ಮೂಡುಬಿದಿರೆ: ಒಂದು ರಾಷ್ಟ್ರ ಒಂದು ಗ್ರಿಡ್ ಎಂಬ ಪರಿಕಲ್ಪನೆ ಅನಿವಾರ್ಯ. ದೇಶದ ಎಲ್ಲಾ ಭಾಗಗಳಲ್ಲೂ ಒಂದೇ ಸಮಾನವಾದ ವಾತಾವರಣ, ಅನುಕೂಲಕರ ಪರಿಸ್ಥಿತಿ ಇಲ್ಲದ ಪ್ರಸಕ್ತ ಸನ್ನಿವೇಶದಲ್ಲಿ ಪ್ರತಿಯೊಬ್ಬರಿಗೂ ಸಮಾನ ನ್ಯಾಯ ದೊರಕಿಸಿಕೊಡುವ ಸದುದ್ದೇಶದಿಂದ ಒಂದು ರಾಷ್ಟ್ರ ಒಂದುಗ್ರಿಡ್ ಎಂಬ ಪರಿಕಲ್ಪನೆ ಅತ್ಯುತ್ತಮವಾದದ್ದು.

ಕಲ್ಲಿದ್ದಲು,ನೀರು ಹೀಗೆ ಹಲವು ರೀತಿಯ ಸಂಪನ್ಮೂಲಗಳಿಂದ ವಿದ್ಯುತ್ ಉತ್ಪಾದನೆಯಾಗುತ್ತಿದ್ದರೂ ದೇಶದ ಅನೇಕ ಕಡೆಗಳಲ್ಲಿ ಸಾಕಷ್ಟು ವಿದ್ಯುತ್ ಲಭ್ಯತೆಯಿಲ್ಲದೆ ತೊಂದರೆಯುಂಟಾಗುತ್ತಿದೆ. ಕೃಷಿ, ವಾಣಿಜ್ಯಬಳಕೆ, ಔದ್ಯಮಿಕ ಬಳಕೆ, ಗೃಹಬಳಕೆಗೆ ತೊಂದರೆಯುಂಟಾಗುತ್ತಿದೆ. ಒಂದು ರಾಷ್ಟ್ರ ಒಂದು ಗ್ರಿಡ್ ಪರಿಕಲ್ಪನೆ ಸಮರ್ಪಕವಾಗಿ ಜಾರಿಯಾದರೆ ಈ ಎಲ್ಲಾ ಸಮಸ್ಯೆಗಳು ಸಂಪೂರ್ಣವಾಗಿ ಮುಗಿದುಹೋಗಲಿವೆ.
ಎಲ್ಲಾ ಗ್ರಿಡ್‌ಗಳನ್ನು ಜೋಡಣೆಮಾಡುವ ತಂತ್ರಜ್ಞಾನ ಸಮರ್ಪಕವಾಗಿ ಅನುಷ್ಠಾನವಾದದ್ದೇ ಆದಲ್ಲಿ ವಿದ್ಯುತ್ ಉತ್ಪಾದನೆಯ ಪ್ರಮಾಣವೂ ಅಧಿಕವಾಗುವುದರಲ್ಲಿ ಸಂದೇಹವಿಲ್ಲ. ಕಾರಣವಿಷ್ಟೇ, ಎಲ್ಲಾ ಪ್ರಾದೇಶಿಕ ಗ್ರಿಡ್‌ಗಳ ಜೋಡಣೆಯಾಗುತ್ತಿದ್ದಂತೆಯೇ ವಿರಳ ಪ್ರದೇಶಗಳಿಗೆ ಹೆಚ್ಚುವರಿ ವಿದ್ಯುತ್ ಪೂರೈಕೆಗೆ ಅವಕಾಶ ಲಭ್ಯವಾಗಲಿದ್ದು ಇದರಿಂದಾಗಿ ಹೆಚ್ಚಿನಪ್ರಮಾಣದ ಬೇಡಿಕೆ ಬರಲಿದೆ. ಜೊತೆಗೆ ವಿದ್ಯುತ್‌ಚಕ್ತಿ ಮಾರಾಟವ್ಯವಸ್ಥೆ ಅಭಿವೃದ್ದಿಯಾಗಿ ಸಂಪನ್ಮೂಲ, ಆದಾಯ ಕ್ರೋಢೀಕರಣಕ್ಕೆ ಅವಕಾಶವಾಗುತ್ತದೆ. ವಿದ್ಯುತ್ ಮಾರುಕಟ್ಟೆ ಜಾಲವ್ಯವಸ್ಥೆಗೆ ದೊಡ್ಡ ಅವಕಾಶ ಮಾಡಿಕೊಡಲಿದೆ.
ರಾಷ್ಟ್ರೀಯ ಗ್ರಿಡ್‌ನ ವಿಕಾಸ ಅವಲೋಕಿಸಿದರೆ ಪ್ರಾದೇಶಿಕ ಆಧಾರದ ಮೇಲೆ ರಾಷ್ಟ್ರೀಯ ಗ್ರಿಡ್ ನಿರ್ವಹಣೆ ಅರವತ್ತರ ದಶಕದಲ್ಲಿ ಪ್ರಾರಂಭವಾಯಿತು. ಯೋಜನೆ ಮತ್ತು ಕಾರ್ಯಾಚರಣೆಯ ಉದ್ದೇಶಗಳಿಗಾಗಿ ಭಾರತೀಯ ವಿದ್ಯುತ್ ವ್ಯವಸ್ಥೆಯನ್ನು ಐದು ಪ್ರಾದೇಶಿಕ ಗ್ರಿಡ್‌ಗಳಾಗಿ ವಿಂಗಡಿಸಲಾಗಿದೆ. ಪ್ರಾದೇಶಿಕ ಗ್ರಿಡ್‌ಗಳ ಏಕೀಕರಣ ಮತ್ತು ಆ ಮೂಲಕ ರಾಷ್ಟ್ರೀಯ ಗ್ರಿಡ್ ಸ್ಥಾಪನೆಯನ್ನು ತೊಂಬತ್ತರ ದಶಕದ ಆರಂಭದಲ್ಲಿ ಪರಿಕಲ್ಪನೆ ಮಾಡಲಾಯಿತು.