಟು ಗೆಳೆಯರೊಡಗೂಡಿ ಕೈ ಹಾಕಿದ್ದಾರೆ. ಅವರ ಸಾಧನೆಗೆ ಹಾರೈಸಲೇ ಬೇಕು.
ಹಲವು ಸಾಕ್ಷö್ಯಚಿತ್ರ, ಸಿನೆಮಾ, ಕಿರುಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿರುವ ಅರವಿಂದ್ ಗಗನ್ ಇದೀಗ ದೊಡ್ಡ ಕನಸನ್ನು ಹೊತ್ತು ಚಿತ್ರ ನಿರ್ಮಾಣದ ಕಾರ್ಯಕ್ಕೆ ಕೈಯಿಕ್ಕಿದ್ದಾರೆ. ನಿರಂತರ ಸಿನೆಮಾಗಳನ್ನು ಮಾಡಬೇಕು. ಜನತೆಗೆ ಸದಭಿರುಚಿಯ ಚಿತ್ರಗಳನ್ನು ನೀಡಬೇಕು. ಒಂದಷ್ಟು ಕಲಾತ್ಮಕ ಚಿತ್ರಗಳನ್ನು ಮಾಡಿ ಸಮಾಜಕ್ಕೆ ಉತ್ತಮ ಜಾಗೃತಿಯನ್ನು ಮೂಡಿಸುವ ಕಾರ್ಯ ಮಾಡಬೇಕೆಂದು ಕನಸು ಹೊಂದಿದ್ದಾರೆ. ಅವರ ಸಾಧನೆಗಳಿಗೆ ಶುಭ ಹಾರೈಕೆಗಳು.