|ಕಾಡು ಹಾನಿ |ಕೃಷಿ ಪ್ರಾಕೃತಿಕ ನಾಶಕ್ಕೆ ಕಾರಣ |ಮಾತೃಭೂಮಿಯ ಪ್ರೀತಿ
ಮೂಡುಬಿದಿರೆ: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮೂಲಕ ಕೇರಳ ರಾಜ್ಯದ ಕಾಸರಗೋಡಿಗೆ ವಿದ್ಯುತ್‌ಪೂರೈಕೆ ಮಾಡುವ ಯೋಜನೆಗೆ ನೂರೆಂಟು ಅಡ್ಡಿಯಾಗಿದೆ. ಒಂದೆಡೆ ಈ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸುವ ಉತ್ಸಾಹದಲ್ಲಿ ಕಂಪೆನಿಯಿದ್ದರೂ, ಜನತೆಯ ತೀವ್ರ ವಿರೋಧಗಳು ಯೋಜನೆಯ ಆರಂಭಕ್ಕೆ ಅಡ್ಡಿಯಾಗುತ್ತಿದೆ. 400ಕೆವಿ ಉಡುಪಿ ಕಾಸರಗೋಡು ಟ್ರಾನ್ಸ್‌ಮಿಷನ್‌ಲೈನ್(ಯುಕೆಟಿಎಲ್)ಇದಾಗಿದ್ದು, ಯೋಜನೆ ಅನುಷ್ಠಾನವಾದಲ್ಲಿ ಕರ್ನಾಟಕಕ್ಕೆ ವಿದ್ಯುತ್‌ಮಾರಾಟದಿಂದ ಆದಾಯವಾಗಲಿದೆ ಎಂಬ ಮಾಹಿತಿಯಿದೆ.

ಗ್ರೀನ್‌ಎನರ್ಜಿ ಕಾರಿಡಾರ್‌ಯೋಜನೆಯಲ್ಲಿ ಎಲ್ಲರಾಜ್ಯಗಳ ಪವರ್‌ಗ್ರಿಡ್‌ಗಳನ್ನು ನ್ಯಾಷನಲ್‌ಪವರ್‌ಗ್ರಿಡ್‌ಗೆ ಸಂಪರ್ಕಿಸಲು ರೂಪಿಸಿದ ಅಂತಾರಾಜ್ಯ ಯೋಜನೆ ಇದಾಗಿದೆ. ಕೇಂದ್ರ ಇಂಧನ ಸಚಿವಾಲಯ ೨೦೨೨ರ ಜನವರಿ ೬ರಂದು ಈ ಯೋಜನೆಗೆ ಒಪ್ಪಿಗೆ ನೀಡಿದೆ. ಉತ್ತರ ಪ್ರದೇಶ, ತಮಿಳುನಾಡು, ರಾಜಸ್ಥಾನ, ಹಿಮಾಚಲ ಪ್ರದೇಶ, ಕೇರಳ, ಕರ್ನಾಟಕ, ಗುಜರಾತ್‌ರಾಜ್ಯಗಳನ್ನು ಈ ಯೋಜನೆ ಒಳಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಮೂಡುಬಿದಿರೆ, ಬಂಟ್ವಾಳ ಮತ್ತು ಮುಲ್ಕಿ, ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಕಾಪು ತಾಲೂಕುಗಳಲ್ಲಿ ಈ ಯೋಜನೆಯ ಟವರ್‌ಗಳು ಸ್ಥಾಪನೆಗೊಂಡು ವಿದ್ಯುತ್ ತಂತಿ ಕೇರಳವನ್ನು ಸಂಪರ್ಕಿಸಲಿದೆ.
ಪವರ್ ಲೈನ್ ಯೋಜನೆಯ ಅನುಷ್ಠಾನವನ್ನು ಸ್ಟೈರ್‌ಲೈಟ್ ಕಂಪೆನಿ ವಹಿಸಿಕೊಂಡಿದ್ದು ಈಗಾಗಲೇ ಉಡುಪಿಯಿಂದ ಕಾಸರಗೋಡಿಗೆ ಸಂಪರ್ಕಿಸುವ ವಿದ್ಯುತ್ ಲೈನ್ ಹಾದುಹೋಗುವ ಪ್ರದೇಶಗಳ ಸರ್ವೇ ಕಾರ್ಯವನ್ನು ಹಲವು ಕಡೆಗಳಲ್ಲಿ ಪೂರ್ಣಗೊಳಿಸಿದೆ. ಕಾಪು, ಕಾರ್ಕಳ,ಮುಲ್ಕಿ, ಮೂಡುಬಿದಿರೆ,ಮಂಗಳೂರು, ಬಂಟ್ವಾಳ ಕ್ಷೇತ್ರ ವ್ಯಾಪ್ತಿಯಲ್ಲಿ ವಿದ್ಯುತ್ ಲೈನ್ ಸಾಗಲಿದೆ. ೧೭೭ಕ್ಕೂ ಹೆಚ್ಚು ಲೊಕೇಷನ್‌ಗಳ ಮೂಲಕ ಈ ಲೈನ್ ಸಾಗಿ ಕೇರಳ ತಲುಪಲಿದೆ. ಮೂಡುಬಿದಿರೆ ಕ್ಷೇತ್ರವ್ಯಾಪ್ತಿಯ ೨೭ಲೊಕೇಷನ್‌ಗಳ ಮೂಲಕ ವಿದ್ಯುತ್ ತಂತಿ ಹಾದುಹೋಗಲಿದ್ದು, ಈಗಾಗಲೇ ೧೮ಲೊಕೇಷನ್‌ಗಳ ಸರ್ವೇ ಕಾರ್ಯ ಪೂರ್ಣಗೊಂಡಿದೆ.
ಡಿಸೆಂಬರ್‌ನಲ್ಲಿ ಮಾಹಿತಿ: ಇಡೀ ಜಿಲ್ಲಾ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತ್ ಹಾಗೂ ನಗರ ಪಂಚಾಯತ್‌ಗಳಿಗೆ ೨೦೨೨ರಲ್ಲಿಯೇ ಕಂಪೆನಿ ನಕ್ಷೆಯ ಮಾಹಿತಿಯನ್ನು ನೀಡಿತ್ತು. ಹಾಗೂ ಮಾಹಿತಿ ಫಲಕಗಳಲ್ಲಿ ಪ್ರದರ್ಶಿಸುವಂತೆ ವಿನಂತಿಸಿತ್ತು. ಆ ಪ್ರಕಾರ ಬಹುತೇಕ ಎಲ್ಲಾ ಸ್ಥಳೀಯಾಡಳಿತ ಕಚೇರಿಗಳಲ್ಲಿ ಇದು ಪ್ರದರ್ಶನಗೊಂಡಿದ್ದು, ಹಲವು ಭಾಗಗಳಲ್ಲಿ ಪ್ರಭಲ ವಿರೋಧ ವ್ಯಕ್ತವಾಗಿದೆ. ಮೂಡುಬಿದಿರೆ ವ್ಯಾಪ್ತಿಯ ತೆಂಕಮಿಜಾರು, ಬಡಗಮಿಜಾರು, ಕಲ್ಲಮುಂಡ್ಕೂರು, ಅಶ್ವತ್ಥಪುರಗಳಲ್ಲಿ ವಿರೋಧವಿದ್ದು, ಗ್ರಾಮ ಪಂಚಾಯತ್‌ನಲ್ಲಿ ಯೋಜನೆ ಅನುಷ್ಠಾನಕ್ಕೆ ವಿರೋಧಿಸಿ ನಿರ್ಣಯ ಕೈಗೊಳ್ಳಲಾಗಿದೆ. ಪವರ್ ಲೈನ್ ಸಾಗುವ ಪ್ರದೇಶಗಳಲ್ಲಿ ಮುಖ್ಯವಾಗಿ ಕೃಷಿಭೂಮಿಯಿದ್ದು ದೀರ್ಘಾವಧಿಯಿಂದ ಸ್ವಂತ ಭೂಮಿಯಲ್ಲಿ ಕೃಷಿಮಾಡುತ್ತಾ ಬದುಕು ಕಟ್ಟುವ ಮಂದಿ ಭೂಮಿ ನೀಡಲು ಹಿಂದೇಟು ಹಾಕುತ್ತಿದ್ದಾರೆ.
