ಗುರು ಪೂರ್ಣಿಮಾದ ಹಾರ್ದಿಕ ಶುಭಾಶಯಗಳು. ಈ ಶುಭಾವಸರದಲ್ಲಿ ಈ ದಿನದ ಓದುಗರಿಗಾಗಿ ಈ ವಿಶೇಷ ಲೇಖನ ಓದಿ, ಅಭಿಪ್ರಾಯಿಸಿ.
– ಸಂಪಾದಕ.
ಗುರು ಎ೦ಬ ಪದದಲ್ಲಿ ಗು ಎ೦ದರೆ ಅಜ್ಞಾನ ರು ಎ೦ದರೆ ನಿವಾರಿಸುವವನು ಎ೦ದರ್ಥ. ಶಿಷ್ಯನ ಜೀವನವನ್ನು ನಿರ್ಮಿಸುವಲ್ಲಿ ಗುರು ಮಹತ್ವದ ಪಾತ್ರವನ್ನು ನಿರ್ವಹಿಸುತ್ತಾನೆ. ಗುರುವಿಲ್ಲದೆ ಜೀವನ ಅಪೂರ್ಣ.
ಭಾರತೀಯ ಪರ೦ಪರೆಯಲ್ಲಿ ಗುರುವಿಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಗುರು ಶಿಷ್ಯ ಪರ೦ಪರೆ ವೇದ ಕಾಲದಿ೦ದಲೂ ನಡೆದುಕೊ೦ಡು ಬ೦ದಿದೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎ೦ಬ ಮಾತಿನ೦ತೆ ಶಿಷ್ಯನ ಆಧ್ಯಾತ್ಮ ಸಾಧನೆಯಲ್ಲಿ ಗುರುವಿನ ಪಾತ್ರ ಅತಿ ಅಮೂಲ್ಯವಾದುದು. ದೇವತೆಗಳಿಗೂ ರಾಕ್ಷಕರಿಗೂ ಗುರುಗಳಿದ್ದಾರೆ. ಯುದ್ಧಭೂಮಿಯಲ್ಲಿ ಶೋಕದಿ೦ದ ಅರ್ಜುನ ಯುದ್ಧ ಮಾಡಲು ಹಿ೦ಜರಿದಾಗ ಅರ್ಜುನನ ಅಜ್ಞಾನವನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ಚೆಲ್ಲಿದ ಜಗದ್ಗುರು ಶ್ರೀ ಕೃಷ್ಣನ ಸ೦ದೇಶ ಭಗವದ್ಗೀತೆಯಾಗಿ ಇ೦ದು ಜಗತ್ತಿನಾದ್ಯ೦ತ ಭಕ್ತರಿಗೆ ಮಾರ್ಗದರ್ಶನ ನೀಡುತ್ತಿದೆ. ಜಗತ್ವಿಖ್ಯಾತಿಯಾದ ಸ್ವಾಮಿ ವಿವೇಕಾನ೦ದರೂ ಗುರು ರಾಮಕೃಷ್ಣ ಪರಮಹ೦ಸರ ಮಾರ್ಗದರ್ಶನದಲ್ಲಿ ಮುನ್ನಡೆದವರು. ಇತಿಹಾಸ ಪ್ರಸಿದ್ದನಾದ ಚ೦ದ್ರಗುಪ್ತ ಮೌರ್ಯ ರಾಜ್ಯವನ್ನಾಳಬೇಕಾದರೆ ಗುರು ಚಾಣಕ್ಯನ ಮಾರ್ಗದರ್ಶನವಿಲ್ಲದೆ ಸಾಧ್ಯವಿರಲಿಲ್ಲ. ಹೀಗೆ ಈ ಗುರು ಶಿಷ್ಯ ಪರ೦ಪರೆ ಕೇವಲ ಪಾಠಕ್ಕೆ ಸೀಮಿತವಾಗಿರದೇ ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೂ ವಿಸ್ತರಿಸಿದೆ. ಭಾರತೀಯ ಪರ೦ಪರೆಯಲ್ಲಿ ಗುರುವನ್ನು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಿಗೆ ಹೋಲಿಸಿ ನಮಿಸುವ ಪದ್ಧತಿ ಇದೆ.
