ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ – ಸರಕಾರಕ್ಕೆ ಮೂರು ತಿಂಗಳ ಗಡು
ಮೂಡುಬಿದಿರೆ: ಸರಕಾರ ಹಲವು ಗ್ಯಾರಂಟಿಗಳನ್ನು ನೀಡಿ, ಜನತೆಯ ಆಶೋತ್ತರಗಳಿಗೆ ಸ್ಪಂದಿಸಿದೆ. ಇದು ಪ್ರಶಂಸನೀಯ. ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯವನ್ನು ಒದಗಿಸಿ, ಮಾತೆಯರ ಪ್ರಯಾಣಕ್ಕೆ ಅನುಕೂಲವನ್ನು ಮಾಡಿಕೊಟ್ಟಿದೆ. ಆದರೆ ಮೂಡುಬಿದಿರೆಯ ಪ್ರಜ್ಞಾವಂತ ನಾಗರೀಕರು ಈ ಅವಕಾಶದಿಂದ ವಂಚಿತರಾಗುತ್ತಿರುವುದು ದುರಂತವೇ ಸರಿ. ಮೂಡುಬಿದಿರೆಯಿಂದ ಮಂಗಳೂರಿಗೆ ದಿನಂಪ್ರತಿ ಅನೇಕ ಮಹಿಳೆಯರು ಹಲವು ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದಾರೆ. ಮೂಡುಬಿದಿರೆಯಿಂದ ಮಿಜಾರು, ಗಂಜೀಮಠ, ವಾಮಂಜೂರು, ಮಂಗಳೂರು ಹೀಗೆ ಹಲವು ಭಾಗಗಳಿಗೆ ಕೆಲಸ, ವಿದ್ಯಾಭ್ಯಾಸ ನಿಮಿತ್ತ ಸಾಗುವ ಮಹಿಳೆಯರು ಇಂದು ಖಾಸಗೀ ಬಸ್ಸುಗಳನ್ನೇ ಅವಲಂಬಿತವಾಗಿರುವುದು ನಮಗೆ ತಿಳಿದಿದೆ. ಸರಕಾರಕ್ಕೆ ಸಾಕಷ್ಟು ರೀತಿಯಲ್ಲಿ ತೆರಿಗೆ ಈ ಮಹಿಳೆಯರಿಂದಲೂ ಪಾವತಿಯಾಗುತ್ತಿದ್ದು, ಸರಕಾರದ ಯೋಜನೆಗಳು ಇವರಿಗೆ ಶಾಶ್ವತವಾಗಿಯೇ ಅಲಭ್ಯವಾದಂತಾಗಿದೆ ಎಂದು ಜವನೆರ್ ಬೆದ್ರ ಸಂಘಟನೆಯ ಸಂಸ್ಥಾಪಕ ಅಮರ್ ಕೋಟೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೊರೊನಾ ಸಮಯದಲ್ಲಿ ಮೂಡುಬಿದಿರೆಗೆ ಮಂಗಳೂರಿನಿಂದ ಸರಕಾರಿ ಬಸ್ಸು ಸೇವೆ ನೀಡಲಾಗಿತ್ತಾದರೂ ತದನಂತರದ ದಿನಗಳಲ್ಲಿ ಅದು ಮಾಯವಾಗಿ ಹೋಗಿದೆ. ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಬೇಕಾಗುತ್ತದೆ. ಈ ಹಿಂದೆ ಚುನಾವಣೆಯ ಸಂದರ್ಭದಲ್ಲಿ ಶಾಸಕರು ಮೂಡುಬಿದಿರೆಗೆ ಸರಕಾರಿ ಬಸ್ಸು ಸೌಲಭ್ಯವನ್ನು ಕಲ್ಪಿಸುವ ಭರವಸೆ ನೀಡಿದ್ದರು. ಆದರೆ ಚುನಾವಣೆಯ ನಂತರ ಮೊದಲ ಅವಧಿಯಲ್ಲೂ ಅವರ ಭರವಸೆ ಈಡೇರಲಿಲ್ಲ. ಈಗಲಾದರೂ ಈಡೇರಿಸಿ, ಸರಕಾರದ ಉಚಿತ ಬಸ್ಸು ಸೌಲಭ್ಯವನ್ನು ಮೂಡುಬಿದಿರೆಯ ಮಹಿಳೆಯರು ಪಡೆಯುವಂತೆ ಮಾಡುವಲ್ಲಿ ಮುತುವರ್ಜಿ ವಹಿಸಬೇಕೆಂದು ಒತ್ತಾಯಿಸುತ್ತಿದ್ದೇವೆ.
