ಬೌದ್ಧಿಕ ಶ್ರಮದ ಬರವಣಿಗೆ ಪ್ರೋತ್ಸಾಹ ನೀಡುವ ಕಾರ್ಯ ಮಹತ್ವದ್ದಾಗಿದೆ :ಅಜಕ್ಕಳ ಗಿರೀಶ್ ಭಟ್
ಮೂಡುಬಿದಿರೆ: ಸಮಾಜ ಮಂದಿರ ಸಭಾದ ವತಿಯಿಂದ ೭೬ನೇ ಮೂಡುಬಿದಿರೆಯ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ ಸಮಾಜ ಮಂದಿರದಲ್ಲಿ ನಡೆಯುತ್ತಿದ್ದು, ಮಂಗಳವಾರ ಹೊತ್ತು ಕಂತುವ ಹೊತ್ತಿಗೆ ವರ್ಧಮಾನ ಪ್ರಶಸ್ತಿ ಪ್ರದಾನ ನಡೆಯಿತು. ವರ್ಧಮಾನ ಪ್ರಶಸ್ತಿ ಪೀಠದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಜೈನಮಠದ ಭಟ್ಟಾರಕ ಶ್ರೀಗಳ ಉಪಸ್ಥಿತಿಯಲ್ಲಿ, ಪೀಠದ ಅಧ್ಯಕ್ಷ ಎಸ್. ಡಿ. ಸಂಪತ್ ಸಾಮ್ರಾಜ್ಯ ಅವರು ಡಾ. ಅಜಕ್ಕಳ ಗಿರೀಶ ಭಟ್ (ವರ್ಧಮಾನ ಸಾಹಿತ್ಯ ಪ್ರಶಸ್ತಿ), ಎಂ. ಆರ್. ದತ್ತಾತ್ರಿ (ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ )ಪ್ರದಾನ ಮಾಡಿ ಗೌರವಿಸಿದರು.
ವರ್ಧಮಾನ ಪ್ರಶಸ್ತಿಗೆ ಕರ್ನಾಟಕದಲ್ಲಿ ದೊಡ್ಡ ಬೆಲೆಯಿದೆ. ಇದೊಂದು ವಿಶೇಷವಾದ ಪ್ರಶಸ್ತಿ. ವರ್ಧಮಾನ ಪ್ರಶಸ್ತಿಯ ಬೆಲೆ ಯಾವತ್ತೂ ಕಡಿಮೆಯಾಗಿಲ್ಲ ಎಂದು ಪ್ರಶಸ್ತಿ ಸ್ವೀಕರಿಸಿದ ಅಜಕ್ಕಳ ಗಿರೀಶ್ ಭಟ್ ಅಭಿಪ್ರಾಯಿಸಿದರು. ಜ್ಞಾನದ ಅನ್ವೇಶಣೆಗೆ ಅದರದ್ದೇ ಆದ ಮೌಲ್ಯವಿದೆ. ಅರ್ಥ ಮಾಡಿಕೊಳ್ಳಬೇಕಾದಂತಹ ಬಹರ ಬರೆಯುವುದು ಅತೀ ಅಗತ್ಯ. ಈ ರೀತಿಯ ಬೌದ್ಧಿಕ ಶ್ರಮದ ಬರವಣಿಗೆ ಪ್ರೋತ್ಸಾಹ ನೀಡುವ ಕಾರ್ಯ ಮಹತ್ವದ್ದಾಗಿದೆ ಎಂದರು. ಹಿರಿಯ ಸಾಹಿತಿ, ಪೀಠದ ಪ್ರಧಾನ ನಿರ್ದೇಶಕ ಡಾ ನಾ ಮೊಗಸಾಲೆ ಪ್ರಾಸ್ತಾವಿಕಮಾತುಗಳನ್ನಾಡಿದರು. ಮುನಿರಾಜ ರೆಂಜಾಳ ಕಾರ್ಯಕ್ರಮ ನಿರ್ವಹಿಸಿದರು. ಸದಾನಂದ ನಾರಾವಿ ಪ್ರಶಸ್ತಿ ಪತ್ರ ವಾಚಿಸಿದರು. ಬಳಿಕ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ “ಗೀತ ಸಾಹಿತ್ಯ ಸಲ್ಲಾಪ” ಕಾರ್ಯಕ್ರಮ ನಡೆಯಿತು.