ಹರೀಶ್ ಕೆ ಆದೂರು
ಮೂಡುಬಿದಿರೆ: ಐತಿಹಾಸಿಕ ಕಾರ್ಯಕ್ರಮಕ್ಕೆ ಮೂಡುಬಿದಿರೆ ಸಾಕ್ಷಿಯಾಗುತ್ತಿದೆ. ಮೂಡುಬಿದಿರೆಯ ಮಣ್ಣಿನ ಮಗಳು, ವಸಾಹತು ಶಾಹಿಗಳ ವಿರುದ್ಧ ಹೋರಾಡಿದ ದೇಶದ ಪ್ರಥಮ ಮಹಿಳೆ ರಾಣಿ ಅಬ್ಬಕ್ಕ ದೇವಿ ಇನ್ನುಮುಂದೆ ಅಂಚೆ ಚೀಟಿಯಲ್ಲಿ ರಾರಾಜಿಸಲಿದ್ದಾಳೆ!. ಮೂಡುಬಿದಿರೆಯ ಕಲ್ಲಬೆಟ್ಟು ಎಕ್ಸಲೆಂಟ್ ಪದವಿಪೂರ್ವ ಕಾಲೇಜು ಈ ಅಂಚೆಚೀಟಿಯ ಪ್ರಾಯೋಜಕತ್ವ ವಹಿಸಿದ್ದು, ಡಿಸೆಂಬರ್ ೯ರಂದು ಭಾರತ ಸರಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವೀರರಾಣಿಯ ಮೊದಲ ಅಂಚೆಚೀಟಿಯನ್ನು ಮೂಡುಬಿದಿರೆಯಲ್ಲಿ ಅನಾವರಣಗೊಳಿಸಲಿದ್ದಾರೆ.
ವಸಾಹತು ಶಾಹಿಗಳ ವಿರುದ್ಧ ಹೋರಾಡಿದ ದೇಶದ ಸ್ವಾತಂತ್ರ್ಯಕ್ಕೆ ದೊಡ್ಡ ಕೊಡುಗೆ ನೀಡಿದ ಮೂಡುಬಿದಿರೆಯ ಮಣ್ಣಿನ ಮಗಳು ವೀರ ರಾಣಿ ಅಬ್ಬಕ್ಕ. ತುಳುನಾಡಿನ ವೀರ ವನಿತೆ, ಉಳ್ಳಾಲವನ್ನು ಆಳಿದ ಚೌಟ ರಾಣಿ ಅಬ್ಬಕ್ಕ ಮಂಗಳೂರಿನ ಬಂಗರಸರನ್ನು ವಿವಾಹವಾಗಿದ್ದರು. ಮೂಡುಬಿದಿರೆಯ ಚೌಟ ಮನೆತನದ ವೀರ ರಾಣಿ ಅಬ್ಬಕ್ಕ ಬರಿಗಾಲ ರಾಣಿ ಎಂದೇ ಖ್ಯಾತಿ ಪಡೆದಿದ್ದರು. ವ್ಯಾಪಾರ ಉದ್ದೇಶದಿಂದ ಪಶ್ಚಿಮ ಕರಾವಳಿಗೆ ಬಂದಿದ್ದ ಪೂರ್ಚುಗೀಸರು ಇಲ್ಲಿನ ನೆಲದ ಮೇಲೆ ಹಕ್ಕು ಸ್ಥಾಪನೆಗೆ ಮುಂದಾದಾಗ ಅವರ ವಿರುದ್ಧ ಸೆಡ್ಡು ಹೊಡೆದು ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಖ್ಯಾತಿ ಈ ಅಬ್ಬಕ್ಕನದ್ದು. ಸ್ಥಳೀಯ ಜನರೊಂದಿಗೆ ಪೋರ್ಚುಗೀಸರ ವಿರುದ್ಧ ಹೋರಾಡಿ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ಎನಿಸಿದ ರಾಣಿ ಅಬ್ಬಕ್ಕನ ಅತ್ಯದ್ಭುತ ಭಾವಚಿತ್ರದ ಅಂಚೆ ಚೀಟಿ ರಚನೆಯಾಗಿದೆ. ಇದು ಎಕ್ಸಲೆಂಟ್ ಸಮೂಹ ಸಂಸ್ಥೆಗಳ `ರಾಜಸಭಾಂಗಣ’ದಲ್ಲಿ ವಿದ್ಯುಕ್ತವಾಗಿ ಅನಾವರಣಗೊಳ್ಳಲಿದೆ.
ರಾಣಿ ಅಬ್ಬಕ್ಕ ಸೆಮಿನಾರ್ ಹಾಲ್: ಈ ನೆನಪನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ಸುಸಜ್ಜಿತ ರಾಣಿ ಅಬ್ಬಕ್ಕ ಸೆಮಿನಾರ್ ಹಾಲ್ ಒಂದನ್ನು ಎಕ್ಸಲೆಂಟ್ ಸಮೂಹ ಸಂಸ್ಥೆಗಳಲ್ಲಿ ಸಿದ್ಧಪಡಿಸಲಾಗಿದ್ದು, ಅದೇ ದಿನ ಅನಾವರಣಗೊಳ್ಳಲಿದೆ. ಸಭಾಂಗಣದಲ್ಲಿ ರಾಣಿ ಅಬ್ಬಕ್ಕ ದೇವಿಯ ಬೃಹತ್ ಭಾವಚಿತ್ರ ಹಾಗೂ ಬಿಡುಗಡೆಗೊಂಡ ಎಲ್ಲಾ ಅಂಚೆ ಚೀಟಿಗಳನ್ನು ಶಾಶ್ವತವಾಗಿ ಪ್ರದರ್ಶಿಸುವ ಕಾರ್ಯ ಸಂಸ್ಥೆಯ ಮೂಲಕ ಆಗಲಿದೆ.