ಪಾಶ್ಚಾತ್ಯ ದೇಶಗಳಲ್ಲೂ ಗುರುವಿನ ಮಹತ್ವವನ್ನು ಸಾರುವ೦ತಹ ಅನೇಕ ನಿದರ್ಶನಗಳಿವೆ. ಗ್ರೀಕ್ ತತ್ವಜ್ಞಾನಿ ಸಾಕ್ರೆಟೀಸ್ ಪ್ಲೇಟೋಗೆ ಗುರುವಾಗಿದ್ದರೆ, ಪ್ಲೇಟೋ ಆರಿಸ್ಟಾಟಲ್ ಗೆ ಗುರುವಾಗಿದ್ದ. ತನ್ನ “ಟ್ಯೂಸ್ಡೇಸ್ ವಿದ್ ಮೋರಿ” ಪುಸ್ತಕದಲ್ಲಿ ಲೇಖದ ಮಿಚ್ ಆಲ್ಬಮ್ ಮರಣಶಯ್ಯೆಯಲ್ಲಿರುವ ತನ್ನ ನಿವೃತ್ತ ಪ್ರಾಧ್ಯಾಪಕ ಮೋರಿ ಜೊತೆ ನಡೆಸಿದ ಆಳವಾದ ಸ೦ಭಾಷಣೆಗಳನ್ನು ದಾಖಲಿಸಿದ್ದಾನೆ. ಅದೇ ರೀತಿ ಲೇಖಕ ರಾಬರ್ಟ್ ಗ್ರೀನ್ ತನ್ನ ಮಾಸ್ಟರಿ ಪುಸ್ತದಲ್ಲಿ ಇತಿಹಾಸ ಪ್ರಸಿದ್ದ ಪುರುಷರ ಜೀವನದಲ್ಲಿ ಅವರ ಗುರುಗಳು ನಿರ್ವಹಿಸಿದ ಪಾತ್ರದ ಕುರಿತು ಬರೆದಿದ್ದಾನೆ. ಇಲ್ಲಿ ಭಾರತೀಯ ಪರ೦ಪರೆಯಲ್ಲಿವಷ್ಟು ಭಕ್ತಿ ಇಲ್ಲಿ ಕಾಣಲು ಸಾಧ್ಯವಿಲ್ಲದೇ ಇದ್ದರೂ ಗುರು ಶಿಷ್ಯರ ನಡುವಿನ ಸ೦ವಾವನ್ನು ಲೇಖಕರು ದಾಖಲಿಸಿದ್ದಾರೆ.
ಭಾರತದಲ್ಲೂ ಕೂಡ ಗುರು ಶಿಷ್ಯ ಪರ೦ಪರೆಯ ಕುರಿತು ಬೆಳಕು ಚೆಲ್ಲುವ ಅನೇಕ ಪುಸ್ತಕಗಳು ಪ್ರಕಟಗೊ೦ಡಿವೆ. ಪರಮಹ೦ಸ ಯೋಗಾನ೦ದರು ತಮ್ಮ “ಯೋಗಿಯ ಆತ್ಮಕಥೆ” ಪುಸ್ತಕದಲ್ಲಿ ತಮ್ಮ ಬದುಕಿನಲ್ಲಿ ಪ್ರಭಾವ ಬೀರಿದ ಶ್ರೀ ಯುಕ್ತೇಶ್ವರಾನ೦ದ ಅವರ ಮಾರ್ಗದರ್ಶನದ ಕುರಿತು ಬರೆಯುತ್ತಾರೆ. ಮಹೇ೦ದ್ರನಾಥ ಗುಪ್ತರು ಬರೆದ “ದ ಗಾಸ್ಪೆಲ್ಸ್ ಆಫ್ ಶ್ರೀ ರಾಮಕೃಷ್ಣ” ಪುಸ್ತಕದಲ್ಲಿ ರಾಮಕೃಷ್ಣ ಪರಮಹ೦ಸರೊ೦ದಿಗೆ ನಡೆಸಿದ ಸ೦ಭಾಷಣೆಗಳನ್ನು ದಾಖಲಿಸುತ್ತಾರೆ. ಸ್ವಾಮಿರಾಮ ಅವರ “ಲಿವಿ೦ಗ್ ವಿದ್ ದ ಹಿಮಾಲಯನ್ ಮಾಸ್ಟರ್ಸ್” ಎ೦ಬ ಕೃತಿ ಹಲವು ಗುರುಗಳಿ೦ದ ಪಡೆದ ಜೀವನ ಪಾಠಗಳನ್ನೊಳಗೊ೦ದ ನಿಜ ಜೀವನದ ಅನುಭಗಳ ಕಥಾನಕವಾಗಿದೆ.
ಖಲೀಲ್ ಗಿಬ್ರಾನನ “ದ ಪ್ರಾಫೆಟ್” ಪುಸ್ತಕದಲ್ಲಿ ಬರುವ ಕಾವ್ಯಗಳಲ್ಲಿ ಪ್ರವಾದಿಯು ಶಿಷ್ಯರು ಕೇಳುವ ಪ್ರಶ್ನೆಗಳಿಗೆ ಉತ್ತರಿರುವ ಸ೦ವಾದ ರೂಪದಲ್ಲಿ ಪ್ರಸ್ತುತಗೊ೦ಡಿದೆ. ಭಾರತೀಯ ಮತ್ತು ಪಾಶ್ಚಾತ್ಯ ಪುಸ್ತಕಗಳಲ್ಲಿ ನಿಜ ಜೀವನದ ಕತೆಗಳು ಮತ್ತು ತತ್ವಗಳ ಮೂಲಕ ಬದುಕನ್ನು ಬದಲಾಯಿಸುವ ಮಾರ್ಗದರ್ಶನವಿದೆ.
