ಬಹುಮುಖ ಪ್ರತಿಭೆ: ಇಂದಿನ ಜಗತ್ತಿನ ದೊಡ್ಡ ಶಕ್ತಿ

ಅಂಕಣ
“ನೀನು ಯಾವ ವೃತ್ತಿಯನ್ನು ಆಯ್ಕೆ ಮಾಡ್ತೀಯಾ?” ಎಂದು ಯಾರಾದರೂ  ಪ್ರಶ್ನಿಸಿದರೆ ಒಂದೇ ಪದದಲ್ಲಿ ಉತ್ತರ ಹೇಳಬೇಕೆಂಬ ಒತ್ತಡ ಬರುವುದು ಸಾಮಾನ್ಯ. ಏಕೆಂದರೆ ಬಾಲ್ಯದಿಂದಲೇ ನಮಗೆ ಈ ಪ್ರಶ್ನೆ ಕೇಳಲಾಗುತ್ತದೆ. ಹೀಗೆ ಕೇಳುತ್ತಿರುವವರ ನಿರೀಕ್ಷೆಯೂ ನಾವು ಒಂದೇ ವೃತ್ತಿಯ ಹೆಸರನ್ನು ಸೂಚಿಸಬೇಕೆನ್ನುವುದಾಗಿರುತ್ತದೆ. ಹೀಗಾಗಿ ನಮ್ಮ ಮನಸ್ಸು ಒಂದೇ ಒಂದು ವೃತ್ತಿಯ ಬಗ್ಗೆ ಯೋಚಿಸುವಂತೆ ಮಾಡುತ್ತದೆ.
ಎಲ್ಲರೂ ಸರಿಯಾದ ಆಯ್ಕೆಯನ್ನು ಸುಲಭವಾಗಿ ಮಾಡಿಕೊಳ್ಳುವಷ್ಟು ಅದೃಷ್ಟಶಾಲಿಗಳು ಅಲ್ಲ. ಒಂದೇ ವೃತ್ತಿಯ ಕುರಿತು ಚಿಂತಿಸಬೇಕಾದ  ಒತ್ತಡ ಇರುವುದರಿಂದ, ನಮ್ಮ ನಿಜವಾದ ಆಸಕ್ತಿಯನ್ನು ಬದಿಗಿರಿಸಿ, ಆ ಸಂದರ್ಭದಲ್ಲಿ ಹೊಳೆದದ್ದನ್ನು ಆಯ್ಕೆ ಮಾಡುತ್ತೇವೆ.
ಬಹುತೇಕ ಶಾಲೆಗಳು ಮತ್ತು ವೃತ್ತಿ ಸಲಹೆಗಾರರು “ಒಂದು ಕ್ಷೇತ್ರದ ಪರಿಣತಿ”ಗೆ ಒತ್ತು ಕೊಡುತ್ತಾರೆ. ಮನೆಯಲ್ಲಿ ಮತ್ತು ಸಮಾಜವೂ ಕೂಡ ವಿದ್ಯಾರ್ಥಿಗಳು ಒಂದು ನಿರ್ದಿಷ್ಟ ವೃತ್ತಿಗೆ ಅಂಟಿಕೊಂಡಿರಬೇಕು ಎಂದು ನಿರೀಕ್ಷಿಸುತ್ತವೆ. ಈ ನಿರೀಕ್ಷೆಗಳು  ಆತಂಕವನ್ನು ಹೆಚ್ಚಿಸಿ ತನ್ನ ಪ್ರತಿಭೆಯ ಮೇಲೆ ಸಂಶಯ ಹುಟ್ಟುವಂತೆ ಮಾಡುತ್ತದೆ. “ಒಂದು ವೇಳೆ ನಾನು ತಪ್ಪು ಆಯ್ಕೆ ಮಾಡಿಬಿಟ್ಟರೆ?” ಎಂದು ಮನಸ್ಸು ಪದೇ ಪದೇ ಭಯಗೊಳ್ಳುತ್ತದೆ.
 ನನ್ನ ವೃತ್ತಿಯ ಆಯ್ಕೆ ನನಗೆ ಸುಲಭವಾಗಿರಲಿಲ್ಲ. ವಿದ್ಯಾರ್ಥಿಯಾಗಿದ್ದಾಗಿನಿಂದ ಯಕ್ಷಗಾನ ಮತ್ತು ನಾಟಕದ ಮೇಲೆ ಆಸಕ್ತಿ ಇದ್ದರೂ,  ಸ್ಥಿರ ಆದಾಯ ನೀಡುವ ವೃತ್ತಿಯನ್ನು ಆಯ್ಕೆ ಮಾಡಿದೆ. ಬರವಣಿಗೆಯಿಂದ ಬದುಕು ನಡೆಸಬಹುದು ಎಂಬ ಆತ್ಮವಿಶ್ವಾಸ ನನಗಿರಲಿಲ್ಲ. ಅನುವಾದದಲ್ಲಿ ಕೆಲವು ಅವಕಾಶಗಳು ಬಂದರೂ, ಅದನ್ನು ಪೂರ್ಣವಾಗಿ ಬಳಸಿಕೊಳ್ಳಲಿಲ್ಲ.
ಮೃದು ಕೌಶಲ ತರಬೇತಿಯಲ್ಲಿ ನನಗೆ ವಿಶ್ವಾಸವಿದ್ದರೂ, ಅದನ್ನು ಪೂರ್ಣಕಾಲಿಕ ವೃತ್ತಿಯಾಗಿ ಸ್ವೀಕರಿಸಲಿಲ್ಲ. ಉಪನ್ಯಾಸಕ ವೃತ್ತಿಯಲ್ಲಿ ನಿಷ್ಠೆಯಿಂದ ಮುಂದುವರಿದೆ.
ನಾನು ವೃತ್ತಿ ಸಲಹಾ ತರಬೇತಿ ಪಡೆದ ನಂತರವೇ, ನನ್ನಲ್ಲಿ ಹಲವಾರು ಕ್ಷೇತ್ರಗಳಲ್ಲಿ ಸಾಮರ್ಥ್ಯ ಇದೆ ಎಂಬುದನ್ನು ಅರಿತುಕೊಂಡೆ. ಒಬ್ಬ ವಿದ್ಯಾರ್ಥಿನಿಗೆ ಸಲಹೆ ನೀಡುವಾಗ, ಎರಡು ವಿಭಿನ್ನ ಕ್ಷೇತ್ರಗಳಲ್ಲಿ ಆಯ್ಕೆಗಳನ್ನು ಸೂಚಿಸಿದೆ.
ಆರಂಭದಲ್ಲಿ, ವಿದ್ಯಾರ್ಥಿಗಳಿಗೆ ಸ್ಪಷ್ಟ ಉತ್ತರ ನೀಡಲಾಗದಿದ್ದರೆ  ನನ್ನಲ್ಲಿ ಮಾಹಿತಿ ಮತ್ತು ಜ್ಞಾನದ ಕೊರತೆ ಇದೆ ಎಂದು ಭಾವಿಸುತ್ತಿದ್ದೆ. ಆದರೆ ಎಮಿಲಿ ವಾಪ್ನಿಕ್ ಅವರ ಟೆಡ್ ಟಾಕ್ “Why Some of Us Don’t Have One True Calling” ನೋಡಿದಾಗ, “ಮಲ್ಟಿ ಪೊಟೆನ್ಶಿಯಾಲಿಟಿ” ಎಂಬ ವಿಚಾರದ ಪರಿಚಯವಾಯಿತು.
ಈ ಭಾಷಣವನ್ನು ನೋಡಿದ ನಂತರ, ನಾನು ಕೂಡ ಬಹು ಆಸಕ್ತಿಗಳ ವ್ಯಕ್ತಿಯೆಂದು ಅರಿತುಕೊಂಡೆ.
ಒಂದೇ ಆಸಕ್ತಿ ಇರಬೇಕೆಂಬುದು ತಪ್ಪು. ಹಲವು ಆಸಕ್ತಿಗಳು ಮತ್ತು ಕೌಶಲ್ಯಗಳು ಇರುವುದರಲ್ಲಿ ತಪ್ಪೇನಿಲ್ಲ. ಆದರೆ ಸಮಾಜ ನಮ್ಮನ್ನು ಒಂದೇ ಮಾದರಿಯಲ್ಲಿ ಹೊಂದಿಸಲು ಒತ್ತಾಯಿಸುತ್ತದೆ.
ವೃತ್ತಿ ಆಯ್ಕೆಯಲ್ಲಿ ಗೊಂದಲ ಸರ್ವೇ ಸಾಮಾನ್ಯ. ಅದು ನಮ್ಮಲ್ಲಿ ದೋಷವಿದೆ ಎಂದರ್ಥವಲ್ಲ. ಹಲವಾರು ಆಸಕ್ತಿಗಳು ಮತ್ತು ಸಾಮರ್ಥ್ಯಗಳು ಇರುವುದು ಆ ವ್ಯಕ್ತಿಯ ಸಾಮರ್ಥ್ಯವಾಗಿದೆ.
