ಈದಿನ ಎಕ್ಸ್‌ಕ್ಲೂಸಿವ್
ʻʻಸೌಜನ್ಯ ಕೊಲೆಗೆ ನ್ಯಾಯ ಸಿಗಬೇಕು ಹೌದು. ಆದರೆ ಅನ್ಯಾಯವಾಗಿ ಹಿಂದೂಗಳ, ಆಸ್ತಿಕ ಭಾವುಕ ಭಕ್ತ ಸಮೂಹದ ಶ್ರದ್ಧಾಕೇಂದ್ರಕ್ಕೆ ಮಸಿಬಳಿಯುವುದು ಎಷ್ಟು ಸಮಂಜಸ? ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುವ ಸಂದರ್ಭ ಹಿಂದೂಗಳು ಒಗ್ಗಟ್ಟಾಗಿ ಪ್ರತಿಭಟಿಸುವ ಕಾರ್ಯ ಮಾಡಿದ್ದು, ಇಂತಹ ಸ್ಥಳಕ್ಕೆ ಸೌಜನ್ಯ ಹತ್ಯೆಗೆ ನ್ಯಾಯ ಬೇಕೆಂದು ವೇದಿಕೆ ಹತ್ತುವ ಅವಶ್ಯಕತೆಯಾದರೂ ಯಾಕಿತ್ತು? ಇದು ವ್ಯವಸ್ಥಿತ ಸಂಚಲ್ಲವೇ? ಈ ಕೃತ್ಯನಡೆಸಲು ಮೊಬೈಲ್ ಕರೆಯ ಮೂಲಕ ನಿರ್ದೇಶಿಸಿದ ನಿರ್ದೇಶಕನಾದರೂ ಯಾರು? ಇದೆಲ್ಲವೂ ವ್ಯವಸ್ಥಿತ ಪ್ಲೇನ್ ಎಂದು ತಿಳಿಯಲು ಇಷ್ಟೇ ಸಾಕಲ್ಲವೇ?ʼʼ
ಅನ್ಯಾಯವಾಗಿ ಪ್ರಾಣತೆತ್ತ ಸೌಜನ್ಯಳಿಗೆ ನ್ಯಾಯ ಸಿಗಬೇಕೆಂಬ ಮಾತು ಇಡೀ ರಾಜ್ಯದ ಜನತೆಯದ್ದು ಹಿಂದೆಯೂ ಇತ್ತು ಇಂದೂ ಇದೆ. ಆದರೆ ನ್ಯಾಯದ ಹೆಸರಿನಲ್ಲಿ ಅನ್ಯಾಯವಾಗುತ್ತಿರುವುದಕ್ಕೆ ಸಹಿಸದ ಹಿಂದೂಗಳು ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಶನಿವಾರದ ದಿನ ಪ್ರತಿಭಟನೆಯೊಂದನ್ನು ನಡೆಸಿದೆ. ಅನ್ಯಾಯವಾಗಿ ಧಾರ್ಮಿಕ ಶ್ರದ್ಧಾಕೇಂದ್ರ ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರನ್ನು ಹಾಳುಮಾಡುವ ಷಡ್ಯಂತ್ರವನ್ನು ಬಹಿರಂಗಗೊಳಿಸಿ, ನ್ಯಾಯದ ಹೆಸರಿನಲ್ಲಾಗುತ್ತಿರುವ ಅನ್ಯಾಯದ ವಿರುದ್ಧ ಸಿಡಿದೆದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕೇವಲ ಬೆಳ್ತಂಗಡಿ ತಾಲೂಕೊಂದರಲ್ಲಿ ಭಕ್ತರಲ್ಲ. ಬದಲಾಗಿ ಇಡೀ ಜಿಲ್ಲೆ,ರಾಜ್ಯ,ಹೊರರಾಜ್ಯ, ಹೊರದೇಶಗಳಲ್ಲೂ ಆಸ್ತಿಕ ಭಕ್ತರಿದ್ದಾರೆ. ಹಿಂದೂಗಳ ಪಾವನ ಕ್ಷೇತ್ರ, ಧಾರ್ಮಿಕ ಶ್ರದ್ಧಾಕೇಂದ್ರವೂ ಹೌದು. ಹೀಗಾಗಿ ಇದಕ್ಕೆ ಕಪ್ಪುಚುಕ್ಕೆ ಬರುವಂತಹ ಕಾರ್ಯವನ್ನು ಹಿಂದೂ ವಿರೋಧಿಗಳು ಮಾಡುತ್ತಿರುವುದಕ್ಕೆ ಕ್ರೋಧ ವ್ಯಕ್ತವಾಗುತ್ತಿದೆ. ಅಂತಹ ಆಸ್ತಿಕ ಭಕ್ತರೆಲ್ಲ ಸೇರಿ ಅಖಿಲ ಕರ್ನಾಟಕ ಮಂಜುನಾಥ ಭಕ್ತವೃಂದ ಆಯೋಜಿಸಿದ ಬೃಹತ್ ಸಭೆಗೆ ಸಹಸ್ರಾರು ಸಂಖ್ಯೆಯ ಭಕ್ತರು ಸಾಕ್ಷಿಯಾಗಿ ಭಕ್ತಿ ಮೆರೆದಿದ್ದೂ ಆಯಿತು. ಕ್ಷೇತ್ರ ಹಾಗೂ ಕ್ಷೇತ್ರದ ಧರ್ಮಾಧಿಕಾರಿಗಳೊಂದಿಗೆ ನಾವಿದ್ದೇವೆ ಎಂಬ ಘೋಷ ನಭದತ್ತ ಮೊಳಗುವಂತೆ ಮಾಡಿದ್ದೂ ಆಯಿತು…
ಎಲ್ಲಿ ನಮ್ಮ ತಂತ್ರ ಬುಡಮೇಲಾಗುತ್ತೋ ಎಂಬ ಭಯ ಇದ್ದ ಸೌಜನ್ಯ ಪರ ಹೋರಾಟಗಾರರು, ಇದಕ್ಕೂ ವ್ಯವಸ್ಥಿತ ಷಡ್ಯಂತ್ರ ರೂಪಿಸಿಯೇ ಬಿಟ್ಟರು. ಅಲ್ಲೆಲ್ಲೋ ಕೂತು ಮೊಬೈಲ್ ಮೂಲಕವೇ ಸೌಜನ್ಯಳ ತಂಗಿಗೆ ಕರೆಮಾಡಿ ʻಈ ರೀತಿ ಮಾಡಿ, ಹೀಗೆ ಮಾಡಿʼ ಎಂಬ ನಿರ್ದೇಶನ ಬರಲಾರಂಭಿಸಿತು. ಇದೇ ಪ್ರಕಾರನ ಫ್ಲೆಕಾರ್ಡ್ ಹಿಡಿದ ಸೌಜನ್ಯಳ ತಾಯಿ,ತಂಗಿ,ತಮ್ಮ, ಸಂಬಂಧಿಕರು ಮಂಜುನಾಥ ಭಕ್ತ ವೃಂದದಿಂದ ನಡೆಯುತ್ತಿರುವ ಪ್ರತಿಭಟನಾ ಸಭೆಗೆ ಅಕ್ರಮ ಪ್ರವೇಶಗೈದಿದ್ದಾರೆ. ಈ ಪ್ರವೇಶವೇ ಸರಿಯಲ್ಲ… ಅಷ್ಟೇ ಏಕೆ ಮತ್ತೆ ಮೊಬೈಲ್‌ಗೆ ನಿರ್ದೇಶನ! ಸೌಜನ್ಯಳ ತಾಯಿ ವೇದಿಕೆಯೇರುವ ಪ್ರಯತ್ನ. ಇದಾದ ಬೆನ್ನಲ್ಲೇ ಮತ್ತೆ ನಿರ್ದೇಶನ! ವೇದಿಕೆಯತ್ತ ಓಡತೊಡಗಿದ ಸೌಜನ್ಯಳ ತಮ್ಮ… ಭದ್ರತೆಯೊದಗಿಸಲು ಸ್ಥಳದಲ್ಲಿದ್ದ ಖಾಕಿ ಪಡೆ ಅವಕಾಶ ನೀಡಲಿಲ್ಲ.