ಉದ್ಘಾಟನೆಯ ಸಮಯದಲ್ಲಿ ಭಾರತೀಯ ಅಂಚೆ ಇಲಾಖೆ ಆರು ಲಕ್ಷ ಮುಖ ಬೆಲೆಯ ಅಂಚೆ ಚೀಟಿಗಳನ್ನು ಎಕ್ಸಲೆಂಟ್ ಸಮೂಹ ಸಂಸ್ಥೆಗಳಿಗೆ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಲಿದೆ. ಸ್ವಾತ್ರಂತ್ಯದ ಅಮೃತ ಮಹೋತ್ಸವದ ಶುಭಾವಸರದಲ್ಲಿ ರಾಣಿ ಅಬ್ಬಕ್ಕಳ ಭಾವಚಿತ್ರ ಹೊಂದಿರುವ ಅಂಚೆ ಚೀಟಿ ಹೊರಬರುತ್ತಿರುವುದು ಇಡೀ ನಾಡ ಜನತೆಗೆ ಹೆಮ್ಮೆಯಾಗಿದೆ. ಮೂಡುಬಿದಿರೆಗೆ ಸಂದ ಗೌರವವೂ ಆಗಿದೆ.
ಅಂಚೆ ಇಲಾಖೆಯ ಪ್ರಮುಖರಾದ ಎಸ್ ರಾಜೇಂದ್ರ ಕುಮಾರ್, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ, ಡಾ ಹೇಮಾವತೀ ವಿ ಹೆಗ್ಗಡೆ, ಸಂಸದ ನಳೀನ್ ಕುಮಾರ್ ಕಟೀಲು, ಶಾಸಕ ಉಮಾನಾಥ ಕೋಟ್ಯಾನ್, ಚೌಟರ ಅರಮನೆಯ ಕುಲದೀಪ್ , ಮಾಜಿ ಸಚಿವ ಕೆ ಅಭಯಚಂದ್ರ ಜೈನ್ ಮೊದಲಾದವರು ಪಾಲ್ಗೊಳ್ಳುವರು.
ಇದೊಂದು ದೊಡ್ಡ ಗರಿ: ಮನೆಮಗಳ ಅಂಚೆಚೀಟಿ ಹೊರತರುವ ಸದಾವಕಾಶ ನಮಗೆ ಸಿಕ್ಕಿದ್ದು ನಮ್ಮ ಪುಣ್ಯ ಎಂದು ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಅಭಿಪ್ರಾಯ ಪಟ್ಟಿದ್ದಾರೆ. ಇದು ಸಮಾಜಕ್ಕೆ ದೊಡ್ಡ ಕೊಡುಗೆ, ನಮಗೊಂದು ಶಾಶ್ವತ ದಾಖಲೆಯಾಗಿದೆ. ನಮ್ಮ ಸಂಸ್ಥೆಯ ಪಾಲಿಗೆ ಇದೊಂದು ದೊಡ್ಡ ಗರಿ ಸೇರ್ಪಡೆಯಾದಂತಾಗಿದೆ ಎಂದು ಮಾಹಿತಿ ಹಂಚಿಕೊ0ಡಿದ್ದಾರೆ.
ರಾಣಿ ಅಬ್ಬಕ್ಕಳ ಅನೇಕ ಭಾವಚಿತ್ರಗಳನ್ನು ಪರಿಶೀಲಿಸಿ ಅಂತಿಮವಾಗಿ ಪ್ರೊ ತುಕಾರಾಮ್ ಪೂಜಾರಿ ಅವರ ರಾಣಿ ಅಬ್ಬಕ್ಕ ಸಂಶೋಧನಾ ಕೇಂದ್ರದಲ್ಲಿರುವ ಅತ್ಯದ್ಭುತ ಭಾವಚಿತ್ರವನ್ನು ಆಯ್ದುಕೊಳ್ಳಲಾಗಿದೆ. ನಿಂತ ಭಂಗಿಯಲ್ಲಿರುವ ಹಸನ್ಮುಖಿ ಚಿತ್ರ ಅತ್ಯದ್ಭುತವಾಗಿದೆ. ಸೊಂಟಕ್ಕೆ ಕಠಾರಿ, ಕೈಯಲ್ಲಿ ಖಡ್ಗ, ಬಲ ಮುಂಗೈಯನ್ನು ಮಡಚಿ ಸೊಂಟದ ಮೇಲೆ ಇರಿಸಿರುವ ಭಂಗಿಯಲ್ಲಿ ರಾಣಿ ಅಬ್ಬಕ್ಕನನ್ನು ಚಿತ್ರಿಸಲಾಗಿದೆ.