ಮೂಡುಬಿದಿರೆ: ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಮೂಡುಬಿದಿರೆ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೊಳ್ಳೆಗಳ ಉಪಟಳ ತೀವ್ರಗೊಂಡಿದೆ. ಜೂನ್ ಹಾಗೂ ಜುಲೈ ತಿಂಗಳ ಆರಂಭದಲ್ಲಿ ನಿರಂತರ ಮಳೆಯಾಗದ ಕಾರಣ ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಪೂರಕ ವಾತಾವರಣ ನಿರ್ಮಾಣವಾಗಿದೆ. ಪರಿಣಾಮವಾಗಿ ಪ್ರತಿದಿನ ಸಂಜೆ ಮತ್ತು ರಾತ್ರಿ ವೇಳೆಯಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸಾರ್ವಜನಿಕರ ನಿದ್ದೆಯನ್ನೇ ಕಸಿದುಕೊಳ್ಳುತ್ತಿದೆ.
ಮೂಡುಬಿದಿರೆಯ ಹಳೆ ಪೊಲೀಸ್ ಠಾಣೆ ಪರಿಸರ, ಕೀರ್ತಿನಗರ, ಪೇಪರ್ ಮಿಲ್ ಪ್ರದೇಶ, ಶೇನವನಗರ, ಮಹಾವೀರ ಕಾಲೇಜು ಸುತ್ತಮುತ್ತ ಸೇರಿದಂತೆ ಹಲವು ಬಡಾವಣೆಗಳಲ್ಲಿ ಸೊಳ್ಳೆಗಳ ಹಾವಳಿ ಮಿತಿಮೀರಿದೆ. ಮನೆಗಳೊಳಗೂ ಸೊಳ್ಳೆಗಳ ಕಾಟ ಹೆಚ್ಚಾಗಿರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಇದರೊಂದಿಗೆ ವೈರಲ್ ಜ್ವರ, ಶೀತ-ಜ್ವರ ಹಾಗೂ ಇತರೆ ಸಾಂಕ್ರಾಮಿಕ ರೋಗಗಳ ಪ್ರಕರಣಗಳೂ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಜ್ವರ, ನೆಗಡಿ, ಕೆಮ್ಮು ಸೇರಿದಂತೆ ವೈರಲ್ ಸೋಂಕಿನ ಲಕ್ಷಣಗಳೊಂದಿಗೆ ಚಿಕಿತ್ಸೆ ಪಡೆಯುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸೊಳ್ಳೆಗಳ ಮೂಲಕ ಹರಡುವ ಡೆಂಗ್ಯೂ, ಚಿಕನ್‌ಗುನ್ಯಾ ಮೊದಲಾದ ರೋಗಗಳ ಭೀತಿಯೂ ಸಾರ್ವಜನಿಕರಲ್ಲಿ ಕಾಡತೊಡಗಿದೆ.

ಸೊಳ್ಳೆಗಳ ನಿಯಂತ್ರಣಕ್ಕಾಗಿ ಪುರಸಭೆ ಹಾಗೂ ಆರೋಗ್ಯ ಇಲಾಖೆ ಕೂಡಲೇ ಫಾಗಿಂಗ್, ಲಾರ್ವಾ ನಾಶಕ ಸಿಂಪಡಣೆ, ನೀರು ನಿಲ್ಲದಂತೆ ಕ್ರಮ ಹಾಗೂ ಸ್ವಚ್ಛತಾ ಕಾರ್ಯಗಳನ್ನು ತ್ವರಿತಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸೊಳ್ಳೆ ಪರದೆ ಮತ್ತು ಸೊಳ್ಳೆ ನಿವಾರಕಗಳನ್ನು ಬಳಸುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆಗಳನ್ನು ಪಾಲಿಸುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಸೊಳ್ಳೆಯ ಝೇಂಕಾರವೇ ಇಲ್ಲ!
ಈ ಹಿಂದೆ ಸೊಳ್ಳೆಗಳು ಹಾರಾಡುವಾಗ ಅವುಗಳ ಝೇಂಕಾರ (ಗುಂಯ್‌ಗುಂಯ್ ಶಬ್ದ) ಕೇಳಿಬರುತ್ತಿತ್ತು. ಆದರೆ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿರುವ ಕಪ್ಪು ಬಣ್ಣದ ಸೊಳ್ಳೆಗಳಲ್ಲಿ ಅಂತಹ ಶಬ್ದವೇ ಕೇಳಿಸುತ್ತಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಝೇಂಕಾರ ಇಲ್ಲದ ಕಾರಣ ಸೊಳ್ಳೆಗಳ ಇರುವಿಕೆ ಅರಿವಾಗದೆ, ಕಚ್ಚಿದ ಬಳಿಕವೇ ಗೊತ್ತಾಗುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ತೀವ್ರ ತುರಿಕೆ, ಅಲರ್ಜಿ ಸಮಸ್ಯೆ:
ಈ ಸೊಳ್ಳೆಗಳ ಕಡಿತದಿಂದ ತೀವ್ರ ತುರಿಕೆ, ಚರ್ಮದ ಅಲರ್ಜಿ ಹಾಗೂ ಉರಿ ಕಾಣಿಸಿಕೊಳ್ಳುತ್ತಿರುವುದಾಗಿ ಹಲವರು ದೂರುತ್ತಿದ್ದಾರೆ. ಕೆಲವರಿಗೆ ಕಡಿದ ಜಾಗ ಕೆಂಪಾಗಿ ಊದಿಕೊಳ್ಳುವುದು, ನಿರಂತರ ತುರಿಕೆ ಕಾಣಿಸಿಕೊಳ್ಳುವುದು ಸೇರಿದಂತೆ ವಿವಿಧ ತೊಂದರೆಗಳು ಎದುರಾಗುತ್ತಿವೆ. ಇದರಿಂದ ಮಕ್ಕಳು, ವೃದ್ಧರು ಹಾಗೂ ಸೂಕ್ಷ್ಮ ಚರ್ಮ ಹೊಂದಿರುವವರು ಹೆಚ್ಚು ಸಂಕಷ್ಟ ಅನುಭವಿಸುತ್ತಿದ್ದಾರೆ.