ಮೂಡುಬಿದಿರೆ: ಪತ್ರಕರ್ತ ಮಿತ್ರ ವೇಣುಗೋಪಾಲ್ ಇನ್ನಿಲ್ಲ ಎಂಬುದನ್ನು ನಂಬಲು ಸಾಧ್ಯವೇ ಇಲ್ಲ. ಹಲವು ಕನಸುಗಳನ್ನು ಹೊತ್ತ ಯುವಕ, ಸಾಧಿಸುವ ಛಲವಾದಿ, ಬಹುಬೇಗ ಎದ್ದು ಹೋಗಿದ್ದಾರೆ. ಪ್ರತಿಯೊಬ್ಬರಿಗೂ ಗೌರವ ನೀಡುತ್ತಾ, ಹಿಡಿದ ಕೆಲಸವನ್ನು ಪೂರ್ಣಗೊಳಿಸುವ ಛಾತಿ ಹೊಂದಿದ ವೇಣುಗೋಪಾಲ್ ಇಷ್ಟುಬೇಗ ನಮ್ಮೆಲ್ಲರನ್ನಗಲಿದ್ದಾರೆ ಎಂಬುದನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಮಾಧ್ಯಮ ಕ್ಷೇತ್ರದಷ್ಟೇ ವಕೀಲ ವೃತ್ತಿಯನ್ನೂ ಪ್ರೀತಿಸುತ್ತಾ, ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಕ್ರಿಯಾಶೀಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಮೂಡುಬಿದಿರೆ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನಾಲ್ಕು ಅವಧಿಯಲ್ಲಿ ಅಧ್ಯಕ್ಷರಾಗಿದ್ದುಕೊಂಡು, ಸಂಘದ ಅಭಿವೃದ್ಧಿ, ಮೂಡುಬಿದಿರೆಯ ಹೃದಯ ಭಾಗದಲ್ಲಿ ಸಂಘಕ್ಕೊ0ದು ದೊಡ್ಡ ಆಸ್ತಿಯನ್ನು ಮಾಡಿದ ಛಲಗಾರ ಈ ವೇಣು. ಯೋಜನೆಯನ್ನು ಯೋಚನೆಯಂತೆ ಮಾಡುತ್ತಾ, ತನ್ನದೇ ಆದ ರೀತಿಯಲ್ಲಿ ಕೆಲಸಗಳನ್ನು ನಿರ್ವಹಿಸುವ ಗುಣ ಹೊಂದಿದ್ದರು.
ಜಯಕಿರಣ ಪತ್ರಿಕೆಯ ಮೂಡುಬಿದಿರೆ ತಾಲೂಕು ವರದಿಗಾರರಾಗಿ ನೇರ, ನಿಷ್ಟುರವಾಗಿ ವರದಿ ಮಾಡುತ್ತಿದ್ದು ವೇಣುಗೋಪಾಲ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ವೇಣುಗೋಪಾಲ ಅವರು ನಿನ್ನೆ ರಾತ್ರಿ ತನ್ನ ಸಹೋದರಿಯ ಮನೆಗೆ ಹೋಗಿದ್ದು ಇಂದು ಬೆಳಿಗ್ಗೆ ಅವರಿಗೆ ಹೃದಯಾಘಾತ ಸಂಭವಿಸಿದೆ. ಸಚ್ಚೇರಿಪೇಟೆಯ ಆನಂದ ಪೂಜಾರಿ ಅವರ ಪುತ್ರರಾಗಿರುವ ವೇಣುಗೋಪಾಲ ಅವರು ಅವಿವಾಹಿತರಾಗಿದ್ದಾರೆ. ಮೃತರ ನಿಧನಕ್ಕೆ ಮೂಡುಬಿದಿರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮೂಡುಬಿದಿರೆ ವಕೀಲರ ಸಂಘ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ ವ್ಯಕ್ತಪಡಿಸಿದೆ. ಶಾಸಕ ಉಮಾನಾಥ ಕೋಟ್ಯಾನ್, ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಮೋಹನ್ ಆಳ್ವ, ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಸಂತಾಪ ವ್ಯಕ್ತಪಡಿಸಿದ್ದಾರೆ.