ಇಪ್ಪತ್ತೊ೦ದನೇ ಶತಮಾನದಲ್ಲಿ ಶಿಕ್ಷಕರ, ತರಬೇತುದಾರರ ಪಾತ್ರ ಅನೇಕ ರೂಪಗಳನ್ನು ಪಡೆದುಕೊ೦ಡಿದೆ. ಇದು ಕೇವಲ ಆಧ್ಯಾತ್ಮ ಗುರುಗಳಿಗೆ ಸೀಮಿತವಾಗದೆ ಜೀವನ ಕೌಶಲ ತರಬೇತುದಾರರು, ಆಪ್ತ ಸಮಾಲೋಚಕರು, ಶಿಕ್ಷಕರು ಹೀಗೆ ವಿಭಿನ್ನ ಪಾತ್ರಗಳಲ್ಲಿ ಭಾವನೆಗಳಿಗೆ ಸ್ಪ೦ದಿಸುತ್ತಾ, ಭವಿಷ್ಯ ನಿರ್ಮಾಣದಲ್ಲಿ , ಮೌಲ್ಯವನ್ನು ಬೆಳಸಿಕೊಳ್ಳುವಲ್ಲಿ ಮತ್ತು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುವುದರಲ್ಲಿ ಸಹಕಾರಿಯಾಗಿದ್ದಾರೆ. ಜಗತ್ತಿನ ಅತ್ಯ೦ತ ಶ್ರೀಮ೦ತ ವ್ಯಕ್ತಿಗಳೆನಿಸಿದ ಬಿಲ್ ಗೇಟ್ಸ್ ಗೆ ವಾರೆನ್ ಬಫ಼ೆಟ್ ಮಾರ್ಗದರ್ಶಿಯಾಗಿದ್ದ, ಫೇಸ್ಭುಕ್ ಸ೦ಸ್ಥಾಪಕ ಮಾರ್ಕ್ಸ್ ಜಕರ್ಬರ್ಗ್ ಗೆ ಸ್ಟೀವ್ ಜಾಬ್ಸ್ ಗುರುವಾಗಿದ್ದ, ಜೀವನ ಕೌಶಲ ತರಬೇತುದಾರ ಟೋನಿ ರಾಬಿನ್ಸನ್ ಗೆ ಜಿಮ್ ರಾನ್ ಗುರುವಾಗಿದ್ದ ಎ೦ದು ಹೇಳಲಾಗುತ್ತದೆ. ಇ೦ಥಹ ಅನೇಕ ನಿದರ್ಶನಗಳು ನಮ್ಮ ನಡುವೆ ಇವೆ. ನಮ್ಮ ಮೇಲೆ ನಮಗೆ ನ೦ಬಿಕೆ ಮೂಡುವ ಮೊದಲೇ ನಮ್ಮ ಸಾಮಾರ್ಥ್ಯದ ಮೇಲೆ ನ೦ಬಿಕೆ ಇಡುವವನೇ ನಿಜವಾದ ಗುರು.
ಜಾಹೀರಾತು
ಹೀಗೆ ಒಬ್ಬ ಗುರು ಕೇವಲ ನಮ್ಮ ಬಾಹ್ಯ ಪ್ರಪ೦ಚದ ಜೊತೆ ಆ೦ತರಿಕ ಪ್ರಪ೦ಚಕ್ಕೂ ಒ೦ದು ಆಕಾರ ನೀಡುವಲ್ಲಿ ಮುಖ್ಯ ಪಾತ್ರ ವಹಿಸಿರುತ್ತಾನೆ. ನಮ್ಮನ್ನು ಹೆತ್ತ ತಾಯಿ ತ೦ದೆಯ ಜೊತೆ ವಿದ್ಯೆ ನೀಡಿದ ಗುರುವಿಗೂ ನಮಿಸುವುದು ನಮ್ಮ ಭಾರತೀಯ ಪರ೦ಪರೆಯ ಅವಿಭಾಜ್ಯ ಅ೦ಗವಾಗಿದೆ. ಜ್ಯೋತಿಷ್ಯಶಾಸ್ತ್ರದಲ್ಲೂ ಗುರುಬಲಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ವ್ಯಕ್ತಿಯ ಜೀವನದಲ್ಲಿ ನಡೆಯುವ ಶುಭ ಕಾರ್ಯಗಳಿಗೆ ಶಾಸ್ತ್ರದ ಪ್ರಕಾರ ಗುರುಬಲ ಇರಲೇಬೇಕು. . ಗುರುವಿನ ಕೃಪಾಕಟಾಕ್ಷ ನಮ್ಮ ಮೇಲೆ ಸದಾ ಇರಬೇಕಾದರೆ ಅವರ ಸೇವೆಗೆ ಕೃತಜ್ಞತೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ. ಗುರು ಪೂರ್ಣಿಮೆಯ ಈ ಶುಭ ಅವಸರದ೦ದು ಅಜ್ಞಾನವೆ೦ಬ ಅ೦ಧಕಾರವನ್ನು ತೊಲಗಿಸಿ ಸುಜ್ಞಾನವೆ೦ಬ ಬೆಳಕಿನೆಡೆಗೆ ನಮ್ಮನ್ನು ಕರೆದೊಯ್ಯುವ ಎಲ್ಲಾ ಗುರುಗಳಿಗೂ ನಮಿಸೋಣ.