ಮೂಡುಬಿದಿರೆ: ತಾಲೂಕು ಕೇಂದ್ರದಲ್ಲಿ ಇಂದಿರಾ ಕ್ಯಾಂಟೀನ್ ಸೌಲಭ್ಯ ಲಭಿಸಬೇಕೆಂದು ಕಾಂಗ್ರೆಸ್ ಮುಖಂಡ ಪದ್ಮಪ್ರಸಾದ್ ಜೈನ್ ಆಗ್ರಹಿಸಿದ್ದಾರೆ. ಸರಕಾರಿ ಸೌಲಭ್ಯಗಳ ಹಕ್ಕೊತ್ತಾಯ ವೇದಿಕೆಯ ವತಿಯಿಂದ ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವದಲ್ಲಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿ, ಶೀಘ್ರ ಮೂಡುಬಿದಿರೆಯಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಿ, ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.
ಈಗಾಗಲೇ ದ.ಕÀ ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳಲ್ಲಿ ಅಂದರೆ ಮಂಗಳೂರು ಕ್ಷೇತ್ರದ ಉಳ್ಳಾಲದಲ್ಲಿ ಒಂದು, ಮಂಗಳೂರು ಉತ್ತರ ಕ್ಷೇತ್ರದ ಕಾವೂರು ಮತ್ತು ಸುರತ್ಕಲ್‌ನಲ್ಲಿ, ಮಂಗಳೂರು ದಕ್ಷಿಣ ಕ್ಷೇತ್ರದ ಮೂರು ಕಡೆ ಹಾಗೂ ಬೆಳ್ತಂಗಡಿ, ಬಂಟ್ವಾಳ, ಪುತ್ತೂರು ಮತ್ತು ಸುಳ್ಯದ ಕ್ಷೇತ್ರದಲ್ಲಿ ತಲಾ ಒಂದು ಇಂದಿರಾ ಕ್ಯಾಂಟೀನ್ ಈ ಹಿಂದೆಯೇ ಸ್ಥಾಪನೆಯಾಗಿದೆ. ಆದರೆ, ಮೂಡುಬಿದಿರೆಯ ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ ಇಂದಿರಾ ಕ್ಯಾಂಟೀನ್ ಮಂಜೂರು ಆಗಿರುವುದಿಲ್ಲ. ೦೧-೦೧-೨೦೧೮ ರಿಂದ ಮೂಡುಬಿದಿರೆ ಹೊಸ ತಾಲೂಕು ಆಗಿರುತ್ತದೆ. ಅಲ್ಲದೆ, ಪುರಸಭೆ ವ್ಯಾಪ್ತಿಯಲ್ಲಿ ಸುಮಾರು ೭೫,೦೦೦ಕ್ಕಿಂತಲೂ ಹೆಚ್ಚು ಜನಸಂಖ್ಯೆ ಇದೆ ಹಾಗೂ ಮೂಡುಬಿದಿರೆಯಲ್ಲಿ ಸುಮಾರು ೨೫,೦೦೦ ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಮತ್ತು ಸುಮಾರು ೧೦,೦೦೦ಕ್ಕಿಂತಲೂ ಹೆಚ್ಚು ಜನರು ಖಾಸಗಿ ಸಂಸ್ಥೆಗಳಲ್ಲಿ ನೌಕರರಾಗಿ ಅಥವಾ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಮೂಡಬಿದಿರೆ ಹೋಟೆಲ್‌ಗಳಲ್ಲಿ ಊಟ ಮತ್ತು ತಿಂಡಿಯ ಬೆಲೆಗಳು, ಬಾರಿ ದುಬಾರಿಯಾಗಿರುತ್ತದೆ, ಬಡವರ್ಗದ ಜನರಿಗೆ ಊಟ ಮತ್ತು ಉಪಾಹಾರ ಕೈಗೆಟಕುವ ದರದಲ್ಲಿ ದೊರಕುವಂತೆ ಮಾಡಲು ಮೂಡುಬಿದಿರೆಯಲ್ಲಿ ಸರಕಾರದ ಇಂದಿರಾ ಕ್ಯಾಂಟೀನ್ ಬಹಳ ಅಗತ್ಯವಿದೆ ಎಂದು ಸರಕಾರಿ ಸೌಲಭ್ಯಗಳ ಹಕ್ಕೋತ್ತಾಯ ವೇದಿಕೆ ಒತ್ತಾಯಿಸಿ ಮನವಿ ಸಲ್ಲಿಸಿದೆ.