ಪಟ್ಟುಬಿಡದ ಕೋಟ್ಯಾನ್: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಎಂ!
ಮಂಗಳೂರು: ಗ್ರಾಮ ಪಂಚಾಯತ್ ಉದ್ಘಾಟನೆಯ ಆಮಂತ್ರಣ ಪತ್ರಿಕೆಯಲ್ಲಿ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ ಖರ್ಗೆ ಹೆಸರು ಹಾಕಿಲ್ಲ ಎಂದು ಉದ್ಘಾಟನೆ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ ಇದು ಎಷ್ಟು ಸರಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಎದುರಿನಲ್ಲಿ ಮೂಲ್ಕಿ ಮೂಡುಬಿದಿರೆ ಶಾಸಕ ಉಮನಾಥ ಕೋಟ್ಯಾನ್ ಪ್ರಶ್ನಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಂದರ್ಭ ಮುಖ್ಯಮಂತ್ರಿಗಳ ಗನಕ್ಕೆ ಈ ವಿಚಾರ ತಂದ ಶಾಸಕರು, ಮೂಡಬಿದಿರೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಹಾಗೂ ಪಂಚಾಯತ್ ಪಿಡಿಒಗಳನ್ನು ಅಮಾನತು ಮಾಡಲಾಗಿದೆ. ಗ್ರಾಮ ಪಂಚಾಯತಿನ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಪ್ರೊಟೋಕಾಲ್ ಪ್ರಕಾರವೇ ಮುದ್ರಿತಗೊಂಡಿದೆ. ಆದರೂ ಏಕಾಏಕಿ ಗ್ರಾಮ ಪಂಚಾಯತ್ ಉದ್ಘಾಟನಾ ಕಾರ್ಯಕ್ರಮವನ್ನೇ ರದ್ದುಗೊಳಿಸಲಾಗಿದೆ. ಜೊತೆಗೆ ತಾಲೂಕು ಪಂಚಾಯತ್ ಸಿಇಒ ಸೇರಿ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನ್ಯಾಯ ಕೊಡಿ: ಅಧಿಕಾರಿಗಳನ್ನು ಅಮಾನತು ಮಾಡಿರೋದು ಯಾಕೆ? ಕಾರ್ಯಕ್ರಮ ನಿಲ್ಲಿಸಿರೋದು ಯಾಕೆ? ಈ ಘಟನೆಗೆ ಉತ್ತರ ಕೊಟ್ಟು ನನಗೆ ನ್ಯಾಯ ಕೊಡಿ ಎಂದು ಕೋಟ್ಯಾನ್ ಪಟ್ಟು ಹಿಡಿದರು. ಶಾಸಕರು ದೂರು ನೀಡುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ಡಾ ಆನಂದ್ ಅವರ ಬಳಿ ಸಿಎಂ ಮಾಹಿತಿ ಕೇಳಿದರು. ಈ ವೇಳೆ ಉತ್ತರಿಸಿದ ಡಾ ಆನಂದ್, ಸರಕಾರದ ಮುಖ್ಯ ಕಾರ್ಯದರ್ಶಿ ಅವರು ಕಾರ್ಯಕ್ರಮ ನಿಲ್ಲಿಸುವುದಕ್ಕೆ ಹೇಳಿದ್ದಾರೆ. ಹೀಗಾಗಿ ಕಾರ್ಯಕ್ರಮ ನಿಲ್ಲಿಸಲಾಗಿದೆ. ಅಧಿಕಾರಿಗಳನ್ನು ಅಮಾನತು ಮಾಡಲು ಆದೇಶಿಸಿದೆ ಎಂದು ಉತ್ತರ ನೀಡಿದರು. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇನೆ, ವರದಿ ತರಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.