ಜವನರ್ ಬೆದ್ರಕ್ಕೆ ದಶಕದ ಸಂಭ್ರಮ; ‘ಬೆದ್ರ ಸೇವಾ ಪ್ರತಿಷ್ಠಾನ’ವಾಗಿ ಹೊಸ ಸ್ವರೂಪ

ಮೂಡುಬಿದಿರೆ: ಸಮಾಜಸೇವೆಯೇ ದೇವರ ಸೇವೆ ಎಂಬ ಧ್ಯೇಯವಾಕ್ಯದೊಂದಿಗೆ ಕಳೆದ ಹತ್ತು ವರ್ಷಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಜವನರ್ ಬೆದ್ರ ಫೌಂಡೇಶನ್ (ರಿ.) ಇದೀಗ ತನ್ನ 10ನೇ ವರ್ಷದ ಸಂಭ್ರಮದಲ್ಲಿದೆ. 2017ರಿಂದ 2027ರವರೆಗಿನ ಒಂದು ದಶಕದ ಸೇವಾ ಪಯಣವನ್ನು ಸ್ಮರಿಸುತ್ತಿರುವ ಸಂಘಟನೆ, ನೂತನ ಸಂಘಟನಾತ್ಮಕ ಸ್ವರೂಪದೊಂದಿಗೆ ಸಮಾಜಸೇವೆಯ ಕಾರ್ಯಗಳನ್ನು ಮತ್ತಷ್ಟು ವಿಸ್ತರಿಸಲು ಸಜ್ಜಾಗಿದೆ.


ಅಮರ್ ಕೋಟೆ ಅವರ ಸಂಸ್ಥಾಪಕತ್ವದಲ್ಲಿ, ಯುವ ಸಮಾನ ಮನಸ್ಕರ ತಂಡದೊಂದಿಗೆ ಮುನ್ನಡೆಯುತ್ತಿರುವ ಈ ಸಂಘಟನೆ, ಸ್ವಚ್ಛತೆ, ರಕ್ತದಾನ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಮೂಡುಬಿದಿರೆ ಪರಿಸರದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿದೆ.
108 ವಾರಗಳ ನಿರಂತರ ಸ್ವಚ್ಛತಾ ಅಭಿಯಾನ: ಸ್ವಚ್ಛ ಹಾಗೂ ಸುಂದರ ಮೂಡುಬಿದಿರೆಯ ನಿರ್ಮಾಣದ ಸಂಕಲ್ಪದೊಂದಿಗೆ ‘ಕ್ಲೀನ್ ಅಪ್ ಮೂಡುಬಿದಿರೆ’ ಹೆಸರಿನಲ್ಲಿ ಸತತ 108 ವಾರಗಳ ಕಾಲ ಸ್ವಚ್ಛತಾ ಅಭಿಯಾನ ನಡೆಸಿರುವುದು ಸಂಘಟನೆಯ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ. ಸ್ವಚ್ಛತೆಯ ಕುರಿತು ಜನಜಾಗೃತಿ ಮೂಡಿಸುವುದರ ಜತೆಗೆ, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ಕಾರ್ಯದಲ್ಲಿ ಯುವ ತಂಡ ಸಕ್ರಿಯವಾಗಿ ತೊಡಗಿಸಿಕೊಂಡಿದೆ.