ಮೂಡುಬಿದಿರೆಯನ್ನು ಶಿಕ್ಷಣ ಕಾಶಿ, ಜೈನಕಾಶಿ ಎಂದೆಲ್ಲಾ ಕರೆಯಲಾಗುತ್ತಿದೆ. ಶೈಕ್ಷಣಿಕ ಹಬ್ ಆಗಿ ಮೂಡುಬಿದಿರೆಯಿದೆ. ಪ್ರವಾಸಿಗರೂ ದೊಡ್ಡ ಸಂಖ್ಯೆಯಲ್ಲಿ ಮೂಡುಬಿದಿರೆಗೆ ದಿನಂಪ್ರತಿ ಆಗಮಿಸುತ್ತಿರುತ್ತಾರೆ. ಹೀಗಿರುವಾಗ ಜನತೆಗೆ ಅವಶ್ಯವಿರುವ ಸರಕಾರೀ ಬಸ್ಸು ಸೇವೆಯನ್ನು ಮಂಗಳೂರು ಮೂಡುಬಿದಿರೆ ಧರ್ಮಸ್ಥಳ ಮಾರ್ಗದಲ್ಲಿ ಮಾಡದೇ ಜನತೆಗೆ ಮಂಕುಬೂದಿ ಎರಚುವ ಕಾರ್ಯ ಜನಪ್ರತಿನಿಧಿಗಳು ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದರು.
ಇನ್ನೆಷ್ಟು ಬಲಿ ಬೇಕು: ಖಾಸಗೀ ಬಸ್ಸುಗಳ ಮಿತಿಮೀರಿದ ವೇಗ, ದುರಹಂಕಾರಕ್ಕೆ ನಿರಂತರ ನರಬಲಿಗಳಾಗುತ್ತಿವೆ. ನಿನ್ನೆಯಷ್ಟೇ ಖಾಸಗೀ ಕಾಲೇಜೊಂದರ ವಿದ್ಯಾರ್ಥಿಯ ಮೇಲೆ ಮೂಡುಬಿದಿರೆಯ ಖಾಸಗೀಬಸ್ಸು ಹರಿದು ಸ್ಥಳದಲ್ಲೇ ಮೃತಪಟ್ಟ ಘಟನೆಯೂ ನಡೆದಿದೆ. ಖಾಸಗೀ ಬಸ್ಸುಗಳ ಸಮಯ, ಪೈಪೋಟಿಯೇ ಇದಕ್ಕೆಲ್ಲ ಕಾರಣ. ಇವುಗಳಿಗೆ ಪೂರ್ಣವಿರಾಮ ಬೀಳಬೇಕೆಂದಾದರೆ ಖಾಸಗಿಗೆ ಪರ್ಯಾಯವಾಗಿ ಸರಕಾರಿ ಬಸ್ಸು ಸಂಚಾರ ಆರಂಭವಾಗಲೇ ಬೇಕಾಗಿದೆ ಎಂದು ಆಗ್ರಹಿಸಿದರು.

ಮನವಿ: ಮಂಗಳೂರು-ಮೂಡುಬಿದಿರೆ-ಧರ್ಮಸ್ಥಳ, ಮಂಗಳೂರು-ಮೂಡುಬಿದಿರೆ-ಕಾರ್ಕಳ ರಸ್ತೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳ ಪ್ರಯಾಣ ತಕ್ಷಣವೇ ಆರಂಭಿಸಬೇಕು ಎಂದು ಒತ್ತಾಯಿಸಿ ನಮ್ಮ ಸಂಘಟನೆ ಸ್ಥಳೀಯ ಶಾಸಕರು, ಸಂಸದರು, ವಿಧಾನ ಸಭಾ ಸ್ಪೀಕರ್, ಮುಖ್ಯಮಂತ್ರಿ, ಸಾರಿಗೆ ಸಚಿವ, ಸಾರಿಗೆ ಇಲಾಖೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಆಯುಕ್ತರಿಗೆ ಮನವಿ ಸಲ್ಲಿಸುತ್ತೇವೆ.
ಹೋರಾಟ: ಮುಂದಿನ ಮೂರು ತಿಂಗಳ ಅವಧಿಯೊಳಗೆ ಈ ಬಗ್ಗೆ ಸರಕಾರ/ಅಧಿಕಾರಿಗಳು ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ವಿಭಿನ್ನ ರೀತಿಯ ಹೋರಾಟವನ್ನು ನಮ್ಮ ಸಂಘಟನೆ ಮಾಡಲಿದೆ. ಕೇವಲ ಹೇಳಿಕೆ ನೀಡಿ ಪ್ರಚಾರ ಪಡೆಯುವುದು ನಮ್ಮ ಉದ್ದೇಶವಲ್ಲ. ಸಮಸ್ಯೆಗೆ ಒಂದು ತಾರ್ಕಿಕ ಅಂತ್ಯ ಲಭಿಸುವ ತನಕ ಹೋರಾಡುವ ಚಿಂತನೆ ಹಮ್ಮಿಕೊಳ್ಳಲಾಗಿದೆ ಎಂದ ಅವರು ವಿದ್ಯಾರ್ಥಿಗಳನ್ನು ಜತೆಗೂಡಿಸಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ನಾರಾಯಣ ಪಡುಮಲೆ, ರಾಜೇಂದ್ರ ಜಿ ಹಾಗೂ ಮನು ಒಂಟಿಕಟ್ಟೆ ಉಪಸ್ಥಿತರಿದ್ದರು.