ವರದಿ: ನಳಿನಿ ಕೆ
ಮೂಡುಬಿದಿರೆ: ರಾಷ್ಟ್ರಭಾಷೆಯು ದೇಶದ ಇತಿಹಾಸ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವುದರೊAದಿಗೆ ಐಕ್ಯತೆಯನ್ನು ಸಾರುತ್ತದೆ. ಭಾರತದಲ್ಲಿ ಅತಿ ಹೆಚ್ಚು ಜನಬಳಕೆಯಾಗುವ ಹಿಂದಿ ಭಾಷೆಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸಲು ಹಲವಾರು ವರ್ಷಗಳಿಂದ ಪ್ರಯತ್ನಗಳು ನಡೆಯುತ್ತಲೇ ಇದ್ದರೂ, ಪ್ರಾಂತ್ಯ ಪ್ರಾಂತ್ಯಗಳಲ್ಲಿ ಆಗಾಗ್ಗೆ ಇದರ ಬಗ್ಗೆ ಘರ್ಷಣೆಗಳು ಹಾಗೂ ವಿವಾದಾತ್ಮಕ ಚರ್ಚೆಗಳು ನಡೆಯುತ್ತಿವೆ. ನಮ್ಮ ದೇಶದಲ್ಲಿ ಹಲವಾರು ಭಾಷೆಗಳನ್ನಾಡುವ ಜನರನ್ನು ಕಾಣಬಹುದು. ಪ್ರತೀ ಭಾಷೆಯೂ ಅದರದೇ ಆದ ವಿವಿಧ ಸಂಸ್ಕೃತಿಯನ್ನೊಳಗೊ0ಡಿದೆ. ನಮ್ಮೊಳಗಿನ ಭಿನ್ನತೆಯನ್ನು ಮರೆತು ಪ್ರತೀ ಭಾಷೆಗೂ ಗೌರವವನ್ನೀಯುವುದರೊಂದಿಗೆ ಎಲ್ಲರೂ ಸೌಹಾರ್ದತೆಯಿಂದ ಬಾಳೋಣ’ ಎಂದು ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಎಸ್.ಪಿ. ವಿದ್ಯಾಕುಮಾರ್ ತಿಳಿಸಿದರು. ಅವರು ಕಾಲೇಜಿನ ಐಕ್ಯೂಎಸಿ ಮತ್ತು ಹಿಂದಿ ವಿಭಾಗದ ವತಿಯಿಂದ ಏರ್ಪಡಿಸಲಾದ ಹಿಂದಿ ದಿನಾಚರಣೆ ಮತ್ತು ಶಿರಾಡಿಪಾಲ್ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಪರಿಸರವಾದಿ ಜಿ.ವಿ. ಗಜೇಂದ್ರ ಗೋರಾಸುಕುಡಿಗೆಯವರು ‘ಇಂದು ಇಡೀ ಜಗತ್ತೇ ಒಂದು ಗ್ರಾಮವಾಗಿ ಪರಿಣಮಿಸಿದೆ. ನಮ್ಮ ದೇಶದಲ್ಲಿ ಪ್ರತೀ ವರ್ಷವೂ ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯಾರ್ಜನೆಯನ್ನು ಮಾಡುತ್ತಿದ್ದರೂ, ಭಾಷೆಯ ಬಗ್ಗೆ ಪ್ರಭುತ್ವದ ಕೊರತೆಯಿಂದಾಗಿ ಅವರಲ್ಲಿ ಕೆಲವೇ ಕೆಲವರು ಮಾತ್ರ ಉದ್ಯೋಗವನ್ನು ಪಡೆಯುತ್ತಿದ್ದು ಇನ್ನುಳಿದವರು ಉದ್ಯೋಗವಂಚಿತರಾಗುತ್ತಿದ್ದಾರೆ. ನಮ್ಮ ಮಾತೃಭಾಷೆಯನ್ನು ಪ್ರೀತಿಸುವುದರ ಜೊತೆಗೆ ಬೇರೆ ಭಾಷೆಗೂ ಗೌರವವನ್ನು ನೀಡುವುದರೊಂದಿಗೆ ಪ್ರಪಂಚಕ್ಕೆ ತೆರೆದುಕೊಳ್ಳಬೇಕು. ಹಿಂದಿಯನ್ನು ನಮ್ಮ ಸಂವಹನ ಭಾಷೆಯನ್ನಾಗಿ ಸ್ವೀಕರಿಸಬೇಕು. ಈ ನಿಟ್ಟಿನಲ್ಲಿ ಆಚರಿಸಲ್ಪಡುವ ಹಿಂದಿ ದಿನಾಚರಣೆಯು ಬಹಳ ಅರ್ಥಪೂರ್ಣವಾಗಿದೆ. ಅಂತೆಯೇ ಶತಮಾನೋತ್ಸವ ಸಂಭ್ರಮದಲ್ಲಿರುವ ಕೆ.