ನಮ್ಮ ಹಕ್ಕನ್ನು ಕಸಿಯಲು ನೀವ್ಯಾರು? ನೀವು ಇಲ್ಲಿಂದ ಹೋಗಿ
ಮೂಡುಬಿದಿರೆ: ಬಹು ನಿರೀಕ್ಷೆಯ ಯುಕೆಟಿಎಲ್ ಯೋಜನೆಯ ಅನುಷ್ಠಾನಕ್ಕೆ ಅಶ್ವತ್ಥಪುರ ಗ್ರಾಮದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಕಂಪೆನಿಯ ಅಧಿಕಾರಿಗಳು ಭೂ ಮಾಲಿಕರನ್ನು ಓಲೈಸುವ ಪ್ರಯತ್ನ ವಿಫಲವಾಗಿದೆ. ತನ್ಮೂಲಕ ಕಂಪೆನಿ ಮತ್ತೊಮ್ಮೆ ಪೆಚ್ಚುಮೋರೆ ಹಾಕುವಂತಾಗಿದೆ.
ಕAಪೆನಿಯ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಅಹಿತಕವಾಗಿ ವರ್ತಿಸಿದ್ದು, ಗ್ರಾಮಸ್ಥರ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಉಡಾಫೆ ಮಾತುಗಳ ಮೂಲಕ ಭೂ ಮಾಲಿಕರನ್ನು ಕೆರಳಿಸುವಂತೆ ಮಾಡಿದೆ. ಭೂಮಾಲಿಕರ ಅಬ್ಬರಕ್ಕೆ ಮಣಿದು ಬಂದ ದಾರಿಗೆ ಸುಂಕವಿಲ್ಲ ಎಂದು ಕಂಪೆನಿಯ ಅಧಿಕಾರಿಗಳು ಜೀಪೇರಿ ಹೋಗಿದ್ದಾರೆ.
ಯಾವುದೇ ಆಕ್ಷೇಪ, ಅಪೇಕ್ಷೆಗಳಿದ್ದಲ್ಲಿ ಒಂದು ವಾರದೊಳಗೆ ಗ್ರಾಮ ಪಂಚಾಯತಿಗೆ ಲಿಖಿತ ದೂರು ನೀಡಿ, ಅದನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ತಲುಪಿಸುವ ಕಾರ್ಯವನ್ನು ಪಂಚಾಯತ್ ಮಾಡಲಿದೆ ಎಂದು ತೆಂಕಮಿಜಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೋಹಿಣಿ ಬಿ ಹೇಳಿದರು.
ಮಂಗಳವಾರ ಅಶ್ವತ್ಥಪು ನೀರ್ಕೆರೆಯಲ್ಲಿರುವ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳಲಿರುವ ಯುಕೆಟಿಎಲ್ ಯೋಜನೆಯ ಕುರಿತು ಭೂ ಮಾಲಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಅನುಷ್ಠಾನ ಕಂಪೆನಿಯ ಅಧಿಕಾರಿಗಳೊಂದಿಗೆ ಏರ್ಪಡಿಸಿದ ಸಭೆಯಲ್ಲಿ ಈ ತೀರ್ಮಾನ ಪ್ರಕಟಿಸಿದರು.
ಯೋಜನೆಯ ಅನುಷ್ಠಾನಕ್ಕೆ ಬೇಕಾಗಿರುವ ಟವರ್ ಸ್ಥಾಪನೆಗೆ ಭೂಮಿ ಕಳೆದುಕೊಳ್ಳುವ ೧೨ ಮಂದಿ ಸಭೆಯಲ್ಲಿ ಪಾಲ್ಗೊಂಡು, ತೀವ್ರ ಆಕ್ಷೇಪ ವಿರೋಧ ವ್ಯಕ್ತಪಡಿಸಿದರು. ಮಾತೃಭೂಮಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಆಲ್ಫೋನ್ಸ್ ಡಿ’ಸೋಜ, ಭಾಸ್ಕರ್ ತೀವ್ರ ವಿರೋಧಗಳೊಂದಿಗೆ ಉಗ್ರವಾಗಿ ಪ್ರತಿಭಟಿಸಿದರು. ಅನುಷ್ಠಾನ ಗೊಳಿಸುವ ಸ್ಟೆರ್‌ಲೈಟ್ ಕಂಪೆನಿಯ ಬಲವೀರ್ ಅವರು, “ಇದು ಕೇಂದ್ರ ಸರಕಾರದ ಯೋಜನೆಯಾಗಿದೆ. ಅನುಷ್ಠಾನ ಮಾಡಿಯೇ ಸಿದ್ಧ. ಭೂಮಿ ಇಲ್ಲದ ನೀವು ಮಾತನಾಡಬೇಡಿ” ಎಂದು ಒಂದು ಹಂತದಲ್ಲಿ ಉದ್ದಟತನದಲ್ಲಿ ಹೇಳಿರುವುದು ತೀವ್ರ ಗಲಭೆಗೆ ಕಾರಣವಾಯಿತು. ಭೂ ಮಾಲಕರು ಕೆರಳಿ, ಎಲ್ಲಿಂದಲೋ ಬಂದ ನೀವು ಈ ಮಾತು ಹೇಳುವುದು ಸರಿಯಲ್ಲ. ಇದು ನಮ್ಮ ಭೂಮಿ. ನಮ್ಮ ಹಕ್ಕನ್ನು ಕಸಿಯಲು ನೀವ್ಯಾರು? ನೀವು ಇಲ್ಲಿಂದ ಹೋಗಿ” ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.
“ಗ್ರಾಮಪ0ಚಾಯತ್ ನೀಡಿದ ಅಧಿಕೃತ ನೊಟೀಸಿಗೆ ಮಾನ್ಯತೆ ನೀಡಿಯೇ ನಾನು ಆಗಮಿಸಿದ್ದೇನೆ. ನನ್ನನ್ನು ಪ್ರಶ್ನಿಸುವ ಅಧಿಕಾರ ನಿಮಗಿಲ್ಲ” ಎಂದು ಮಾತೃಭೂಮಿ ಹೋರಾಟ ಸಮಿತಿಯ ಅಧ್ಯಕ್ಷ ಆಲ್ಫೋನ್ಸ್ ಉಗ್ರವಾಗಿ ಹೇಳಿದರು. ಸಭೆಯಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಯಿತು. ಅಂತಿಮವಾಗಿ ವೈಯಕ್ತಿಕ ಅಭಿಪ್ರಾಯಗಳನ್ನು ಲಿಖಿತ ರೂಪದಲ್ಲಿ ನೀಡುವಂತೆ ಪಿಡಿಒ ಸಲಹೆ ನೀಡಿದರು.
ಪಂಚಾಯತ್ ಅಧ್ಯಕ್ಷೆ ಶಾಲಿನಿ ಕೆ ಸಾಲ್ಯಾನ್, ಉಪಾಧ್ಯಕ್ಷ ಕರುಣಾಕರ, ಎಸ್‌ಡಿಎ ರಮೇಶ್ ಬಂಗೇರ, ಆರ್ ಐ ಮಂಜುನಾಥ, ಕಂಪೆನಿಯ ಮುಖ್ಯಸ್ಥರಾದ ಬಲವೀರ್, ಸಲಹೆಗಾರ ಮಂಜುನಾಥ ಶೆಟ್ಟಿ ಉಪಸ್ಥಿತರಿದ್ದರು.