ಈ ಒಂದು ತುಣುಕನ್ನಷ್ಟೇ ಇಟ್ಟು ಮತ್ತೆ ಘಟನೆಯನ್ನು ತಿರುಚುವ ಕಾರ್ಯವನ್ನು ʻನ್ಯಾಯಕ್ಕಾಗಿ ಹೋರಾಟʼ ನಡೆಸುವ ತಂಡವೊಂದು ಮಾಡುತ್ತಿದೆ. ಇದೆಲ್ಲ ಸಂಚಲ್ಲದೆ ಮತ್ತೇನು? ಈ ಸಂಚಿನ ಹಿಂದಿರುವ ಉದ್ದೇಶವಾದರೂ ಏನು? ಸೌಜನ್ಯ ಕೊಲೆಗೆ ನ್ಯಾಯ ಸಿಗಬೇಕು ಎಂಬುದು ಭಕ್ತ ವೃಂದದ ಒಕ್ಕೊರಲ ಅಭಿಪ್ರಾಯವೂ ಹೌದು. ಹೀಗಿರುವಾಗ ಈ ರೀತಿಯ ಅಕ್ರಮ ಪ್ರವೇಶದ ಔಚಿತ್ಯವಾದರೂ ಇತ್ತೇ? ವೇದಿಕೆಯೇರುವ ಪ್ರಯತ್ನ ಮಾಡಿದ್ದೇಕೆ? ವೇದಿಕೆಯೇರಿ ಇವರು ಏನು ಮಾಡಬೇಕೆಂದಿದ್ದರು? ಇವರ ಮೊಬೈಲ್‌ಗೆ ಬರುತ್ತಿದ್ದ ಕರೆಯಾರದ್ದು? ಅದರಲ್ಲಿ ನಿರ್ದೇಶನ ನೀಡುತ್ತಿದ್ದ ʻನಿರ್ದೇಶಕʼ ಯಾರು? ಇದೆಲ್ಲವೂ ಒಂದು ವ್ಯವಸ್ಥಿತ ಷಡ್ಯಂತ್ರ ಎಂಬುದು ಸ್ಪಷ್ಟವಲ್ಲವೇ? ಈ ಎಲ್ಲಾ ಪ್ರಶ್ನೆ ಪ್ರಜ್ಞಾವಂತರನ್ನು ಕಾಡತೊಡಗಿದೆ. ಸೌಜನ್ಯ ಪರ ಹೋರಾಟವೆಂಬ ಹಣೆಪಟ್ಟಿಯಲ್ಲಿ ವ್ಯವಸ್ಥಿತವಾದ ಸಂಚೊಂದು ನಡೆಯುತ್ತಿದೆ. ಸೌಜನ್ಯ ಕುಟುಂಬವನ್ನು ಇದಕ್ಕೆ ದಾಳವನ್ನಾಗಿಸುವ ಕಾರ್ಯವಾಗುತ್ತಿದೆ. ಹಿಂದೂ ಶ್ರದ್ಧಾಕೇಂದ್ರವನ್ನು ಗುರಿಯಾಗಿರಿಸಿಕೊಂಡು ನಡೆಸುತ್ತಿರುವ ಯೋಜನೆ ಎಂಬುದು ಸ್ಪಷ್ಟವಾಗುತ್ತಿದೆ. ಒಡನಾಡಿ ಸಂಘಟನೆ, ಧರ್ಮವಿರೋಧೀ ಮುಖಂಡರು, ಕಮ್ಯೂನಿಸ್ಟ್ ಸಂಘಟನೆಗಳು ಈ ಕೃತ್ಯವನ್ನು ಮಾಡುತ್ತಿದೆ ಎಂಬುದನ್ನು ಸಮಸ್ತ ಹಿಂದೂಗಳು ಅರ್ಥೈಸಬೇಕು. ಇದರ ವಿರುದ್ದ ಒಗ್ಗಟ್ಟಾಗಬೇಕು.