ಬೆಂಗಳೂರು: ಚಂದ್ರಯಾನ ೩ಯ ಮಹಾ ಯಶಸ್ಸಿನ ಬೆನ್ನಲ್ಲೇ ಇಸ್ರೋ ಇದೀಗ ಸೂರ್ಯನ ಅಧ್ಯಯನಕ್ಕೆ ಮುಂದಾಗಿದೆ. ಆದಿತ್ಯ ಎಲ್ ೧ ಪ್ರಾಜೆಕ್ಟ್ ಮೂಲಕ ಮತ್ತೊಂದು ದಾಖಲೆ ಬರೆಯಲು ಇಸ್ರೋ ಮುಂದಾಗಿದ್ದು, ಇದರ ಯಶಸ್ಸಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಐತಿಹಾಸಿಕ ಪ್ರಸಿದ್ಧಿಯ ನಾಗ ಕ್ಷೇತ್ರವೆಂದೇ ಖ್ಯಾತಿ ಪಡೆದ ಕುಕ್ಕೆ ಶ್ರೀ ಸುಬ್ರಹ್ಮಣ್ಯನ ಮೊರೆ ಹೋಗಿದೆ ಇಸ್ರೋ ಸಂಸ್ಥೆ! ಇಸ್ರೋ ಸಂಸ್ಥೆಯ ಅಡಿಷನಲ್ ಸೆಕ್ರೆಟರಿ(ಡೈರೆಕ್ಟರ್) ಸಂಧ್ಯಾ ವೇಣುಗೋಪಾಲ್ ಶರ್ಮ ಕುಕ್ಕೆ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಇಸ್ರೋ ಸಂಸ್ಥೆಯಿದ ಉಡಾವಣೆಗೊಳ್ಳಲಿರುವ ಆದಿತ್ಯ ಎಲ್ ೧ ಉಪಗ್ರಹವು ಯಶಸ್ವಿಯಾಗಿ ಉಡಾವಣೆಗೊಳ್ಳಲಿ ಎಂದು ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಸಂಧ್ಯಾ ಶರ್ಮರನ್ನು ಸನ್ಮಾನಿಸಿ ಗೌರವಿಸಲಾಯಿತು.