MOODBIDRI :ಪ್ರವಾಸಕ್ಕೂ ಮೊದಲು ಪೂರ್ವಸಿದ್ಧತೆ ಅತೀ ಅಗತ್ಯ-ನಾಗತೀಹಳ್ಳಿ

ಮೂಡುಬಿದಿರೆ: ಪ್ರವಾಸ ಕಥನ ಎಂದರೆ ಕೇವಲ ಫೋಟೊ, ಸೆಲ್ಫಿಗಳಲ್ಲ. ಅಂತರದೃಷ್ಟಿಯಿಂದ ಆಸ್ವಾದಿಸುವುದು, ಧ್ಯಾನಸ್ಥ ಸ್ಥಿತಿಯಲ್ಲಿ ಗ್ರಹಿಸುವುದು, ಬದ್ಧತೆಯಿಂದ ಬರೆಯುವುದು ಎಂದು ಸಾಹಿತಿ, ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಇಂಗ್ಲಿಷ್ ವಿಭಾಗವು ಕುವೆಂಪು ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡ ‘ಫಿಲೊಕಲಿ’ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ನಾಗತೀಹಳ್ಳಿ ಚಂದ್ರಶೇಖರ್

ಬದುಕೊಂದು ಚಲನೆ. ನಾವೆಲ್ಲ ಅಲೆಮಾರಿ. ರಾಮನ ಚಲನೆಯೇ ರಾಮಾಯಣ. ಡಾರ್ವಿನ್ ಚಲನೆಯ ಪ್ರತಿಫಲವೇ ‘ವಿಕಾಸವಾದ’. ಹೀಗೆ ಪುರಾಣ, ಇತಿಹಾಸ, ವಿಜ್ಞಾನ, ಜನಪದ ಎಲ್ಲವೂ ಚಲನೆಯನ್ನು ಆಧರಿಸಿವೆ ಎಂದರು. ಪಕ್ಕದ ಹಳ್ಳಿಗೆ ಹೋಗುವುದೂ ಪ್ರವಾಸ. ಅದೂ ನಿಮಗೆ ಅರಿವಲ್ಲದೇ ಜ್ಞಾನ ನೀಡುತ್ತದೆ. ಯಾವುದೇ ಪ್ರವಾಸಕ್ಕೂ ಮೊದಲು ಪೂರ್ವಸಿದ್ಧತೆ ಅತೀ ಅಗತ್ಯ ಎಂದರು.

ಎಲ್ಲ ಮಾಹಿತಿಯೂ ಜ್ಞಾನವಲ್ಲ. ಜ್ಞಾನ ನಿಮ್ಮದೇ ಅನುಭಾವ. ಪ್ರವಾಸಕ್ಕೆ ಹಾರುವ ರೆಕ್ಕೆ ಹಾಗೂ ತಳಕ್ಕಿಳಿಯುವ ಬೇರು ಬೇಕು. ವಿಶ್ವಬಂಧುತ್ವ ಎಲ್ಲದಕ್ಕಿಂತಲೂ ಅಗತ್ಯ ಎಂದು ವಿವರಿಸಿದರು.

ಪುಸ್ತಕವು ಹಣತೆಯಂತೆ ಬೆಳಗುತ್ತಲೇ ಇರುತ್ತದೆ. ಆದರೆ, ಇಂದು ಸಹೃದಯಿಗಳೂ ಗಿರಾಕಿಗಳಾದ ಸಂಸ್ಕೃತಿಯ ಕಾಲ ಘಟ್ಟದಲ್ಲಿ ನಾವಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ರಂಗಕರ್ಮಿ ನಾ.ದಾಮೋದರ ಶೆಟ್ಟಿ ಮಾತನಾಡಿ, ‘ಜ್ಞಾನ ಭಂಡಾರ ವೃದ್ಧಿಸಿಕೊಳ್ಳಲು ಓದು ಅತೀ ಅಗತ್ಯ. ಸ್ಥಳೀಯ ಭಾಷೆಯ ಮೂಲಕ ಹೆಚ್ಚಿನ ಜ್ಞಾನ ಪಡೆದುಕೊಳ್ಳಲು ಸಾಧ್ಯ’ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ‘ಸ್ಥಳೀಯ ಭಾಷೆಯನ್ನು ಗೌರವಿಸಿ. ಜ್ಞಾನ ಪಡೆಯಲು ಭಾಷೆಗಿಂತ ಬದ್ಧತೆ ಮುಖ್ಯ. ಬದುಕಿನಲ್ಲಿ ಸ್ಪರ್ಧೆಗಿಂತ ಸಾಮರಸ್ಯ ಅಗತ್ಯ. ನಾವು ಯಾವುದೇ ಕಾರ್ಯ ಮಾಡಿದರೂ, ಅದರಲ್ಲಿ ಸಂದೇಶ ಇರಬೇಕು’ ಎಂದರು.

ಕಾಲೇಜಿನ  ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನರಾಂ ಸುಳ್ಯ, ಇಂಗ್ಲಿಷ್ ವಿಭಾಗದ ಚೈತ್ರಾ ಪೂಣಚ್ಚ, ಸಮನ್ ಸೈಯ್ಯದ್, ಸಾತ್ವಿಕ್, ನವ್ಯಾ ಇದ್ದರು.

ಫಿಲೊಕಲಿ ಅಂಗವಾಗಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Share

Leave a Reply

Your email address will not be published. Required fields are marked *