ಈದಿನ ವಿಶೇಷ
ಕಾಸರಗೋಡು: ಇದು ನಿಜಕ್ಕೂ ಪ್ರಶಂಸಾರ್ಹ ಕಾರ್ಯ. ಕೇರಳ ಸರಕಾರ ಗ್ರಾಮೀಣ ಭಾಗದ ಜನತೆಯ ಸಾರಿಗೆ ಸಮಸ್ಯೆಯನ್ನು ಅಕ್ಷರಶಃ ಬಗೆಹರಿಸಿದೆ. ಗ್ರಾಮಬಂಡಿ ಎಂಬ ಯೋಜನೆಯನ್ನು ಅನುಷ್ಠಾನಮಾಡುವ ಮೂಲಕ ಮಾದರಿಯಾಗಿದೆ. ಅದೆಷ್ಟೋ ಕುಟುಂಬಗಳಿಗೆ ಸ್ವಂತ ವಾಹನಗಳೇ ಇಲ್ಲ. ಪ್ರಯಾಣಕ್ಕಾಗಿ ಒಂದೋ ಇತರ ಖಾಸಗೀ ವಾಹನಗಳನ್ನು ಅವಲಂಬಿಸಬೇಕು. ಅಥವಾ ಇನ್ಯಾರದ್ದೋ ಸಹಾಯ ಪಡೆಯಬೇಕು. ಇಂತಹ ಪರಿಸ್ಥಿತಿಯನ್ನು ಅರ್ಥೈಸಿಕೊಂಡ ಸರಕಾರ ಇದಕ್ಕೊಂದು ಪರಿಹಾರವನ್ನು ಹುಡುಕಿದೆ. ಸ್ಥಳೀಯ ಸರಕಾರವೆಂದೇ ಗುರುತಿಸಿಕೊಂಡ ಗ್ರಾಮಪಂಚಾಯತ್ ಹಾಗೂ ಕೇರಳ ಸರಕಾರದ ಸಾರಿಗೆ ಜಂಟಿಯಾಗಿ ಗ್ರಾಮ ಬಂಡಿ ಎಂಬ ಯೋಜನೆಯನ್ನು ರೂಪಿಸಿ, ಕಾರ್ಯಾರಂಭ ಮಾಡಿದೆ.
ಇದೊಂದು ಮಾದರೀ ಯೋಜನೆ.
ಗ್ರಾಮಬಂಡಿ ಯೋಜನೆಯ ಮೂಲಕ ಎಲ್ಲರಿಗೂ ಸರಕಾರಿ ಬಸ್ಸು ಸೇವೆ ದೊರೆಯುವಂತೆ ಮಾಡುವ ಗುರಿ ಸರಕಾರದ್ದಾಗಿದೆ ಎಂದು ರಾಜ್ಯ ಸಾರಿಗೆ ಸಚಿವ ಆಂಟನಿ ರಾಜು ಹೇಳಿದರು. ಕುಂಬಳೆ ಗ್ರಾಮ ಪಂಚಾಯಿತಿ ಹಾಗೂ ಕೆಎಸ್‌ಆರ್‌ಟಿಸಿ ಜಂಟಿಯಾಗಿ ಹಮ್ಮಿಕೊಂಡಿರುವ ‘ಗ್ರಾಮ ಬಂಡಿ’ ಯೋಜನೆಗೆ ಶುಕ್ರವಾರ ಕುಂಬಳೆ ಬಂಬ್ರಾಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಒಳನಾಡಿನ ಪ್ರಯಾಣ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ಸ್ಥಳೀಯಾಡಳಿತ ಮತ್ತು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಜಂಟಿಯಾಗಿ ತಂದಿರುವ ಯೋಜನೆ `ಗ್ರಾಮಬಂಡಿ’ ಎಂದ ಸಚಿವರು, ಮಂಗಳೂರಿನ ವಿವಿಧ ಕಾಲೇಜುಗಳಲ್ಲಿ ಓದುತ್ತಿರುವ ಮಂಜೇಶ್ವರ ವ್ಯಾಪ್ತಿಯ ವಿದ್ಯಾರ್ಥಿಗಳ ಬಹುಕಾಲದ ಬಸ್ ರಿಯಾಯಿತಿಯ ಕನಸನ್ನು ರಾಜ್ಯ ಸರಕಾರ ನನಸು ಮಾಡಿದೆ ಎಂದಿದ್ದಾರೆ. ಎಐ ಕ್ಯಾಮೆರಾ ಜಾರಿಗೆತಂದಾಗ ವಿವಿಧ ಮೂಲೆಗಳಿಂದ ಅನೇಕ ರೀತಿಯ ಆಕ್ಷೇಪಣೆಗಳು ಬಂದವು. ಎಐ ಕ್ಯಾಮೆರಾ ಬಂದ ಬಳಿಕ, ವಾಹನ ಅಪಘಾತಗಳು ಮತ್ತು ಸಂಚಾರ ಉಲ್ಲಂಘನೆಗಳ ಸಂಖ್ಯೆ ಕಡಿಮೆಯಾಗಿದೆ. ರಾಜ್ಯ ಸರಕಾರ ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ದೇಶದಲ್ಲೇ ಮಾದರಿ ಎಐ ಕ್ಯಾಮೆರಾ ಕುರಿತು ತಿಳಿದುಕೊಳ್ಳಲು ಕರ್ನಾಟಕ, ಮಹಾರಾಷ್ಟç ರಾಜ್ಯಗಳಿಂದ ಅಧಿಕಾರಿಗಳು ಬರುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.