ಅಮರ್‌ ಕೋಟೆ, ಸಂಸ್ಥಾಪಕ, ಜವನೆರ್‌ ಬೆದ್ರ

ರಕ್ತದಾನ, ಜೀವದಾನ: ‘ರಕ್ತದಾನ ಶ್ರೇಷ್ಠದಾನ’ ಎಂಬ ಆಶಯದೊಂದಿಗೆ ನಿರಂತರವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿರುವ ಸಂಘಟನೆ, ಅಗತ್ಯವಿರುವವರಿಗೆ ರಕ್ತವನ್ನು ಒದಗಿಸುವ ಕಾರ್ಯವನ್ನೂ ಸದ್ದಿಲ್ಲದೆ ನಡೆಸಿಕೊಂಡು ಬರುತ್ತಿದೆ. ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಇರುವವರಿಗೆ ನೆರವಾಗುವ ಮೂಲಕ ಮಾನವೀಯ ಸೇವೆಗೆ ಆದ್ಯತೆ ನೀಡುತ್ತಿದೆ.
ಇದರ ಜತೆಗೆ ಕೃಷ್ಣೋತ್ಸವ ಸೇರಿದಂತೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ಸಾಮಾಜಿಕ ಸಾಮರಸ್ಯಕ್ಕೂ ಕೊಡುಗೆ ನೀಡುತ್ತಿದೆ.
ನೂತನ ಸಂಘಟನಾತ್ಮಕ ಸ್ವರೂಪ: ಹತ್ತು ವರ್ಷಗಳ ಸೇವಾನುಭವವನ್ನು ಆಧಾರವಾಗಿಟ್ಟುಕೊಂಡು, ಸಂಘಟನೆಯ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶದಿಂದ ಜವನರ್ ಬೆದ್ರ ಫೌಂಡೇಶನ್ (ರಿ.) ಸಂಸ್ಥೆಯನ್ನು ‘ಬೆದ್ರ ಸೇವಾ ಪ್ರತಿಷ್ಠಾನ (ರಿ.), ಮೂಡುಬಿದಿರೆ’ ಎಂದು ಮರುನಾಮಕರಣ ಮಾಡುವ ಉದ್ದೇಶ ಹೊಂದಲಾಗಿದೆ.
ನೂತನ ಸಂಘಟನಾತ್ಮಕ ವ್ಯವಸ್ಥೆಯಲ್ಲಿ ಮಾತೃ ಸಂಸ್ಥೆಯ ಅಡಿಯಲ್ಲಿ ಎರಡು ಘಟಕಗಳು ಕಾರ್ಯನಿರ್ವಹಿಸಲಿವೆ. ಬೆದ್ರ ಸೇವಾ ಪ್ರತಿಷ್ಠಾನ (ರಿ.), ಮೂಡುಬಿದಿರೆ ಮಾತೃ ಸಂಸ್ಥೆಯಾಗಿದ್ದು, ಜವನರ್ ಬೆದ್ರ ಯುವ ಘಟಕ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸದಸ್ಯರನ್ನು ಒಳಗೊಂಡ ಘಟಕವಾಗಿರುತ್ತದೆ, ಜೊತೆಗೆ ಅಬ್ಬಕ್ಕ ಬ್ರಿಗೇಡ್ ಮಹಿಳಾ ಘಟಕವಾಗಿ ಕಾರ್ಯ ಮುಂದುವರಿಸಲಿದೆ.

ಯುವ ನಾಯಕತ್ವದ ಬೆಳವಣಿಗೆ, ಮಹಿಳಾ ಸಬಲೀಕರಣ, ಸಮಾಜಸೇವೆ, ಪರಿಸರ ಸಂರಕ್ಷಣೆ, ಸಾಂಸ್ಕೃತಿಕ ಪರಂಪರೆಯ ರಕ್ಷಣೆ ಹಾಗೂ ಸಾಮಾಜಿಕ ಅಭಿವೃದ್ಧಿಯ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಈ ನೂತನ ವ್ಯವಸ್ಥೆಯ ಪ್ರಮುಖ ಉದ್ದೇಶವಾಗಿದೆ.
ಸಮಾಜಸೇವೆಯ ಪಯಣಕ್ಕೆ ಹೊಸ ಅಧ್ಯಾಯ: ಒಂದು ದಶಕದ ಸೇವಾ ಅನುಭವವನ್ನು ಸ್ಫೂರ್ತಿಯಾಗಿಸಿಕೊಂಡು, ಹೊಸ ಚಿಂತನೆ, ಹೊಸ ನಾಯಕತ್ವ ಹಾಗೂ ದೃಢ ಸಂಕಲ್ಪದೊಂದಿಗೆ ಸಮಾಜದ ಒಳಿತಿಗಾಗಿ ಮುನ್ನಡೆಯಲು ಸಂಘಟನೆ ಸಜ್ಜಾಗಿದೆ. ಒಂದು ಮಾತೃ ಸಂಸ್ಥೆ… ಎರಡು ಘಟಕಗಳು… ಒಂದೇ ಧ್ಯೇಯ ಅದುವೇ ಸಮಾಜ ಸೇವೆ ಎಂಬ ನೆಲೆಯಲ್ಲಿ ಕಾರ್ಯನಿರ್ವಹಿಸಲಿದೆ.!

Share

Leave a Reply

Your email address will not be published. Required fields are marked *