ಜುಲೈ೧ ಪತ್ರಿಕಾ ದಿನ. ಈ ದಿನದ ಅಂಗವಾಗಿ ಈ ವಿಶೇಷ ಲೇಖನ.
ಹರೀಶ್ ಕೆ.ಆದೂರು
“ಕನ್ನಡ ಪತ್ರಿಕಾ ರಂಗಕ್ಕೆ ಇಂದು ಹೆಮ್ಮೆಯ ದಿನ. ಮೊಟ್ಟ ಮೊದಲ ಕನ್ನಡ ಪತ್ರಿಕೆ ಆರಂಭವಾಗಿದ್ದು ಜುಲೈ೧, ೧೮೪೩. ಅದು ಬಂದರು ನಗರಿ ಮಂಗಳೂರಿನಲ್ಲಿ. ಅಲ್ಲಿಂದ ಆರಂಭಗೊ0ಡ ಪತ್ರಿಕಾ ರಂಗ ಇಂದು ಪತ್ರಿಕೋದ್ಯಮವಾಗಿ ಪರಿವರ್ತನೆಗೊಂಡಿದೆ. ಅಗಾಧವಾಗಿ ತನ್ನ ಛಾಪನ್ನು ವ್ಯಾಪಿಸಿಕೊಂಡಿದೆ. ಮುದ್ರಣಮಾಧ್ಯಮದಿಂದ ಡಿಜಿಟಲ್ ಜಗತ್ತಿನ ತನಕ ಕನ್ನಡ ತನ್ನ ಮಾಧ್ಯಮ ಕ್ಷೇತ್ರ ತನ್ನ ಅಗಾಧವಾದ ವ್ಯಾಪ್ತಿ ವಿಸ್ತಾರವನ್ನು ಹರಡಿಕೊಂಡಿದೆ. ಇದಕ್ಕೆಲ್ಲ ಮೂಲ ಕಾರಣವಾಗಿದ್ದೇ ಅಂದು ಆರಂಭಗೊAಡಿದ್ದ `ಮಂಗಳೂರ ಸಮಾಚಾರ’!. ೧೮೨ವರುಷಗಳ ಹಿಂದೆ ಆರಂಭಗೊ0ಡಿದ್ದ ಕನ್ನಡ ಪತ್ರಿಕಾ ರಂಗ ಇಂದು ಊಹೆಗೂ ಮೀರಿ ಬೆಳೆದು ನಿಂತಿದೆ”
ಮಂಗಳೂರ ಸಮಾಚಾರ ಎಂಬ ಕನ್ನಡ ವಾರಪತ್ರಿಕೆ ೧೮೪೩ರ ಜುಲೈ ೧ರಂದು ಮಂಗಳೂರಿನಲ್ಲಿ ಆರಂಭಗೊಳ್ಳುವ ಮೂಲಕ ಕನ್ನಡ ಪತ್ರಿಕಾ ರಂಗಕ್ಕೆ ದೊಡ್ಡ ಕೊಡುಗೆಯನ್ನು ಬಾಸೆಲ್ ಮಿಶನ್ ಸಂಸ್ಥೆ ನೀಡಿತು. ತನ್ಮೂಲಕ ಕನ್ನಡ ಮಾಧ್ಯಮ ಕ್ಷೇತ್ರದ ಚರಿತ್ರೆ ಆರಂಭಕ್ಕೆ ನಾಂದಿಯಾಯಿತು. ಕ್ರೈಸ್ತ ಮತ ಪ್ರಚಾರಕ್ಕೆ ಬಂದ ಸಂಸ್ಥೆ ಕಲ್ಲಚ್ಚಿನ ಮುದ್ರಣ ಬೆಳಕಿಗೆ ತಂದರು. ತದನಂತರದಲ್ಲಿ ಅಚ್ಚುಮೊಳೆಗಳ ಮುದ್ರಣ ಆರಂಭವಾಯಿತು. ೧೮೪೧ರಲ್ಲಿ ಜಿಲ್ಲೆಯಲ್ಲಿ ಬಾಸೆಲ್ ಮಿಶನ್ ಪ್ರೆಸ್ ಅನ್ನು ಸ್ಥಾಪಿಸಿ ಕನ್ನಡ ಮತ್ತು ತುಳುವಿನಲ್ಲಿ ಮುದ್ರಣ ಕಾರ್ಯ ಪ್ರಾರಂಭಿಸಿದರು. ೧೮೪೩ರಲ್ಲಿ ವಾರ ಪತ್ರಿಕೆಯೊಂದನ್ನು ಸ್ಥಾಪಿಸಿ ಇಲ್ಲಿನ ಜನರಿಗೆ ಪತ್ರಿಕೆ ಓದುವ ಹವ್ಯಾಸವನ್ನು ಹುಟ್ಟುಹಾಕಿದರು. ಅಲ್ಲಿಂದ ಕನ್ನಡ ಪತ್ರಿಕಾ ರಂಗದ ಉಗಮವಾಯಿತು.
ಆ ಸಂದರ್ಭದಲ್ಲಿ ಮದ್ರಾಸ್ ಅದಿಪತ್ಯಕ್ಕೆ ಸೇರಿದ ತುಳು ಜಿಲ್ಲೆಯು ಆಂಗ್ಲರ ಆಳ್ವಿಕೆಯ ಕಾಲದ ಆರಂಭದಲ್ಲಿ ಶಿಕ್ಷಣ, ಕೈಗಾರಿಕೆ, ವ್ಯಾಪಾರ, ಕಲೆ, ವ್ಯವಸಾಯ, ಮೊದಲಾದ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಲ್ಪಟ್ಟಿತ್ತು.

