ಚಿಕ್ಕಮಗಳೂರು: ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯಲಿದ್ದು ನೊಂದಾವಣೆ ಮಾಡಿಕೊಳ್ಳದ ಶಿಕ್ಷಕರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿಸುವAತೆ ನೈರುತ್ಯ ಶಿಕ್ಷಕ ಕ್ಷೇತ್ರದ ಸೇವಾಕಾಂಕ್ಷಿ ನಂಜೇಶ್ ಬೆಣ್ಣೂರು ಕರೆನೀಡಿದ್ದಾರೆ. ಶಿಕ್ಷಕರು ತಮಗಿರುವ ಹಕ್ಕನ್ನು ಚಲಾಯಿಸಿ ಶಿಕ್ಷಣ ಮತ್ತು ಶಿಕ್ಷಕರ ಕ್ಷೇತ್ರವನ್ನು ಸದೃಢಗೊಳಿಸಬೇಕೆಂದು ಎಂದ ಅವರು ನೈರುತ್ಯ ಶಿಕ್ಷಣ ಕ್ಷೇತ್ರದ ಚುನಾವಣೆಯಲ್ಲಿ ಕೇವಲ ಸರಕಾರಿ ಶಾಲಾ ಶಿಕ್ಷಕರು ಮಾತ್ರ ಮತ ಚಲಾಯಿಸಬಹುದೆಂಬ ತಪ್ಪು ಕಲ್ಪನೆಯಿದ್ದು ಇದಕ್ಕಾಗಿ ಶಿಕ್ಷಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

ಶಿಕ್ಷಕನಾಗಿ ೧೦ ವರ್ಷ ಸೇವೆ ಸಲ್ಲಿಸಿದ್ದು, ಶಿಕ್ಷಕರ ಕಷ್ಟಗಳನ್ನು ಬಹು ಆಳದಿಂದ ಅರಿತಿದ್ದು ರಾಜಕೀಯದ ಮೂಲಕ ಶಿಕ್ಷಕ ವೃಂದಕ್ಕೆ ಸೇವೆ ಸಲ್ಲಿಸಲು ಅವಕಾಶವನ್ನು ಬಯಸುತ್ತಿದ್ದೇನೆ ಎಂದ ಅವರು, ಮುಂಬರುವ ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿ ಅಕಾಂಕ್ಷಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಅರ್ಜಿಸಲ್ಲಿಸಿದ್ದು, ವರಿಷ್ಠರು ಟಿಕೆಟ್ ನೀಡುವ ವಿಶ್ವಾಸವಿದೆ ಎಂದರು.