ನಮ್ಮ ದೇಶದಲ್ಲಿ ಒಡೆದಾಳುವ ನೀತಿ ಇಂದು ನಿನ್ನೆಯದಲ್ಲ… ಭಾರತ ದೇಶದ ಚರಿತ್ರೆಯನ್ನೊಮ್ಮೆ ಅವಲೋಕಿಸಿದಾಗ ಇದು ಸ್ಪಷ್ಟವಾಗುತ್ತದೆ. ಶತ್ರು ನಮ್ಮೊಳಗೇ ಇದ್ದಾನೆ. ನಮ್ಮೊಳಗಿರುವ ಶತ್ರು ಯಾರೆಂದು ತಿಳಿಯುವುದು ಮುಖ್ಯ. ಮಹಾಯುದ್ಧಗಳಿರಲಿ, ಸಂಘಟನೆಗಳೇ ಇರಲಿ, ವ್ಯವಸ್ಥಿತ ಯೋಜನೆಗಳಿರಲಿ ಇವೆಲ್ಲವೂ ಒಂದು ಹಂತದಲ್ಲಿ ನಿಷ್ಕ್ರಿಯವಾಗಲು ಒಳಗಿರುವ ಶತ್ರು ಕಾರಣನಾಗಿರುತ್ತಾನೆ. ಇತಿಹಾಸದಲ್ಲಿ ಬರುವ ಅದೆಷ್ಟೋ ರಾಜ ಪರಂಪರೆಗಳನ್ನು ನೋಡಿ, ಸಾಮ್ರಾಜ್ಯ ಶಾಹಿ ವ್ಯವಸ್ಥೆಗಳನ್ನು ಅವಲೋಕಿಸಿ… ಇಲ್ಲೆಲ್ಲ ಆಗಿರುವುದು ಇದೇ. ಇಂದೂ ಇದು ನಡೆಯುತ್ತಿದೆ. ನಮ್ಮೊಳಗಿರುವ ವ್ಯಕ್ತಿಗಳ ಸಣ್ಣ ಮನಸ್ಥಿತಿಯಿಂದಾಗಿ ನಾವು ವಿಭಜನೆಯಾಗುತ್ತಿದ್ದೇವೆ. ತನ್ಮೂಲಕ ಇತರೆ ವ್ಯಕ್ತಿಗಳು ತಮ್ಮ ಪ್ರಾಭಲ್ಯವನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ.
ವಿವೇಚಿಸಿ ನೋಡಿ ಹಿಂದೂಗಳೇ… ಒಂದು ಅಮಾಯಕ ಹೆಣ್ಣು ಮಗಳ ವಿಚಾರವನ್ನಿಟ್ಟುಕೊಂಡು ಇಂದು ಧರ್ಮಯುದ್ಧವೇ ನಡೆಯಲಾರಂಭಿಸಿದೆ. ಸೌಜನ್ಯ ಎಂಬ ಅಮಾಯಕ ಹೆಣ್ಣುಮಗಳ ಅತ್ಯಾಚಾರ ಹಾಗು ಕೊಲೆ ಪ್ರಕರಣ ನಡೆದು ಹತ್ತು ವರುಷ ಸಂದು ಹೋಗಿದೆ. ಆಕೆಯ ಸಾವಿಗೆ ನ್ಯಾಯ ಸಿಗಲೇ ಬೇಕು. ತಪ್ಪಿತಸ್ಥ ಯಾರೇ ಆದರೂ ಶಿಕ್ಷೆ ಆಗಲೇ ಬೇಕು. ಇದು ಪ್ರತಿಯೊಬ್ಬರ ಆಗ್ರಹವೂ ಹೌದು. ಆದರೆ ಈ ವಿಚಾರವನ್ನೇ ಮುಂದಿಟ್ಟು ಇಂದು ನಡೆಯುತ್ತಿರುವ ಹೋರಾಟಗಳು ಎತ್ತ ಸಾಗುತ್ತಿವೆ? ಇದರ ಬಗ್ಗೆ ಕಿಂಚಿತ್ತಾದರೂ ನಾವು ಚಿಂತಿಸಿದ್ದೇವೆಯೇ?
ಶ್ರೀ ಕ್ಷೇತ್ರ ಧರ್ಮಸ್ಥಳ ಹಿಂದೂಗಳ ಧಾರ್ಮಿಕ ಶ್ರದ್ಥಾ ಕೇಂದ್ರ. ಶಿಕ್ಷಣ, ಆರೋಗ್ಯ, ಸಂಸ್ಕೃತಿ, ಕಲೆ,ಸಾಹಿತ್ಯ, ದಾನ, ಧರ್ಮಗಳಿಗೆ ಹೆಸರಾದ ಕ್ಷೇತ್ರ.