ಇಂದಿನ ಜಗತ್ತು ವೇಗವಾಗಿ ಬದಲಾಗುತ್ತಿದೆ. ಒಂದೇ ಕೌಶಲ್ಯದಲ್ಲಿ ಪರಿಣತಿ ಹೊಂದಿದ್ದರೂ ಕೆಲವು ವರ್ಷಗಳ ನಂತರ ಅದಕ್ಕೆ ಯಾವುದೇ ಕಿಮ್ಮತ್ತಿಲ್ಲದೆ ಹೋಗಬಹುದು. ಇಂದಿನ ಉದ್ಯೋಗ ಮಾರುಕಟ್ಟೆ ಹೊಂದಿಕೊಳ್ಳುವಿಕೆ, ಸೃಜನಶೀಲತೆ ಮತ್ತು ವಿಭಿನ್ನ ಕ್ಷೇತ್ರಗಳ ಜ್ಞಾನಕ್ಕೆ ಪ್ರಾಶಸ್ತ್ಯ ನೀಡುತ್ತದೆ.
ಅಕಾಡೆಮಿಕ್ ಆಗಿ ವಾಣಿಜ್ಯ ವಿಭಾಗದ ಹಿನ್ನಲೆ ಇಲ್ಲದಿದ್ದರೂ, ವಾಣಿಜ್ಯ ವಿದ್ಯಾರ್ಥಿಗಳಿಗೆ ಸ್ಟಾಕ್ ಮಾರ್ಕೆಟ್ ಬಗ್ಗೆ ಮಾತನಾಡಲು ಆಹ್ವಾನಿತನಾದಾಗ ನನಗೆ ತುಂಬಾ ಸಂತೋಷವಾಗುತ್ತದೆ. (ನಾನು ಅದರಲ್ಲಿ ಪರಿಣತನಲ್ಲ. ಆದರೆ ವಿದ್ಯಾರ್ಥಿಗಳಿಗೆ ಒಂದು ಗಂಟೆ ಪಾಠ ಮಾಡುವಷ್ಟು ತಿಳಿದಿದೆ!)
ನನ್ನ ಸ್ನೇಹಿತನೊಬ್ಬ, ಕಲಾ ವಿಭಾಗದ ಹಿನ್ನೆಲೆಯವನಾಗಿದ್ದರೂ, ಸ್ಟಾಕ್ ಮಾರುಕಟ್ಟೆಯ ಟ್ರೇಡಿಂಗ್ ಅನ್ನು ವೃತ್ತಿಯಾಗಿ ಆರಿಸಿಕೊಳ್ಳಲು ಸಂಪೂರ್ಣ ತರಬೇತಿ ಪಡೆದಿದ್ದಾನೆ!
ಒಂದೇ ಆಸಕ್ತಿ ಇರಬೇಕೆಂಬುದು ಮಿಥ್ಯೆ. ಹಲವಾರು ಆಸಕ್ತಿಗಳು ಇದ್ದರೆ, ಅದನ್ನು ಗೊಂದಲದ ದೃಷ್ಟಿಯಲ್ಲಿ ನೋಡದೆ ಅದು ನಿಮ್ಮ ಸಾಮರ್ಥ್ಯ ಎಂದು ಪರಿಗಣಿಸಿ.
ನಿಮ್ಮ ಸಾಮರ್ಥ್ಯವನ್ನು ಒಂದು ಕ್ಷೇತ್ರಕ್ಕೆ ಸೀಮಿತಗೊಳಿಸಿಕೊಳ್ಳಬೇಡಿ. ಜಗತ್ತು ಬಹುಮುಖ ಪ್ರತಿಭೆಯನ್ನು ಸ್ವಾಗತಿಸುತ್ತಿದೆ.
ವಿಕ್ರಮ ನಾಯಕ ಕೆ 
 ವೃತ್ತಿ ಮಾರ್ಗದರ್ಶಕರು ಮತ್ತು ರಾಷ್ಟ್ರೀಯ ಜೀವನ ಕೌಶಲ ತರಬೇತುದಾರರು
Share

Leave a Reply

Your email address will not be published. Required fields are marked *