ವಿಮಾನ ಸದ್ದಿಗೆ ಬೆಚ್ಚಿ ಬಿದ್ದ ಜನತೆ
ಮೂಡುಬಿದಿರೆ: ಭಾರೀ ಸದ್ದು ಮಾಡುತ್ತಾ ಸಮಾನಾಂತರವಾಗಿ ಎರಡು ವಿಮಾನಗಳು ಮೂಡುಬಿದಿರೆಯ ಆಗಸದ ಮೇಲೆ ೩.೩೫ರ ಸುಮಾರಿಗೆ ಹಾರಿದ್ದು, ಜನತೆ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಅತ್ತ ಯುದ್ಧದ ಕಾರ್ಮೋಡ ಒಂದೆಡೆಯಾದರೆ, ಇದೀಗ ಯುದ್ಧ ವಿಮಾನವನ್ನು ಹೋಲುವ ವಿಮಾನ ಹಾರಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ವಿಮಾನದ ಭೀಕರ ಸದ್ದಿಗೆ ಬೆಚ್ಚಿ ಬಿದ್ದ ಜನ ಮನೆಯಿಂದ ಹೊರಬಂದು ಆಗಸ ನೋಡುವಂತಾಗಿದೆ. ಮೂಡುಬಿದಿರೆಯ ಆಗಸದಲ್ಲಿ ಒಂದು ಪ್ರದಕ್ಷಿಣೆ ಹಾಕಿದ ವಿಮಾನ ಮತ್ತೆ ಕಣ್ಮರೆಯಾಗಿದೆ.

ವಿಮಾನದ ಈ ಹಾರಾಟ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುವಂತೆ ಮಾಡಿದೆ. ಸುಖೋಯ್ ಅಥವಾ ಮಿಗ್ ಏರ್ ಕ್ರಾಫ್ಟ್ ಮಾದರಿಯ ವಿಮಾನ ಹಾರಾಟವಾಗಿದ್ದು ಅತ್ಯಂತ ವೇಗವಾಗಿ ಹಾರಿದ ಪರಿಣಾಮ ಸರಿಯಾಗಿ ಪತ್ತೆ ಮಾಡಲು ಸಾಧ್ಯವಾಗಿಲ್ಲ.
ಭಾರೀ ಸದ್ದಿನೊಂದಿಗೆ ಈ ಎರಡು ವಿಮಾನಗಳು ಸಮಾನಾಂತರವಾಗಿ ಹಾರಾಡಿದ್ದು, ಮಂಗಳೂರು, ಎಡಪದವು ಭಾಗಗಳಲ್ಲಿಯೂ ಇದೇ ವಿಮಾನ ಹಾರಾಟದ ದೃಶ್ಯ ಕಂಡು ಬಂದಿದೆ ಎಂಬ ಮಾಹಿತಿಯಿದೆ.
ಭಾರತೀಯ ವಾಯುಪಡೆಯ ವಿಮಾನಗಳು:
ಭಾರೀ ಸದ್ದಿನೊಂದಿಗೆ ಹಾರಾಡಿದ ಎರಡು ವಿಮಾನಗಳು ಭಾರತೀಯ ವಾಯುಪಡೆಗೆ ಸೇರಿದ ವಿಮಾನಗಳಾಗಿವೆ. ಸಾಮಾನ್ಯವಾಗಿ ಕಾರ್ಯಾಚರಣೆಯ ಭಾಗವಾಗಿ ಅಥವಾ ದಿನ ನಿತ್ಯದ ತರಬೇತಿಯಲ್ಲಿ ಈ ರೀತಿ ಜೋಡಿಯಾಗಿ ಹಾರಾಡುತ್ತವೆ. ಕರಾವಳಿಯ ಗಸ್ತು ಅಥವಾ ಕಡಲ ಸಮರಾಭ್ಯಾಸದ ಭಾಗವಾಗಿರಬಹುದೆಂದು ಉಲ್ಲೇಖಿಸಲ್ಪಟ್ಟಿದೆ. ಕರಾವಳಿಯ ಭದ್ರತೆಗಾಗಿಯೂ ವೈಮಾನಿಕ ಚಲನೆಗಳು ನಡೆಯುತ್ತಿರುವ ಬಗ್ಗೆ ಮಾಹಿತಿಯಿದೆ.