ಎನ್.ಭಟ್ ಶಿರಾಡಿಪಾಲರ ಜೀವನ ವಿದ್ಯಾರ್ಥಿಗಳೆಲ್ಲರಿಗೆ ಸ್ಫೂರ್ತಿ’ ಎಂದು ಅಭಿಪ್ರಾಯಪಟ್ಟರು. ಶಿರಾಡಿಪಾಲ್ ಪುತ್ರಿ ಸಂಗೀತ ಕಲಾವಿದೆ ನಿವೇದಿತಾ ಗಜೇಂದ್ರರವರು ಕವಿರತ್ನ ಕಾಳಿದಾಸ ಚಲನಚಿತ್ರದ ಗೀತೆಯನ್ನು ಹಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ, ಹಿಂದಿ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡುತ್ತೇವೆಂದು ಎಲ್ಲಾ ವಿದ್ಯಾರ್ಥಿಗಳೂ ಪಣ ತೊಡಬೇಕು ಎಂದು ತಿಳಿಸಿದರು. ವೇದಿಕೆಯಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್ ಭಟ್, ಶಿರಾಡಿಪಾಲ್ ಪುತ್ರಿ ವಿದ್ಯಾ ಡೋಂಗ್ರೆ ಮತ್ತು ಕುಟುಂಬಸ್ಥರು, ಮೂಡುಬಿದಿರೆಯ ವಕೀಲೆ ಶ್ವೇತಾ ಜೈನ್, ಶಿರಾಡಿಪಾಲರ ಶಿಷ್ಯ ಜಯರಾಜ್ ಕಾಂಬ್ಳಿ, ಪತ್ರಕರ್ತ ಹರೀಶ್ ಕೆ ಆದೂರು, ಕಾಲೇಜಿನ ಐಕ್ಯೂಎಸಿ ಸಂಯೋಜಕಿ ನಳಿನಿ ಕೆ., ಮತ್ತು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಹರೀಶ್ ಉಪಸ್ಥಿತರಿದ್ದರು.
ಕೆ.ಎನ್.ಭಟ್ ಶಿರಾಡಿಪಾಲ್ ಜನ್ಮ ಶತಮಾನೋತ್ಸವದ ಸ್ಮರಣಾರ್ಥ ನಡೆಯುತ್ತಿರುವ ‘ಶತನಮನ ಶತಸನ್ಮಾನ’ದಂಗವಾಗಿ ಹಿಂದಿ ಸಾಹಿತ್ಯ, ಸಂಸ್ಕೃತಿಗೆ ವಿಶೇಷ ಕೊಡುಗೆಯನ್ನು ನೀಡಿದ ಡಾ. ಎಸ್.ಪಿ. ವಿದ್ಯಾಕುಮಾರ್‌ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಹಿಂದಿ ಭಾಷೆಯ ಮಹತ್ವವನ್ನು ತಿಳಿಸುವ ಗೀತೆಯನ್ನು ವಿದ್ಯಾರ್ಥಿನಿಯರು ಸಾದರಪಡಿಸಿದರು. ಶಿರಾಡಿಪಾಲ್ ಜನ್ಮ ಶತಮಾನೋತ್ಸವದ ಮುಖ್ಯ ಸಂಯೋಜಕ ಜೈ ಕನ್ನಡಮ್ಮ ಪತ್ರಿಕೆಯ ಕೃಷ್ಣಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಿರಾಡಿಪಾಲರ ಜೀವನಾದರ್ಶಗಳ ವಿವರವಾದ ಮಾಹಿತಿ ನೀಡಿದರು. ಹಿಂದಿ ವಿಭಾಗ ಮುಖ್ಯಸ್ಥೆ ಶಾರದಾ ಸ್ವಾಗತಿಸಿ, ಉಪನ್ಯಾಸಕಿ ಮೊನಿಶಾ ವಂದಿಸಿದರು. ವಿದ್ಯಾರ್ಥಿಗಳಾದ ಭರತೇಶ್ ಮತ್ತು ತನುಜಾ ಅತಿಥಿ ಪರಿಚಯ ಮಾಡಿದರು. ಹೆನ್ವಿಲ್ ಕಾರ್ಯಕ್ರಮ ನಿರೂಪಿಸಿದರು.