ಗೋಡೆ ನೋಡುತ್ತ ದಿನ ಕಳೆಯುತ್ತಿದ್ದಾರೆ ಅಂಗಡಿ ಮಾಲಕರು!
ಈದಿನ ಫೋಕಸ್
ಮೂಡುಬಿದಿರೆ: ಅಕ್ಷರಶಃ ಬೆಳುವಾಯಿ ಪೇಟೆ ಹೆದ್ದಾರಿ ಕಾಮಗಾರಿಗೆ ಬಲಿಯಾಗಿದೆ. ಪೇಟೆ ನಡುವೆ ಹೆದ್ದಾರಿಯ ಮಹಾಗೋಡೆ ಹಾದು ಹೋಗಿದ್ದು, ಪೇಟೆ ಇಬ್ಬಾಗವಾಗಿದೆ. ವಾಹನ ನಿಲುಗಡೆಗೂ ಸ್ಥಳವಿಲ್ಲದೆ, ಓಡಾಡಲೂ ಸಾಧ್ಯವಾಗದೆ, ಅಂಗಡಿ ಮಾಲಕರು ದಿನ ನಿತ್ಯ ಅಂಗಡಿ ಬಾಗಿಲು ತೆರೆದು `ಹೆದ್ದಾರಿಯ ಮಹಾ ಗೋಡೆ’ ವೀಕ್ಷಿಸುವಂತಾಗಿದೆ. ಫ್ಲೈ ಓವರ್ ಪೇಟೆ ಮಧ್ಯದಲ್ಲಿ ಹಾದು ಹೋಗುತ್ತಿದ್ದು, ಗೋಡೆ ಕಟ್ಟಿ ಎತ್ತರದಲ್ಲಿ ಈ ರಸ್ತೆ ಸಾಗುತ್ತಿದೆ. ಹೀಗಾಗಿ ಪೇಟೆ ಎರಡು ಪ್ರತ್ಯೇಕ ಭಾಗವಾಗಿದ್ದು, ರಸ್ತೆಯ ಇನ್ನೊಂದು ಮಗ್ಗುಲಲ್ಲಿರುವವರನ್ನು ಈ ಬದಿಯ ಮಂದಿ ನೋಡಲೂ ಸಾಧ್ಯವಿಲ್ಲ ಎಂಬ ಸ್ಥಿತಿ ನಿರ್ಮಾಣಗೊಂಡಿದೆ.
ಬೆಳುವಾಯಿ ಪೇಟೆಯ ಮೂಲಕವೇ ಹೆದ್ದಾರಿ ಸಾಗುತ್ತಿದ್ದು, ಇಲ್ಲಿ ಫ್ಲೈ ಓವರ್ ಮಾಡಲಾಗಿದೆ. ಆದರೆ ಎರಡು ಬದಿಗಳಲ್ಲಿ ಎತ್ತರದ ಗೋಡೆ ನಿರ್ಮಾಣ ಮಾಡಿ ಅದರ ಮೇಲೆ ರಸ್ತೆ ನಿರ್ಮಾಣ ಮಾಡುವುದರಿಂದಾಗಿ ಅಕ್ಷರಶಃ ಬೆಳುವಾಯಿ ಪೇಟೆ ಕಳೆಗುಂದಿದೆ. ವ್ಯಾಪಾರ ನೆಲಕ್ಕಚ್ಚಿ ಹೋಗಿದೆ. ಪೇಟೆಯ ಬಹುಪಾಲು ಅಂಗಡಿಗಳು ಈಗಾಗಲೇ ಹೆದ್ದಾರಿಗೆ ಆಹುತಿಯಾಗಿದ್ದು, ಉಳಿದ ಅಂಗಡಿಗಳಿಗೆ ವ್ಯಾಪಾರವಿಲ್ಲದಂತಹ ಪರಿಸ್ಥಿತಿ ಒದಗಿ ಬಂದಿದೆ.
ಅನಿರ್ದಿಷ್ಟಾವಧಿ ಹೋರಾಟ: ಬೆಳುವಾಯಿ ಪೇಟೆ ಉಳಿಸಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಯುತ್ತಿದೆ. ಪೇಟೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಡರ್‌ಪಾಸ್ ವ್ಯವಸ್ಥೆಯಿಂದಾಗಿ ಪೇಟೆಯ ಸ್ಥಳವು ಇಕ್ಕಟ್ಟಿನಲ್ಲಿದ್ದು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬೆಳುವಾಯಿ ಖಂಡಿಗದಿ0ದ ಮರಿಯಮ್ ನಿಕೇತನ ಶಾಲೆಯ ತನಕ ಫ್ಲೈ ಓವರ್ ನಿರ್ಮಾಣವಾಗುತ್ತಿರುವುದರಿಂದ ಈ ಸಮಸ್ಯೆ ಉದ್ಭವಿಸಿದೆ. ಈಗಾಗಲೇ ಪೇಟೆ ಇಬ್ಬಾಗವಾಗಿ ಸಮಸ್ಯೆ ಉಲ್ಭಣಿಸಿದೆ. ಕಾಮಗಾರಿಯನ್ನು ಈ ಹತದಲ್ಲಿಯೇ ಸರಿಪಡಿಸಿದ್ದೇ ಆದಲ್ಲಿ, ಅಂಗಡಿಯಿಟ್ಟು ವ್ಯಾಪಾರ ಮಾಡುವ ಮಂದಿ ನೆಮ್ಮದಿಯ ಜೀವನ ಸಾಗಿಸಬಹುದಾಗಿದೆ.