ಮೂಡುಬಿದಿರೆ: ಮೂಡುಬಿದಿರೆ ಕ್ಷೇತ್ರವನ್ನು ಒಂದು ಮಾದರೀ ಕ್ಷೇತ್ರವನ್ನಾಗಿ ಮಾಡುವ ಕನಸು ನನ್ನದು. ಕ್ಷೇತ್ರದ ಅಭಿವೃದ್ದಿಗೆ ಸೇವಕನಾಗಿ ದುಡಿಯುವೆ ಎಂದು ಮುಲ್ಕಿ ಮೂಡುಬಿದಿರೆಯ ನೂತನ ಶಾಸಕ ಉಮಾನಾಥ ಎ ಕೋಟ್ಯಾನ್ ಹೇಳಿದರು. ಭರ್ಜರಿ ಜಯಗಳಿಸಿದ ನಂತರ ಸಂಘನಿಕೇತನ, ಬಿಜೆಪಿ ಜಿಲ್ಲಾ ಕಾರ್ಯಾಲಯದ ಭೇಟಿಯ ನಂತರ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿರುವ ಪಕ್ಷದ ಕಾರ್ಯಾಲಯಕ್ಕೆ ಭೇಟಿನೀಡಿ ಭಾರತ ಮಾತೆ, ಪಕ್ಷ ಪ್ರಮುಖರ ಭಾವಚಿತ್ರಗಳಿಗೆ ಪುಷ್ಪಾರ್ಚನೆಗೈದು, ಮಾತನಾಡಿದರು.

ಈ ಗೆಲುವು ಕಾರ್ಯಕರ್ತರ ಗೆಲುವಾಗಿದೆ. ನಿಷ್ಠಾವಂತ ಕಾರ್ಯಕರ್ತರು ಪಕ್ಷದ ಗೆಲುವಿಗಾಗಿ ದುಡಿದಿದ್ದಾರೆ. ಅದರ ಫಲವಾಗಿ ಹಾಗೂ ಕಳೆದ ಸಾಲಿನ ಅಭಿವೃದ್ದಿಯ ಕಾರಣಕ್ಕಾಗಿ ಈ ಗೆಲುವು ಪ್ರಾಪ್ತವಾಗಿದೆ ಎಂದರು.
ಈ ಸಂದರ್ಭ ಮಂಡಲಾಧ್ಯಕ್ಷ ಸುನೀಲ್ ಆಳ್ವ, ಮುಖಂಡರಾದ ಸುಕೇಶ್ ಶೆಟ್ಟಿ, ಗೋಪಾಲ್ ಶೆಟ್ಟಿಗಾರ್, ಕೇಶವಕರ್ಕೇರ, ಹಾಗೂ ಪಕ್ಷ ಪ್ರಮುಖರು ಇದ್ದರು.

ಮೆರವಣಿಗೆ: ವಿದ್ಯಾಗಿರಿಯ ಬಿಜೆಪಿ ಕಾರ್ಯಾಲಯದಿಂದ ಬೈಕ್, ಕಾರುಗಳೊಂದಿಗೆ ವಾಹನ ರ್ಯಾಲಿಯ ಮೂಲಕ ಮೂಡುಬಿದಿರೆಯ ಹನುಮಾನ್ ದೇಗುಲಕ್ಕೆ ಉಮಾನಾಥ ಕೋಟ್ಯಾನ್ ತೆರಳಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. ಅಲ್ಲಿಂದ ಕಟೀಲು ದುರ್ಗಾಪರಮೇಶ್ವರೀ ಕ್ಷೇತ್ರ, ಬಪ್ಪನಾಡುಕ್ಷೇತ್ರಗಳಿಗೆ ತೆರಳಿ ಪೂಜೆ ಸಲ್ಲಿಸಿದರು.