ಮಾಹಿತಿ ಮುಚ್ಚಿಟ್ಟ ಪಿಡಿಒ: ತೆಂಕಮಿಜಾರು ಮತ್ತು ಬಡಗಮಿಜಾರು ಗ್ರಾಮಗಳನ್ನೊಳಗೊಂಡ ಪಂಚಾಯತ್‌ಗೆ ಡಿಸೆಂಬರ್ ೩, ೨೦೨೩ರಂದು ಕಂಪೆನಿಯ ಅಧಿಕೃತ ಅಧಿಕಾರಿಗಳು ಭೇಟಿನೀಡಿ ಗ್ರಾಮಸ್ಥರಿಗೆ ಮಾಹಿತಿ ನೀಡುವ ಉದ್ದೇಶದಿಂದ ಸಭೆಯೊಂದನ್ನು ಆಯೋಜಿಸಲು ಮನವಿ ಮಾಡಿದ್ದರು. ಪಂಚಾಯತ್ ಮನವಿ ಪತ್ರ ಸ್ವೀಕರಿಸಿ ಸಹಿ ಹಾಕಿ ನೀಡಿದೆಯಾದರೂ, ಗ್ರಾಮಸ್ಥರಿಗೆ ಈ ಬಗ್ಗೆ ಮಾಹಿತಿ ನೀಡಿಲ್ಲ. ಸಭೆಯನ್ನು ಆಯೋಜಿಸಿಯೂ ಇಲ್ಲ. ಇದೀಗ ಈ ಅಂಶ ಬೆಳಕಿಗೆ ಬಂದಿದ್ದು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಧೋರಣೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಸ್ಪಷ್ಟತೆ ಇಲ್ಲ!: ನಿಡ್ಡೋಡಿಯ ಮಾತೃಭೂಮಿ ಸಂರಕ್ಷಣಾ ಸಮಿತಿ ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ನಿಡ್ಡೋಡಿ, ಕೊಲತ್ತಾರು ಪದವಿನಲ್ಲಿ ಕೃಷಿಯಾಧಾರಿತ ಕುಟುಂಬಗಳಿದ್ದು, ಈ ವ್ಯಾಪ್ತಿಯಲ್ಲಿ ವಿದ್ಯುತ್ ತಂತಿ ಹಾದುಹೋಗುತ್ತದೆಂಬ ಕಾರಣದಿಂದ ತೀವ್ರ ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ. ಭತ್ತ, ತೆಂಗು, ಅಡಿಕೆ ಮೊದಲಾದ ಕೃಷಿ ನೈಸರ್ಗಿಕ ಪ್ರಕೃತಿಯಲ್ಲಿ ಉತ್ತಮವಾಗಿ ನಡೆಯುತ್ತಿದ್ದು, ಇಂತಹ ಪವರ್ ಲೈನ್ ಈ ಭಾಗದಲ್ಲಿ ಸಾಗುವುದರಿಂದಾಗಿ ಭವಿಷ್ಯದಲ್ಲಿ ತೊಂದರೆಯಾಗುತ್ತದೆಂಬ ಆತಂಕ ಜನತೆಯಲ್ಲಿ ಮನೆಮಾಡಿದೆ. ಈ ಭಾಗಕ್ಕೆ ಯಾವೊಬ್ಬ ಅಪರಿಚಿತ ವ್ಯಕ್ತಿ ಬಾರದಂತೆ ಸಂಘಟನೆ ಎಚ್ಚರಿಕೆ ವಹಿಸಿ ಫಲಕ ಅಳವಡಿಸಿದೆ. ಅಪರಚಿತ ವ್ಯಕ್ತಿಗಳು, ವಾಹನ ಬಂತೆಂದರೆ ಊರವರು ಒಗ್ಗಟ್ಟಾಗಿ ಪ್ರತಿಭಟಿಸುತ್ತಾರೆ.