೧೯೪೩ ಜುಲೈ ೧ರಂದು ಹೊರಬಂದಿದ್ದ ಮಂಗಳೂರ ಸಮಾಚಾರ ಪತ್ರಿಕೆಯ ಬೆಲೆ `ಒಂದು ದುಡ್ಡು’ ಆಗಿತ್ತು. ಇದನ್ನು `ಕ್ರಯ ಒಂದು ದುಡ್ಡು’ ಎಂದು ನಮೂದಿಸಲ್ಪಟ್ಟಿತ್ತು. ಆರಂಭದಲ್ಲಿ ಈ ಮಂಗಳೂರ ಸಮಾಚಾರವನ್ನು ಪತ್ರಿಕೆ ಎಂದು ಕರೆಯದೆ, `ಕಾಗದ’ ಎಂದು ಕರೆಯಲಾಗುತ್ತಿತ್ತು!. ತಿಂಗಳಿಗೆ ಎರಡು ಆವೃತ್ತಿಯಷ್ಟೇ ಪ್ರಕಟಗೊಳ್ಳುತ್ತಿತ್ತು. ನಾಲ್ಕು ಪುಟಗಳ ವಾರಪತ್ರಿಕೆ ಮಂಗಳೂರ ಸಮಾಚಾರವು ಅಫ್ಘಾನಿಸ್ತಾನದ ಬಗ್ಗೆ ಸುದ್ದಿಗಳನ್ನು ಸಹ ಪ್ರಕಟಿಸಿತು!
ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಆರ್ಕೈವ್ಸ್ ವಿಭಾಗದ ಬೆನೆಟ್ ಜಿ ಅಮ್ಮಣ್ಣ ಅವರ ಪ್ರಕಾರ, ಪತ್ರಿಕೆಯು `ವೂರ ವರ್ತಮಾನ’ (ಸ್ಥಳೀಯ ಸುದ್ದಿ), `ಸರಕಾರದ ನಿರೂಪಗಳು’ ( ಈಸ್ಟ್ ಇಂಡಿಯಾ ಕಂಪನಿ ಮತ್ತು ಅದರ ಕಾನೂನುಗಳು ಮತ್ತು ನಿಯಮಗಳು), `ಸರ್ವ ರಾಜ್ಯ ವರ್ತಮಾನಗಳು’ (ರಾಜ್ಯ ವಾರ್ತೆಗಳು), (`ಹೊಸ ಸುದ್ದಿಗಳು), `ನೂತನವಾದ ಸುದ್ದಿಗಳು’ ಎಂಬ ಎಂಟು ವಿಭಿನ್ನ ಅಂಶಗಳನ್ನು ಒಳಗೊಂಡಿತ್ತು. ನಡತೆಗಳು’ `ಸುಬುದ್ದಿಗಳು’ (ಉತ್ತಮ ನಡತೆ), `ಕಥೆಗಳು ( ಪುರಂದರದಾಸರ ನೀತಿ ಕಥೆಗಳು ಮತ್ತು ಹಾಡುಗಳು ) ಮತ್ತು “ಸುದ್ದಿಯನ್ನು ಯಾರಾದರೂ ಕಳುಹಿಸಬಹುದು ಮತ್ತು ಅದು ನಿಜವಾಗಿದ್ದರೆ ಅದನ್ನು ಪ್ರಕಟಿಸಲಾಗುವುದು” ಎಂಬ ಪ್ರಕಟಣೆ ಒಳಗೊಂಡಿತ್ತು!. ಮ0ಗಳೂರ ಸಮಾಚಾರ ಅಳವಡಿಸಿಕೊಂಡಿರುವ ಅಂಕಣಗಳನ್ನೇ ಇಂದಿಗೂ ಬಹುತೇಕ ಎಲ್ಲಾ ಪತ್ರಿಕೆಗಳು `ಮೂಲ’ವಾಗಿಸಿಕೊಂಡು ಪ್ರಕಟಿಸುತ್ತಿವೆ ಎಂಬುದು ಗಮನಾರ್ಹ.

ಮಂಗಳೂರು ಸಮಾಚಾರ ಅಂದರೆ ” ಮಂಗಳೂರಿನ ಸುದ್ದಿ ” ಎಂದರ್ಥ. ಬಾಸೆಲ್ ಮಿಷನ್‌ನ ಜರ್ಮನ್ ರೆವರೆಂಡ್ ಹರ್ಮನ್ ಫ್ರೆಡ್ರಿಕ್ ಮೊಗ್ಲಿಂಗ್ ಅವರು ಪ್ರಕಟಿಸಿದರು. ಈ ಪತ್ರಿಕೆಯನ್ನು ಕಲ್ಲಿನ ಚಪ್ಪಡಿಗಳನ್ನು ಬಳಸಿ ಮುದ್ರಿಸಲಾಗುತ್ತಿತ್ತು, ಇದು ಇಂದಿಗೂ ಮಂಗಳೂರಿನ ಬಲ್ಮಠದಲ್ಲಿರುವ ಬಾಸೆಲ್ ಮಿಷನ್ ಪ್ರಿಂಟಿ0ಗ್ ಪ್ರೆಸ್‌ನಲ್ಲಿದೆ.