ಧಾರ್ಮಿಕ ಭಾವನೆಗಳಿಗೆ ಧಕ್ಕೆ: ಸಿಡಿದೆದ್ದ ಭಕ್ತರು

ಜನಪ್ರತಿನಿಧಿಯ ಸೊಕ್ಕಿಗೆ ದೇಗುಲದ ಭಕ್ತವೃಂದ ಗರಮ್
ಮೂಡುಬಿದಿರೆ: ನಗರದ ಕಲ್ಸಂಕ ಬಳಿಯಿರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಭಕ್ತಾದಿಗಳ ನಿಯೋಗವು ಮೂಡುಬಿದಿರೆ ತಹಸೀಲ್ದಾರ್ ಅವರನ್ನು ಭೇಟಿ ನೀಡಿ, ದೇವಸ್ಥಾನದ ರಾಜಾಂಗಣದಲ್ಲಿ ನಡೆಯುತ್ತಿರುವ ಅನಪೇಕ್ಷಿತ ವಿದ್ಯಮಾನಗಳ ಬಗ್ಗೆ ಸುಮಾರು ೬೦ ಭಕ್ತಾದಿಗಳ ಸಹಿಯುಳ್ಳ ಮನವಿಯನ್ನು ಸಲ್ಲಿಸಿದೆ. ಐತಿಹಾಸಿಕ ಪ್ರಸಿದ್ಧಿಯ ಮೂಡುಬಿದಿರೆ ಶ್ರೀಕೃಷ್ಣ ದೇವಸ್ಥಾನದ ಪಾವಿತ್ರö್ಯತೆಗೆ ಧಕ್ಕೆಯುಂಟುಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಜನ ಪ್ರತಿನಿಧಿಯೊಬ್ಬರು ಆಸ್ತಿಕ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.


ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬಳಿ ವಾಸವಾಗಿರುವ ಹಾಲಿ ಪುರಸಭಾ ಸದಸ್ಯೆ, ಈಕೆಯ ಮನೆಯವರು ಹಾಗೂ ಇತರರು ದೇವಸ್ಥಾನದ ಪ್ರಾಂಗಣದಲ್ಲಿ ಪಾದರಕ್ಷೆ ಧರಿಸಿಕೊಂಡು ಓಡಾಡುತ್ತಿದ್ದು, ಹಿಂದೂ ದೇವಸ್ಥಾನದ  ಪವಿತ್ರತೆಗೆ ಧಕ್ಕೆ ತಂದಿರುತ್ತಾರೆ. ಧಾರ್ಮಿಕತೆಯ ಹಿನ್ನೆಲೆಯುಳ್ಳ ರಾಜಕೀಯ ಪಕ್ಷದ ಜನಪ್ರತಿನಿಧಿಯಾಗಿ ಹಿಂದೂ ದೇವಸ್ಥಾನದ ಸಂಸ್ಕೃತಿಗೆ ಅಪಚಾರವೆಸಗುತ್ತಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಹಲವು ಬಾರಿ ವಿನಂತಿಸಿದರೂ, ಧಿಕ್ಕರಿಸಿ ಚಪ್ಪಲಿ ಧರಿಸಿ ಓಡಾಡುತ್ತಾ ಭಕ್ತಾದಿಗಳ ನಂಬಿಕೆಗೆ ಹಾಗೂ ಕ್ಷೇತ್ರದ ಪರಂಪರೆಗೆ ಅಗೌರವ ತೋರುತ್ತಿದ್ದಾರೆ. ದೇವಸ್ಥಾನದ ಎದುರಿನ ರಾಜಾಂಗಣಕ್ಕೆ ಹಾಗೂ ಮಹಾಬಲಿ ಪೀಠಕ್ಕೆ ವಿಶೇಷವಾದ ಮಹತ್ವ ಹಾಗೂ ಪವಿತ್ರತೆ ಇರುತ್ತದೆ. ಅದೂ ಅಲ್ಲದೇ ಅಂಗಣದ ವಾಯುವ್ಯ ದಿಕ್ಕಿನಲ್ಲಿ ದೈವ ಸಾನಿಧ್ಯವೂ ಇದೆ. ಈ ಎಲ್ಲಾ ವಿಷಯಗಳನ್ನು ಅರಿತುಕೊಂಡಿದ್ದರೂ, ನಿರ್ಲಕ್ಷ್ಯತೆಯ ಮನೋಭಾವವನ್ನು ತೋರುತ್ತಿದ್ದು, ನಮ್ಮ ಭಾವನೆಗಳಿಗೆ ಅಪಚಾರವೆಸಗುತ್ತಿದ್ದಾರೆ.ದೇವಸ್ಥಾನದ ವಠಾರದ ಎಲ್ಲಾ ಮನೆಗಳಿಗೆ ಪುರಸಭೆಯ ಕಾಂಕ್ರೀಟ್ ರಸ್ತೆ ಸಂಪರ್ಕ ವ್ಯವಸ್ಥೆಯಿದ್ದೂ, ಸಂಚಾರಕ್ಕೆ ದೇವಸ್ಥಾನದ ಪ್ರಾಂಗಣವನ್ನು ಬಳಸುತ್ತಿದ್ದಾರೆ ಎಂದು ಭಕ್ತರು ಆರೋಪಿಸಿದ್ದಾರೆ. ಪಾದರಕ್ಷೆ ಧರಿಸದೇ, ದೇವಸ್ಥಾನದ ಪವಿತ್ರತೆ ಕಾಪಾಡಬೇಕೆಂದು ಸೂಚನಾ ಫಲಕವನ್ನು ಅಳವಡಿಸಿದ್ದರೂ, ಅದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಈ ಪುರಸಭಾ ಸದಸ್ಯೆ ದೇವಸ್ಥಾನದ ಆವರಣದ ಗೋಡೆಯನ್ನು ಹಾರಿ, ಅಕ್ರಮ ಪ್ರವೇಶಗೈಯುವುದರ ಮೂಲಕ ವಿನಂತಿಯನ್ನು ಸಹ ಕಡೆಗಣಿಸುತ್ತಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

Share

Leave a Reply

Your email address will not be published. Required fields are marked *