ಮೂಡುಬಿದಿರೆ: ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ಇದರ ಆಶ್ರಯದಲ್ಲಿ , ಪ್ರಾಂತ ಕಮಿಟಿ ಹಾಗೂ ದಿಗಂಬರ ಜೈನಮಠ ಮೂಡುಬಿದಿರೆ ಇದರ ಸಹಯೋಗದೊಂದಿಗೆ ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸಂತ ಸಮಾವೇಶ ಅಕ್ಟೋಬರ್ ೯ ರಂದು ಬೆಳಗ್ಗೆ ೧೧.೩೦ಕ್ಕೆ ಮೂಡುಬಿದಿರೆ ಮಹಾವೀರ ಭವನದಲ್ಲಿ ನಡೆಯಲಿದೆ ಎಂದು ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ರಾಜ್ಯಾಧ್ಯಕ್ಷ ಮಹಾ ಮಂಡಲೇಶ್ವರ ಸ್ವಾಮಿ ಓಂ ಶ್ರೀ ವಿದ್ಯಾನಂದ ಸರಸ್ವತೀ ಶ್ರೀಗಳು ಹೇಳಿದ್ದಾರೆ.
ಜೈನಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ರಾಮಕ್ಷೇತ್ರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ವಿಚಾರ, ವಾರಣಾಸಿಯಲ್ಲಿ ನಡೆಯುವ ಸಂಸ್ಕೃತಿ ಸನ್ಸತ್ ೨೩ರಲ್ಲಿ ಪಾಲ್ಗೊಳ್ಳುವ ವಿಚಾರ, ಕರ್ನಾಟಕದಲ್ಲಿ ಸಂತರು ಹಾಗೂ ಸನಾತನಿಗಳು ಎದುರಿಸುವ ವಿಷಯಗಳ ಬಗ್ಗೆ, ಮುಜರಾಯಿ ಇಲಾಖೆಯಿಂದ ಮಠಗಳಿಗೆ ಅಗತ್ಯವಾದ ಫಂಡ್ ಲಭ್ಯವಾಗುವ ವಿಚಾರ ಸೇರಿದಂತೆ ಅನೇಕ ವಿಚಾರಗಳು ಸಂತ ಸಮಾವೇಶದಲ್ಲಿ ಚರ್ಚೆಯಾಗಲಿವೆ ಎಂದರು. ತ್ರಿಜಿಲ್ಲಾ ಸಂತ ಸಮಾವೇಶದಲ್ಲಿ ಸುಮಾರು ೪೦ ಮಠಗಳ ಶ್ರೀಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮೂಡುಬಿದಿರೆ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಶ್ರೀಗಳು, ಮಾತಾಶ್ರೀ ಓಂ ಶ್ರೀ ಶಿವ ಜ್ಞಾನಮಹಿ ಸರಸ್ವತೀ ಉಪಸ್ಥಿತರಿದ್ದರು.