ಆಳ್ವಾಸ್ ಪ್ರಗತಿ ೨೦೨೩ ಬೃಹತ್ ಉದ್ಯೋಗ ಮೇಳ
ಮೂಡುಬಿದಿರೆ: ಹದಿಮೂರು ಸಾವಿರದ ಆರು ನೂರಕ್ಕೂ ಹೆಚ್ಚಿನ ಉದ್ಯೋಗಾವಕಾಶ, ೨೦೩ಕ್ಕೂ ಹೆಚ್ಚು ಪ್ರಸಿದ್ಧ ಬಹುರಾಷ್ಟ್ರೀಯ ಹಾಗೂ ಸ್ಥಳೀಯ ಸೇರಿದಂತೆ ವಿವಿಧ ವಲಯಗಳ ಕಂಪೆನಿಗಳ ಸಮಾಗಮದ ಬೃಹತ್ ಉದ್ಯೋಗ ಮೇಳವಾದ ‘ಆಳ್ವಾಸ್ ಪ್ರಗತಿ -೨೦೨೩’ ೧೩ನೇ ಆವೃತಿಗೆ ವಿದ್ಯಾಗಿರಿಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಸಜ್ಜಾಗಿದೆ. ಅಕ್ಟೋಬರ್ ೬ ಮತ್ತು ೭ರಂದು ಮೂಡುಬಿದಿರೆಯ ಆಳ್ವಾಸ್‌ವಿದ್ಯಾಗಿರಿ ಆವರಣದಲ್ಲಿ `ಆಳ್ವಾಸ್ ಪ್ರಗತಿ-೨೦೨೩’ ಬೃಹತ್ ಉದ್ಯೋಗ ಮೇಳ ನಡೆಯಲಿದೆ. ಆಳ್ವಾಸ್ ಪದವಿಪೂರ್ವ ಕಾಲೇಜಿನ ಆವರಣ ಹಾಗೂ ಗ್ರಂಥಾಲಯ ಬ್ಲಾಕ್‌ನಲ್ಲಿ ಉದ್ಯೋಗ ಮೇಳದ ಸಂದರ್ಶನ, ಪರೀಕ್ಷೆ ಇತ್ಯಾದಿಗಳಿಗೆ ವ್ಯವಸ್ಥೆ ಮಾಡಲಿದ್ದು, ಉದ್ಘಾಟನೆಯು ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಬೆಳಿಗ್ಗೆ ೯.೩೦ಕ್ಕೆ ನಡೆಯಲಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸುವರು. ಮೂಲ್ಕಿ ಮೂಡುಬಿದಿರೆ ವಿಧಾನಸಭಾಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ಯು. ರಾಜೇಶ್ ನಾಯ್ಕ್, ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ.ವೈ. ಭರತ್ ಶೆಟ್ಟಿ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ವಿಧಾನಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡ ಹಾಗೂ ಕೆ. ಹರೀಶ್ ಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡುವರು.
ವೈದ್ಯಕೀಯ, ಅರೆ ವೈದ್ಯಕೀಯ, ಎಂಜಿನಿಯರಿ0ಗ್, ಕಲಾ, ವಾಣಿಜ್ಯ ಮತ್ತು ಆಡಳಿತ ನಿರ್ವಹಣೆ, ಮೂಲ ವಿಜ್ಞಾನ, ನರ್ಸಿಂಗ್, ಐಟಿಐ, ಡಿಪ್ಲೊಮಾ ಹಾಗೂ ಕೌಶಲ ಹೊಂದಿದ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಅರ್ಹತೆ ಹೊಂದಿದವರು ಸೇರಿದಂತೆ ಎಲ್ಲ ಪದವಿ ಹಾಗೂ ಸ್ನಾತಕ ಪದವೀಧರರಿಗೆ ‘ಆಳ್ವಾಸ್ ಪ್ರಗತಿ -೨೦೨೩’ ಯು ಅತ್ಯುತ್ತಮ ಉದ್ಯೋಗಳ ಬೃಹತ್ ಅವಕಾಶವನ್ನು ಕಲ್ಪಿಸಿದೆ.
ಔದ್ಯೋಗಿಕ ಉನ್ನತೀಕರಣ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ೧೨೦ ಮಂದಿ ಕಾರ್ಯ ನಿರ್ವಹಿಸಲಿದ್ದಾರೆ. ಅವರಿಗೆ ಎಂಟು ದಿನಗಳ ಕಾಲ ಕಾರ್ಪೊರೇಟ್ ತರಬೇತಿ ನೀಡಲಾಗಿದೆ. ೨೦೦ ಮಂದಿ ಸಿಬ್ಬಂದಿ ಸೇರಿದಂತೆ ೭೦೦ ಮಂದಿ ಸ್ವಯಂ ಸೇವಕರಾಗಿ ಸಹಕರಿಸಲಿದ್ದಾರೆ.