ವಿಶೇಷ ವರದಿ: ಹರೀಶ್ ಕೆ.ಆದೂರು.
ಮೂಡುಬಿದಿರೆ: ಪುಟಾಣಿಗಳು ಸುರಕ್ಷಿತ ವಾತಾವರಣದಲ್ಲಿ ಆಟವಾಡುತ್ತಾ ಕಲಿಯಬೇಕಾದ ಅಂಗನವಾಡಿ ಕೇಂದ್ರವೇ ಇಂದು ಅಪಾಯದ ಅಂಚಿನಲ್ಲಿದೆ. ಮೂಡುಬಿದಿರೆ ತಾಲೂಕಿನ ಶಿರ್ತಾಡಿ ಸಮೀಪದ ಮೂಡುಕೋಣಾಜೆಯ ‘ಬಾಲಸ್ನೇಹಿ’ ಅಂಗನವಾಡಿ ಕೇಂದ್ರದ ದುಸ್ಥಿತಿ ನೋಡಿದರೆ, ಅದು ಹೆಸರಿಗೆ ಮಾತ್ರ ಬಾಲಸ್ನೇಹಿಯಾಗಿದ್ದು, ವಾಸ್ತವದಲ್ಲಿ ಮಕ್ಕಳ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವಂತಿದೆ.

ಕೇಂದ್ರದ ಮುಖ್ಯ ದ್ವಾರದ ಮರದ ಚೌಕಟ್ಟು ಸಂಪೂರ್ಣ ಗೆದ್ದಲು ಹಿಡಿದು ಶಿಥಿಲಗೊಂಡಿದ್ದು, ಯಾವ ಕ್ಷಣದಲ್ಲಾದರೂ ಬಾಗಿಲು ಚೌಕಟ್ಟಿನ ಸಮೇತ ಕುಸಿಯುವ ಆತಂಕ ಎದುರಾಗಿದೆ. ಕಟ್ಟಡದ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಮಳೆಯ ಸಂದರ್ಭದಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುತ್ತಿದೆ. ಈ ಕೇಂದ್ರದಲ್ಲಿ ವ್ಯಾಸಂಗ ಮಾಡುತ್ತಿರುವ 18 ಮಕ್ಕಳು, ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರು ಪ್ರತಿದಿನವೂ ಭಯದ ವಾತಾವರಣದಲ್ಲೇ ದಿನ ಕಳೆಯುವಂತಾಗಿದೆ.

ಕಟ್ಟಡ ಹಲವು ವರ್ಷಗಳಿಂದ ದುರಸ್ತಿಯನ್ನೇ ಕಂಡಿಲ್ಲ. ಸುಣ್ಣ-ಬಣ್ಣವಿಲ್ಲದ ಕಟ್ಟಡ, ದುರಸ್ತಿಗೆ ಕಾಯುತ್ತಿರುವ ಶೌಚಾಲಯ ಹಾಗೂ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿರುವ ಮೂಲಸೌಕರ್ಯಗಳು ಸಂಬಂಧಪಟ್ಟ ಇಲಾಖೆಯ ಉದಾಸೀನತೆಯನ್ನು ಬಯಲಿಗೆಳೆಯುತ್ತಿವೆ.
ಇದಕ್ಕೆ ಸೇರ್ಪಡೆಯಾಗಿ ಗ್ರಾಮೀಣ ಭಾಗದ ಅಂಗನವಾಡಿಗಳಿಗೆ ಮಂಗ ಹಾಗೂ ಹಾವುಗಳ ಕಾಟವೂ ಹೆಚ್ಚಾಗಿದೆ. ಪಡುಕೋಣಾಜೆ ಅಂಗನವಾಡಿಯಲ್ಲಿ ಮಂಗಗಳು ಬಾಗಿಲು, ಕಿಟಕಿಗಳ ಮೂಲಕ ಒಳನುಗ್ಗಿ ಆಹಾರ ಸಾಮಗ್ರಿಗಳಿಗೆ ಹಾನಿ ಮಾಡುತ್ತಿದ್ದು, ಮಕ್ಕಳು ಭೀತಿಗೊಳಗಾಗುತ್ತಿದ್ದಾರೆ. ಮಳೆಗಾಲದಲ್ಲಿ ಹಾವುಗಳು ಅಂಗನವಾಡಿ ಆವರಣ ಪ್ರವೇಶಿಸುವ ಘಟನೆಗಳೂ ಆತಂಕಕ್ಕೆ ಕಾರಣವಾಗಿವೆ.

ಇನ್ನೊಂದೆಡೆ, ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ತರಗತಿಗಳು ಆರಂಭವಾಗುತ್ತಿರುವ ಪರಿಣಾಮ ಗ್ರಾಮೀಣ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ಮತ್ತೊಂದು ಸವಾಲಾಗಿದೆ.
ಮಕ್ಕಳ ಭದ್ರತೆ ಮತ್ತು ಗುಣಮಟ್ಟದ ಪೂರ್ವಪ್ರಾಥಮಿಕ ಶಿಕ್ಷಣವನ್ನು ಖಾತ್ರಿಪಡಿಸಲು ಶಿಥಿಲಗೊಂಡ ಅಂಗನವಾಡಿ ಕಟ್ಟಡಗಳ ತುರ್ತು ದುರಸ್ತಿ, ಸುರಕ್ಷತಾ ಕ್ರಮಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಪಟ್ಟ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಇಲಾಖೆ ಸ್ವತಃ ತನಿಖೆ ಕೈಗೊಳ್ಳಲಿ
ಅಂಗನವಾಡಿ ಕೇಂದ್ರಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧೀನದಲ್ಲಿ ಕಾರ್ಯನಿರ್ವಹಿಸುತ್ತವೆ. ಈ ಕೇಂದ್ರಗಳು ಸಮಗ್ರ ಶಿಶು ಅಭಿವೃದ್ಧಿ ಸೇವಾ ಯೋಜನೆ ಅಡಿಯಲ್ಲಿ ನಿರ್ವಹಿಸಲ್ಪಡುತ್ತವೆ.ಅಂಗನವಾಡಿ ಕೇಂದ್ರಗಳ ಆಡಳಿತ ವ್ಯವಸ್ಥೆ ಈ ರೀತಿಯಾಗಿರುತ್ತದೆ. ರಾಜ್ಯ ಮಟ್ಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಟ್ಟ: ಉಪನಿರ್ದೇಶಕರು, ತಾಲೂಕು ಮಟ್ಟ: ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಕ್ಷೇತ್ರ ಮಟ್ಟದಲ್ಲಿ ಅಂಗನವಾಡಿ ಮೇಲ್ವಿಚಾರಕರು, ಕೇಂದ್ರ ಮಟ್ಟದಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಇದರ ಜವಾಬ್ಧಾರಿ ವಹಿಸಿಕೊಂಡಿರುತ್ತಾರೆ.ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಯೊಳಗಿನ ಅಂಗನವಾಡಿ ಕೇಂದ್ರಕ್ಕೆ ಖುದ್ದು ಭೇಟಿನೀಡಿ ಅಂಗನವಾಡಿ ಕೇಂದ್ರಗಳ ಪರಿಸ್ಥಿತಿಯನ್ನು ಗಮನಿಸಲೇ ಬೇಕಾಗಿದೆ. ನೈಜ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕಾಗಿದೆ.