ಅಧಿಕಾರಿಗಳ ಬೇಜವಾಬ್ದಾರಿಗೆ ಮತ್ತೊಂದು ಮೂಕ ಪ್ರಾಣಿ ಬಲಿ

ಮೂಡುಬಿದಿರೆ: ಭಾನುವಾರ ಬೆಳ್ಳಂ ಬೆಳಗ್ಗೆ ಬೆಳುವಾಯಿ ಮಿತ್ತ ಆಣೆಬೆಟ್ಟುವಿನಲ್ಲಿ ಗಬ್ಬದ ಹಸುವೊಂದು ಸಾವನ್ನಪ್ಪಿದೆ. ಮೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಈ ಅವಘಡ ಸಂಭವಿಸಿದೆ. ಮಿತ್ತ ಆಣೆಬೆಟ್ಟು ಶಿವಾನುಗ್ರಹ ಮನೆಯ ಗಂಗಾಧರ ಪೂಜಾರಿಯವರ ಮನೆಯ ಹಸು ಅನ್ಯಾಯವಾಗಿ ಸಾವನ್ನಪ್ಪಿದೆ.

 

ಹೆಚ್‌ ಟಿ ಲೈನ್‌ ತುಂಡಾಗಿ ಬಿದ್ದು ತೋಟದಲ್ಲಿ ಕಟ್ಟಿದ್ದ ಹಸು ಸಾವನ್ನಪ್ಪಿತು. ಲೈನ್‌ ಬಿದ್ದಷ್ಟು ಜಾಗ ಸಂಪೂರ್ಣ ಭಸ್ಮವಾಗಿದೆ. ಸರಿಯಾಗಿ ನಾಲ್ಕು ವರುಷದ ಹಿಂದೆ ಇದೇ ಮನೆಯ ಕೀರ್ತಿ ಪೂಜಾರಿ (೨೭) ಹೆಚ್‌ ಟಿ ಲೈನ್‌ ಅವಘಡದಿಂದಾಗಿ ದಾರುಣ ಸಾವನ್ನಪ್ಪಿದ್ದರು. ಜನಸಂಚಾರವಿರುವ ಪರಿಸರದಲ್ಲಿ ವಿದ್ಯುತ್‌ ಲೈನ್‌ ಹಾದುಹೋಗುವುದು ಬೇಡ ಎಂಬ ಒತ್ತಡ ಪರಿಸರವಾಸಿಗಳದ್ದಾಗಿದ್ದರೂ, ಅಧಿಕಾರಿಗಳು ಜನಪ್ರತಿನಿಧಿಗಳು ಮೌನ ವಹಿಸಿದ್ದು ಘಟನೆ ಮರುಕಳಿಸುವಂತೆ ಮಾಡಿದೆ. ಯಾವ ಕಾರಣಕ್ಕೂ ಮತ್ತೆ ಲೈನ್‌ ಅಳವಡಿಸಲು ಬಿಡೆವು ಎಂದು ಮುಂಜಾನೆಯಿಂದಲೇ ಪರಿಸರವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ ಅಳವಡಿಸಿದ್ದ ವಿದ್ಯುತ್‌ ಲೈನ್‌ ಸ್ಥಳಾಂತರಿಸುವಂತೆ ಅನೇಕಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಶೂನ್ಯ ಎಂಬುದು ಸ್ಥಳೀಯರ ಅಳಲು. ಇನ್ನಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೋ ಕಾದು ನೋಡಬೇಕಾಗಿದೆ.

ಇದಕ್ಕೇ ಇಷ್ಟು…: ಕೇವಲ ಎಚ್‌ ಟಿ ಲೈನ್‌ ತುಂಡಾಗಿ ಬಿದ್ದದ್ದಕ್ಕೇ ಇಷ್ಟು ಅನಾಹುತವಾಗಿದೆ. ಇನ್ನು ೪೦೦ಕೆವಿ ಪವರ್‌ ಲೈನ್‌ ಹಾದುಹೋದರೆ ಹೇಗಾಗುವುದೋ ಎಂಬ ಆತಂಕ ಇದೀಗ ಮೂಡುಬಿದಿರೆ ಪರಿಸರದ ಜನತೆಯಲ್ಲಿ ಮೂಡಿದೆ. ಉಡುಪಿಯಿಂದ ಮೂಡುಬಿದಿರೆಯಾಗಿ ಕೇರಳಕ್ಕೆ ಹಾದುಹೋಗುವ ಯುಕೆಟಿಎಲ್‌ ಪವರ್‌ ಲೈನ್‌ ಪ್ರಾಜೆಕ್ಟ್‌ ಕಾಮಗಾರಿಗೆ ಇದೇ ಕಾರಣಕ್ಕಾಗಿಯೇ ಜನತೆ ವಿರೋಧಿಸುತ್ತಿದ್ದಾರೆ. ಎಚ್‌ ಟಿ ಲೈನ್‌ ತುಂಡಾಗಿ ಬಿದ್ದಿರುವುದಕ್ಕೆ ಇಂತಹ ಅನಾಹುತವಾಗಿದೆ. ಇನ್ನೆಲ್ಲಾದರೂ ಅಷ್ಟು ದೊಡ್ಡ ಪವರ್‌ ಲೈನ್‌ ಕಡಿದು ಬಿದ್ದರೆ ಇಡೀ ಊರಿಗೆ ಊರೇ ಭಸ್ಮವಾಗುವುದರಲ್ಲಿ ಸಂದೇಹವಿಲ್ಲ ಎಂದು ಜನತೆ ಆಡಿಕೊಳ್ಳುತ್ತಿದ್ದಾರೆ.

Share

Leave a Reply

Your email address will not be published. Required fields are marked *