‘ನಮೋ ಗ್ರೀನ್ ರೈಲು’ಗೆ ಚಾಲನೆ

ಭಾರತದ ಮೊದಲ ಹೈಡ್ರೋಜನ್ ರೈಲು ‘ನಮೋ ಗ್ರೀನ್ ರೈಲು’ಗೆ ಚಾಲನೆ
ಪರಿಸರ ಸ್ನೇಹಿ ತಂತ್ರಜ್ಞಾನದಲ್ಲಿ ಭಾರತೀಯ ರೈಲ್ವೆಯ ಹೊಸ ಮೈಲಿಗಲ್ಲು

ನವದೆಹಲಿ: ಭಾರತವು ಹಸಿರು ಇಂಧನ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದು, ದೇಶದ ಮೊದಲ ಸ್ವದೇಶಿ ಹೈಡ್ರೋಜನ್ ಚಾಲಿತ “ನಮೋ ಗ್ರೀನ್ ರೈಲು”  ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಹರಿಯಾಣ ರಾಜ್ಯದ ಜಿಂದ್–ಸೋನಿಪತ್ ನಡುವಿನ 89 ಕಿಲೋಮೀಟರ್ ಮಾರ್ಗದಲ್ಲಿ ಈ ರೈಲು ಸಂಚಾರ ಆರಂಭಿಸಿದೆ.

10 ಬೋಗಿಗಳನ್ನು ಹೊಂದಿರುವ ಈ ಜೀರೋ ಎಮಿಷನ್ ಮಲ್ಟಿಪಲ್ ಯುನಿಟ್ (ZEMU) ರೈಲು ತನ್ನ ಅಗತ್ಯ ವಿದ್ಯುತ್‌ನ್ನು ರೈಲಿನಲ್ಲೇ ಉತ್ಪಾದಿಸಿಕೊಳ್ಳುವ ವಿಶೇಷತೆಯನ್ನು ಹೊಂದಿದೆ. ಹೈಡ್ರೋಜನ್ ಮತ್ತು ಆಮ್ಲಜನಕದ ಸಂಯೋಜನೆಯಿಂದ ಕಾರ್ಯನಿರ್ವಹಿಸುವ ಪ್ರೋಟಾನ್ ಎಕ್ಸ್‌ಚೇಂಜ್ ಮೆಂಬ್ರೇನ್ (PEM) ಫ್ಯುಯೆಲ್ ಸೆಲ್ ತಂತ್ರಜ್ಞಾನವನ್ನು ಬಳಸಲಾಗಿದ್ದು, ಇದರಿಂದ ಪರಿಸರಕ್ಕೆ ಹಾನಿಕಾರಕ ಹೊಗೆ ಹೊರಬರುವುದಿಲ್ಲ. ಬದಲಾಗಿ ಕೇವಲ ಉಷ್ಣತೆ ಮತ್ತು ನೀರಿನ ಆವಿಯಷ್ಟೇ ಹೊರಸೂಸುತ್ತದೆ.

ಈ ರೈಲು ದಿನಕ್ಕೆ ಎರಡು ಬಾರಿ ಜಿಂದ್–ಸೋನಿಪತ್ ನಡುವೆ ಸಂಚರಿಸಲಿದೆ. ಸುಮಾರು 682 ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಹಾಗೂ ಒಟ್ಟು 2,600 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಇದಕ್ಕಿದೆ. ಗರಿಷ್ಠ 120 ಕಿ.ಮೀ. ವೇಗದಲ್ಲಿ ಸಂಚರಿಸಬಹುದಾದ ಈ ರೈಲು ಸಾಮಾನ್ಯವಾಗಿ 75 ಕಿ.ಮೀ. ವೇಗದಲ್ಲಿ ಕಾರ್ಯನಿರ್ವಹಿಸಲಿದೆ.

ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ಅಭಿವೃದ್ಧಿಪಡಿಸಿರುವ ಈ ಯೋಜನೆ, ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರೀನ್ ಹೈಡ್ರೋಜನ್ ಮಿಷನ್ಗೆ ಮಹತ್ವದ ಬಲ ನೀಡಿದೆ. ಸಾಂಪ್ರದಾಯಿಕ ಡೀಸೆಲ್ ರೈಲುಗಳಿಗೆ ಪರ್ಯಾಯವಾಗಿ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ಮಾಲಿನ್ಯ ಕಡಿಮೆ ಮಾಡುವ ಜೊತೆಗೆ ಪರಂಪರೆಯ ಹಾಗೂ ಪರಿಸರ ಸೂಕ್ಷ್ಮ ರೈಲು ಮಾರ್ಗಗಳನ್ನು ಸಂರಕ್ಷಿಸುವ ಗುರಿಯನ್ನು ಭಾರತೀಯ ರೈಲ್ವೆ ಹೊಂದಿದೆ. ಈ ಸಾಧನೆಯೊಂದಿಗೆ ಭಾರತವು ಹಸಿರು ಸಾರಿಗೆ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಹೊಸ ಅಧ್ಯಾಯ ಆರಂಭಿಸಿದೆ.

Share

Leave a Reply

Your email address will not be published. Required fields are marked *