ಮೂಡುಬಿದಿರೆ: ಮೊಟ್ಟ ಮೊದಲ ಬಾರಿಗೆ ಜೈನಕಾಶಿ ಮೂಡುಬಿದಿರೆಗೆ ಮೈಸೂರು ಅರಮನೆಯ ಮಹಾರಾಜರಾದ ಯದುವೀರ ಕೃಷ್ಣದತ್ತ ಒಡೆಯರ್ ಚಿತ್ತೈಸಲಿದ್ದಾರೆ. ಆಗಸ್ಟ್ 15 ಸ್ವಾತಂತ್ರ್ಯೋತ್ಸವದಂದು ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾಸಂಸ್ಥೆಗೆ ಆಗಮಿಸಲಿದ್ದು ರಾಜ ಸಭಾಂಗಣವನ್ನು ಉದ್ಘಾಟಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸುಸಜ್ಜಿತ ಧ್ವನಿ ಬೆಳಕಿನ ವ್ಯವಸ್ಥೆಯುಳ್ಳ, ೨೫೦೦ ವಿದ್ಯಾರ್ಥಿಗಳು ಏಕಕಾಲಕ್ಕೆ ಕುಳಿತು ಕಾರ್ಯಕ್ರಮ ವೀಕ್ಷಿಸುವ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿ ಆಡಿಟೋರಿಯಂ ಇದಾಗಿದ್ದು, ಮಹಾರಾಜರ ದಿವ್ಯ ಹಸ್ತದಿಂದ ಉದ್ಘಾಟನೆಯಾಗಲಿದೆ ಎಂದರು. ಸ್ವಾತಂತ್ರ್ಯೋತ್ಸವದ ಶುಭಾವಸರದಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದು, ಸ್ವತಃ ಮಹಾರಾಜರೇ ಆಗಮಿಸಿ ಉದ್ಘಾಟಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿ, ಪ್ರೋತ್ಸಾಹಿಸುವ ಕಾರ್ಯ ನಡೆಯಲಿದೆ ಎಂದು ವಿವರಿಸಿದರು.

ಮಧ್ಯಾಹ್ನ 12 ಗಂಟೆಗೆ ಮಹಾರಾಜರು ಆಗಮಿಸಲಿದ್ದು ಸಾಂಪ್ರದಾಯಕಿಯ ಗೌರವಾದರಗಳೊಂದಿಗೆ ಸ್ವಾಗತಿಸುವ ಕಾರ್ಯ ನಡೆಯಲಿದೆ. ಮಹಾರಾಜರಿಗೆ ರಾಜಮರ್ಯಾದೆಯನ್ನು ಸಂಸ್ಥೆಯ ವತಿಯಿಂದ ನೀಡಲಾಗುತ್ತದೆ. ಸುಮಾರು ಮೂರು ಗಂಟೆಗಳ ಕಾಲ ವಿದ್ಯಾಸಂಸ್ಥೆಯಲ್ಲಿದ್ದು, ಮರಳಿ ಬಜ್ಪೆಯಿಂದ ವಿಮಾನದ ಮೂಲಕ ಬೆಂಗಳೂರಿಗೆ ತೆರಳಿ, ಮೈಸೂರಿಗೆ ಹೋಗಲಿದ್ದಾರೆ ಎಂದರು. ಆಡಳಿತ ನಿರ್ದೇಶಕ ಡಾ. ಸಂಪತ್ ಕುಮಾರ್, ವಾದಿರಾಜ ಕಲ್ಲೂರಾಯ, ಪಿಆರ್‌ಒ ಚೈತ್ರಾ ಶೆಟ್ಟಿ ಉಪಸ್ಥಿತರಿದ್ದರು.