ಈ ಕ್ಷೇತ್ರದ ವಿವಿಧ ಯೋಜನೆಗಳ ಮೂಲಕ ಸಹಸ್ರಾರು ಮಂದಿ ಇಂದು ಬದುಕು ಕಟ್ಟಿಕೊಂಡಿದ್ದಾರೆ. ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುವ ಮಹತ್ಕಾರ್ಯ ಕ್ಷೇತ್ರದ ವತಿಯಿಂದ ನಡೆಯುತ್ತಿದೆ. ಗ್ರಾಮೀಣಾಭಿವೃದ್ಧಿಯೂ ಸೇರಿದಂತೆ ಹತ್ತು ಹಲವು ಯೋಜನೆಗಳ ಮೂಲಕ ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತಿದೆ. ನಿತ್ಯ ಅನ್ನದಾನ, ಹಲವು ಪುರಾತನ ದೇಗುಲಗಳ ಪುನರುತ್ಥಾನ, ಮದ್ಯವರ್ಜನದಂತಹ ಶಿಬಿರಗಳನ್ನು ನಡೆಸಿ ಸುಖೀ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿದೆ. ಸಹಸ್ರಾರು ಆಸ್ತಿಕ ಭಕ್ತರು ಪ್ರತಿದಿನ ಕ್ಷೇತ್ರಕ್ಕಾಗಮಿಸಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ನ್ಯಾಯ ದಾನವೂ ಈ ಕ್ಷೇತ್ರದ ಮತ್ತೊಂದು ವಿಶೇಷ. ಹೀಗೆ ಸರ್ವ ರೀತಿಯ ಸಮಾಜಮುಖೀ ಚಿಂತನೆಯ ಮೂಲಸ್ಥಾನವಾಗಿರುವ ಕ್ಷೇತ್ರದ ಪಾವಿತ್ರ್ಯತೆಯನ್ನು, ಇಲ್ಲಿನ ಧರ್ಮದರ್ಶಿಗಳ ಹೆಸರನ್ನು ಹಾಳುಮಾಡುವ ದುರುದ್ದೇಶ ಪೂರಿತವಾದ ಷಡ್ಯಂತ್ರ್ಯ ಇಂದು ವ್ಯವಸ್ಥಿತವಾಗಿ ನಡೆಯುತ್ತಿರುವುದು ಖಂಡನೀಯ. ಸೌಜನ್ಯ ಕೊಲೆ ಪ್ರಕರಣದಲ್ಲಿ ಕ್ಷೇತ್ರದ ಹೆಸರು, ಧರ್ಮಾಧಿಕಾರಿಗಳ ಹೆಸರನ್ನು ಎಳೆದು ತಂದು ಕ್ಷೇತ್ರದ ಪಾವಿತ್ರ್ಯತೆಗೆ ದಕ್ಕೆ ಮಾಡುವ ಹೇಯ ಕೃತ್ಯವನ್ನು ಸಮಸ್ತ ಹಿಂದೂಗಳು ಕಠುವಾಗಿ ಖಂಡಿಸಲೇ ಬೇಕು.

ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ವಿಚಾರವನ್ನು ಮುಂದಿಟ್ಟುಕೊಂಡು ಎಡಪಂಥೀಯರು, ಎಸ್.ಡಿ.ಪಿ.ಐ, ಹಿಂದೂ ವಿರೋಧೀ ಒಡನಾಡಿ ಸಂಸ್ಥೆಗಳು ಇಂದು ಈ ವಿಚಾರವನ್ನಿಟ್ಟುಕೊಂಡು ದೊಡ್ಡ ಷಡ್ಯಂತ್ರ ನಡೆಸಲಾರಂಭಿಸಿದೆ. ಅನ್ಯ ಧರ್ಮೀಯ ಧರ್ಮಗುರುಗಳು ನಡೆಸಿದ ಅತ್ಯಾಚಾರ ಪ್ರಕರಣಗಳ ಬಗ್ಗೆ ಸೊಲ್ಲೆತ್ತದ ಈ ಸಂಘಟನೆಗಳು, ಹಿಂದುಗಳನ್ನೇ ಮುಂದಿಟ್ಟುಕೊಂಡು ಹಿಂದುಗಳನ್ನು ಒಡೆದು ಹಿಂದು ಶಕ್ತಿ ಧಮನಿಸುವ ವ್ಯವಸ್ಥಿತ ಕಾರ್ಯವನ್ನು ಮಾಡಲಾರಂಭಿಸಿದೆ. ಎಚ್ಚರ ಹಿಂದೂ…ಎಚ್ಚರ… ಇಲ್ಲಿ ನಮ್ಮ ಶಕ್ತಿ ಪ್ರದರ್ಶನ ಆಗಲೇಬೇಕು. ಸಮಸ್ತ ಹಿಂದೂ ಗಳು ಒಂದೆಂಬ ಜಾಗೃತಿ ಮೂಡಲೇ ಬೇಕು. ದೇಶ, ಸನಾತನ ಸಂಸ್ಕೃತಿ, ಧರ್ಮದ ಪ್ರಜ್ಞೆಯನ್ನು ಮತ್ತೆ ಮೈಗೂಢಿಸಲೇ ಬೇಕು. ನಾವು ಒಂದು ಎಂಬುದನ್ನು ತೋರಿಸಲೇ ಬೇಕು… ನಮ್ಮೊಳಗೆ ಹುಳಿ ಹಿಂಡುವ ಮನಸ್ಥಿತಿಗಳನ್ನು ದೂರಮಾಡೋಣ… ಸಂಸ್ಕೃತಿ ಸಂಸ್ಕಾರಗಳಿಗೆ ಶಕ್ತಿ ತುಂಬೋಣ…