ಯೋಜನೆಗಳು ಇಲ್ಲಿ ಬೇಡ: ಕಂಪೆನಿಯವರು ಪಂಚಾಯತ್‌ಗೆ ಬರಲಿ. ಗ್ರಾಮಸಭೆ ಕರೆಯಲಿ, ತಹಶೀಲ್ದಾರ್, ಜಿಲ್ಲಾಧಿಕಾರಿಗಳೂ ಅಲ್ಲಿಗೆ ಬರಲಿ. ಜನರ ಅಭಿಪ್ರಾಯ ಕ್ರೋಢೀಕರಿಸಿ ಮುನ್ನಡೆಯಲಿ ಎಂಬ ಅಭಿಪ್ರಾಯವನ್ನು ಮಾತೃಭೂಮಿ ಸಮಿತಿ ಒಕ್ಕೊರಲಿನಿಂದ ಆಗ್ರಹಿಸಿದೆ. ಯೋಜನೆಯ ಬಗ್ಗೆ ಪಂಚಾಯತ್‌ನವರು ನಮಗೇನೂ ಗೊತ್ತಿಲ್ಲ ಅನ್ನುತ್ತಿದ್ದಾರೆ. ಜನರಿಗೆ ಮಾಹಿತಿ ನೀಡಲು ಗ್ರಾಮ ಸಭೆ ಕರೆಯಲಿ. ಪರಿಹಾರದ ವಿಚಾರ ಅಲ್ಲಿ ಚರ್ಚೆಯಾಗಲಿ. ಅದಕ್ಕೂ ಮೊದಲು ಯಾವ ಸರ್ವೇಗೂ ನಾವು ಬಿಡೆವು ಎಂದು ಮಾತೃಭೂಮಿ ಸಮಿತಿಯ ಅಧ್ಯಕ್ಷ ಆಲ್ಫೋನ್ಸ್ ಡಿʼಸೋಜ ಎಚ್ಚರಿಕೆ ನೀಡಿದ್ದಾರೆ.
ನಮಗೆ ಬೇಡ: ಇಂತಹ ಯೋಜನೆಗಳು ನಮ್ಮ ನೆಲದಲ್ಲಿ ಬೇಡವೇ ಬೇಡ ಎಂಬ ಅಭಿಪ್ರಾಯವನ್ನು ಗಿಲ್ಬರ್ಟ್ ಡಿʼಸೋಜ, ಜಿಸ್ಟಲ್ ಡಿʼಸೋಜ, ರಾಮ ಗೌಡ, ದಾಮೋದರ,ಬಾಲರಾಜ್,ಜಯರಾಮ್ ಹೀಗೆ ಹಲವಾರು ಮಂದಿ ನಮ್ಮೂರಲ್ಲಿ ವಿದ್ಯುತ್ ಲೈನ್ ಯೋಜನೆ ಸಾಗುವುದು ಬೇಡವೆಂಬ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬಡಗ ಮಿಜಾರು, ತೆಂಕಮಿಜಾರು ಗ್ರಾಮ ವ್ಯಾಪ್ತಿಯಲ್ಲಿ ವಿದ್ಯುತ್ ಲೈನ್ ಹೋಗುತ್ತದೆಂಬ ಸುತ್ತೋಲೆ ಪಂಚಾಯತ್‌ಗೆ ಬಂದಿದೆ. ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪವಾಗಿದೆ. ಕೃಷಿಕರು, ಭೂ ಮಾಲೀಕರು ಆಕ್ಷೇಪ ಇದ್ದರೆ ಮೆಸ್ಕಾಂ ಮತ್ತು ಭೂಸ್ವಾಧೀನ ಅಧಿಕಾರಿಗಳಿಗೆ ಆಕ್ಷೇಪ ನೀಡಬೇಕು. ಆಕ್ಷೇಪ ಅಲ್ಲಿ ತಿಳಿಸಬೇಕು. ಕೆಲವು ಭೂ ಮಾಲಕರು ಪರಿಹಾರ ಬಂದರೆ ತೆಗೆದುಕೊಳ್ಳುವ ಆಶಯ ವ್ಯಕ್ತಪಡಿಸಿದ್ದಾರೆ.
