ದಕ್ಷಿಣ ಕನ್ನಡ: ಐತಿಹಾಸಿಕ ಪ್ರಸಿದ್ಧಿಯ ಉಳ್ಳಾಲದ ಸೋಮೇಶ್ವರ , ಸೋಮನಾಥ ದೇವಸ್ಥಾನದಲ್ಲಿ ಪ್ರಾಚೀನ ಶಾಸನವೊಂದು ಪತ್ತೆಯಾಗಿದೆ. ಪುರಾತತ್ವ ವಿದ್ವಾಂಸ ಪ್ರೊ ಟಿ ಮುರುಗೇಶಿ ಈ ಶಾಸನವನ್ನು ಅಧ್ಯಯನ ಮಾಡಿದ್ದು, ಆಳುಪ ಚಕ್ರವರ್ತಿ ಮೊದಲನೇ ಕುಲಶೇಖರ ಆಳುಪೇಂದ್ರನ ಮರಣ ಶಾಸನ ಇದೆಂದು ಹೇಳಿದ್ದಾರೆ. ಆಯತಾಕಾರದ ಶಿಲೆಯ ಮೇಲೆ ಎರಡು ಆಕರ್ಷಕ ಚಿತ್ರಪಟ್ಟಿಕೆಗಳಿದ್ದು, ಆ ಚಿತ್ರಪಟ್ಟಿಕೆಗಳ ನಡುವಿನ ಪಟ್ಟಿಯ ಮೇಲೆ ಶಾಸನದ ಪ್ರಥಮ ಸಾಲನ್ನು ಬರೆಯಲಾಗಿದೆ. ಕೆಳಭಾಗದಲ್ಲಿ ೧೧ ಸಾಲುಗಳ ಶಾಸನವನ್ನು ಬರೆಯಲಾಗಿದೆ. ಮೊದಲನೇ ಸಾಲಿನಲ್ಲಿ ಸೋಮೇಶ್ವರ ದೇವಾಲಯದ ಸೋಮೇಶ್ವರ ಸೋಮಪ್ರಭು ಇಲ್ಲಿ ನೆಲೆಸಿದ್ದಾನೆ ಎಂದು ಹೇಳಲಾಗಿದೆ.
ಮೊದಲನೇ ಕುಲಶೇಖರನನ್ನು ಸೋಮಕುಲತಿಲಕ, ಪಾಂಡ್ಯ ಮಹಾರಾಜಾಧಿ ರಾಜ, ಪರಮೇಶ್ವರ, ಪರಮಭಟ್ಟಾರಕನೆಂದು ವರ್ಣಿಸಲಾಗಿದೆ. ತದನಂತರ ಶಾಸನದ ೫ ಮತ್ತು ೬ನೇ ಸಾಲಿನಲ್ಲಿ ಶ್ರೀಮತ್ಕುಲಸೇಕರಾಳ್ವರನನಳುಪಿದ ಅಂದರೆ ಮರಣ ಹೊಂದಿದ ಎಂದು ಉಲ್ಲೇಖಿಸಲಾಗಿದೆ. ಅವನ ಮರಣದ ತರುವಾಯ ಸಿರಿದೇವಯ್ಯ ಎಂಬುವನು ದಲ್ಯ ಛತ್ತರ ಅಂದರೆ ರಾಜಲಾಂಛನ ಸೂಚಕವಾದ ಬಿಳಿಕೊಡೆಯನ್ನು ಕಿತ್ತ. ಕೆಸವನ ಬಹುಶಃ ಕೇಶವಣ್ಣ ಎಂಬುವನು ಈ ಶಾಸನದ ಕೈಯನ್ನು ಮಾಡಿಸಿದ ಎಂದು ವಿವರಿಸಲಾಗಿದೆ. ಶಾಸನದ ಕೊನೆಯ ಎರಡು ಸಾಲುಗಳ ಅರ್ಥ ಸ್ಪಷ್ಟವಾಗಿಲ್ಲ ಎಂದವರು ಹೇಳಿದ್ದಾರೆ.