ಮೂಡುಬಿದಿರೆ: ಕೆ.ಎನ್. ಭಟ್ ಶಿರಾಡಿಪಾಲ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ “ಶತನಮನ- ಶತಸನ್ಮಾನ” ಕಾರ್ಯಕ್ರಮದ ತೃತೀಯ ಸನ್ಮಾನ ಕಾರ್ಯಕ್ರಮವು ಆ. 17ರಂದು ಮೂಡುಬಿದಿರೆ ತಾಲೂಕಿನ ಹೊಸಬೆಟ್ಟು ಸರಕಾರಿ ಪ್ರೌಢಶಾಲೆಯಲ್ಲಿ ಪತ್ರಕರ್ತ ಹರೀಶ್ ಕೆ. ಆದೂರು ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಹೊಸಬೆಟ್ಟು ಸರಕಾರಿ ಪ್ರೌಢಶಾಲೆಯ ರಾಷ್ಟ್ರಭಾಷಾ ಶಿಕ್ಷಕ ಮತ್ತು ಕೃಷಿಕ ದೇವನಾಥ ಸಿ. ಸುವರ್ಣ ಅವರನ್ನು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹಾಗೂ ಶತನಮನ ಶತಸನ್ಮಾನ ಕಾರ್ಯಕ್ರಮದ ಗೌರವ ಸಲಹೆಗಾರರೂ ಆಗಿರುವ ಹಿರಿಯ ಉದ್ಯಮಿ ಕೆ. ಶ್ರೀಪತಿ ಭಟ್ ಅವರು ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ, ಸನ್ಮಾನ ಪತ್ರ ಹಾಗೂ ಕೆ. ಎನ್. ಭಟ್ ಶಿರಾಡಿಪಾಲರ ಸಾಧನಾ ಪತ್ರ ನೀಡಿ ಗೌರವಿಸಿದರು. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಶಾಲಿನಿ ಕುಮಾರಿ ಸ್ವಾಗತಿಸಿ ಮುಖ್ಯ ಅತಿಥಿಯವರನ್ನು ಗೌರವಿಸಿದರು. ಗಣಿತ ಶಿಕ್ಷಕ ಸುದರ್ಶನ ರಾವ್ ನಿರೂಪಿಸಿದರು. ವಿಜ್ಞಾನ ಶಿಕ್ಷಕಿ ಜಯಂತಿ ಸನ್ಮಾನಿತರನ್ನು ಅಭಿನಂದಿಸಿ ಮಾತನಾಡಿದರು. ಶತನಮನ-ಶತಸನ್ಮಾನ ಕಾರ್ಯಕ್ರಮದ ಸಂಘಟಕ ಕೃಷ್ಣಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂಗ್ಲಿಷ್ ಭಾಷಾ ಶಿಕ್ಷಕಿ ವಿನೋದಾ ಎಂ. ಧನ್ಯವಾದ ಸಮರ್ಪಿಸಿದರು. ಶಾಲೆಯ ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.