ದಿನೇಶ್ ಕುಮಾರ್, ಪಂಚಾಯತ್ ಸದಸ್ಯರು.
ಸ್ಪಷ್ಟತೆ ನೀಡಿದ ಕಂಪೆನಿ: ಸದ್ಯದಲ್ಲೇ ಸಭೆ
ಯುಕೆಟಿಎಲ್ ಪ್ರತಿನಿಧಿಗಳೊಂದಿಗೆ ತೆಂಕಮಿಜಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಯಿತು. ಯೋಜನೆ ಮತ್ತು ಅದರ ಅನುಷ್ಠಾನದ ಕಾರ್ಯತಂತ್ರದ ಬಗ್ಗೆ ಉತ್ತಮ ತಿಳುವಳಿಕೆಯನ್ನು ಮಾತೃಭೂಮಿ ಸಂರಕ್ಷಣಾ ಸಮಿತಿ, ಕಲ್ಲಮುಂಡ್ಕೂರು ಅಪೇಕ್ಷಿಸಿದ್ದು, ಸಮಿತಿಯ ಅಧ್ಯಕ್ಷ ಆಲ್ಫೋನ್ಸ್ ಡಿʼಸೋಜ ಸಹಿತ ಸಂತ್ರಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಾಜೆಕ್ಟ್ ಅನುಷ್ಠಾನಗೊಳಿಸುವ ಸ್ಟೆರ್‌ಲೈಟ್ ಪವರ್ ಕಂಪೆನಿಯ ಸಿನಿಯರ್ ಮ್ಯಾನೇಜರ್ ರಂಜನ್ ಮಾಧವನ್ ಆಚಾರ್ ಹಾಗೂ ಮಂಜುನಾಥ ಶೆಟ್ಟಿಯವರು ತೆಂಕಮಿಜಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಾತೃಭೂಮಿ ರಕ್ಷಣಾ ವೇದಿಕೆಯ ಸದಸ್ಯರಿಗೆ ಸರಕಾರದ ಸಂಪೂರ್ಣ ದಾಖಲೆಗಳು, ಯೋಜನೆಯ ಅನುಷ್ಠಾನಕ್ಕೆ ಬೇಕಾದ ಎಲ್ಲಾ ಸರ್ಟಿಫಿಕೇಟ್ ಸಹಿತ ಆಧಾರಗಳನ್ನು ನೀಡಿದೆ. ಸಾಕಷ್ಟು ಬಾರಿ ಈ ಭಾಗದ ಜನತೆಯನ್ನು ಸೇರಿಸಿ ಸಭೆಯನ್ನು ಮಾಡಲು ಪಂಚಾಯತ್‌ಗೆ ನೀಡಿದ ದಾಖಲೆ ಪ್ರತಿಯನ್ನೂ ಪ್ರದರ್ಶಿಸಿದೆ.
ಸಭೆ: ಸದ್ಯದಲ್ಲೇ ತೆಂಕಮಿಜಾರು ಗ್ರಾಮಪಂಚಾಯತ್‌ನಲ್ಲಿ ಯೋಜನೆಯ ವಿಚಾರವಾಗಿ ವಿಶೇಷ ಗ್ರಾಮಸಭೆಯನ್ನು ಪಿಡಿಒ, ಅಧ್ಯಕ್ಷರು, ಹಾಗೂ ಕಂಪೆನಿಯ ಪ್ರಮುಖರ ಉಪಸ್ಥಿತಿಯಲ್ಲಿ ನಡೆಸುವ ಬಗ್ಗೆ ಪಿಡಿಒ ಭರವಸೆನೀಡಿದ್ದಾರೆ.