ಮೂಡುಬಿದಿರೆ: ಲಕ್ನೋದಲ್ಲಿ ನಡೆಯುತ್ತಿರುವ ಮೂರನೇ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ – ೨೦೨೨ರ ಅಥ್ಲೆಟಿಕ್ಸ್, ವಾಲಿಬಾಲ್, ವೇಟ್ ಲಿಫ್ಟಿಂಗ್ ಹಾಗೂ ಮಲ್ಲಕಂಬದಲ್ಲಿ ಮಂಗಳೂರು ವಿ.ವಿ. ಅತ್ಯುತ್ತಮ ಸಾಧನೆ ಮಾಡಿದ್ದು, ವಿ.ವಿ.ಯನ್ನು ಪ್ರತಿನಿಧಿಸಿದ ೬೦ಕ್ರೀಡಾಪಟುಗಳ ಪೈಕಿ ೪೯ಮಂದಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.
ಅಥ್ಲೆಟಿಕ್ ಮಹಿಳಾ ವಿಭಾಗ ಸತತ ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಆಳ್ವಾಸ್ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿ ಪದಕಗಳನ್ನು ಬಾಚಿಕೊಂಡಿದ್ದಾರೆ ಎಂದು ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಬಾರಿ ಖೇಲೋ ಇಂಡಿಯಾದಲ್ಲಿ ಮಂಗಳೂರು ವಿ.ವಿ. ೩ಚಿನ್ನ, ೭ಬೆಳ್ಳಿ ಹಾಗೂ ೫ ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡು ಉತ್ತಮ ಸಾಧನೆ ಮಾಡಿದೆ ಎಂದು ಹೇಳಿದ್ದಾರೆ.

ಅಥ್ಲೆಟಿಕ್ ಮಹಿಳಾ ವಿಭಾಗದಲ್ಲಿ ವಿ.ವಿ. ಸತತ ಮೂರನೇ ಬಾರಿಗೆ ಚಾಂಪಿಯನ್ ಆಗಿದ್ದು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ೧೫ಕ್ರೀಡಾಪಟುಗಳ ಪೈಕಿ ೧೨ಮಂದಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.

೫೪ಅಂಕಗಳೊಂದಿಗೆ ಮಹಿಳೆಯರು ಚಾಂಪಿಯನ್‌ಶಿಪ್ ಪಡೆದಿದ್ದಾರೆ. ರನ್ನರ್ ಅಪ್ ಪಡೆದ ಕೊಟ್ಟಾಯಂ ವಿ.ವಿ. ಕೇವಲ ೩೫ಅಂಕಕ್ಕೆ ತೃಪ್ತಿ ಪಡುವಂತಾಗಿದೆ ಎಂದು ಡಾ.ಆಳ್ವ ವಿವರಿಸಿದರು.
ಪುರುಷರು ರಾಷ್ಟ್ರಮಟ್ಟದಲ್ಲಿ ೫ನೇ ಸ್ಥಾನ ಪಡೆದಿದ್ದು ವಿ.ವಿ. ಪ್ರತಿನಿಧಿಸಿದ ೧೪ ಕ್ರೀಡಾಪಟುಗಳ ಪೈಕಿ ೧೩ಮಂದಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು. ವಾಲಿಬಾಲ್‌ನಲ್ಲಿ ಬೆಳ್ಳಿ ಪದಕ ಒಲಿದಿದ್ದು ವಿ.ವಿ. ಪ್ರತಿನಿಧಿಸಿದ ೧೨ಕ್ರೀಡಾಪಟುಗಳ ಪೈಕಿ ೫ಮಂದಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು.
ವೇಟ್ ಲಿಫ್ಟಿಂಗ್‌ನಲ್ಲಿ ವಿ.ವಿ.ಯನ್ನು ಸಂಪೂರ್ಣವಾಗಿ ಆಳ್ವಾಸ್ ಕಾಲೇಜಿನ ಏಳು ಕ್ರೀಡಾಪಟುಗಳು ಪ್ರತಿನಿಧಿಸಿದ್ದು ಮಹಿಳಾ ವಿಭಾಗದಲ್ಲಿ ಬೆಳ್ಳಿ ಹಾಗೂ ಪುರಷರ ವಿಭಾಗದಲ್ಲಿ ಕಂಚಿನ ಪದಕ ಲಭಿಸಿದೆ. ಮಲ್ಲಕಂಬದ ಮಹಿಳಾ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಆರನೇ ಸ್ಥಾನ ಬಂದಿದ್ದು ವಿ.ವಿ.ಯನ್ನು ಸಂಪೂರ್ಣ ಆಳ್ವಾಸ್ ಕಾಲೇಜಿನ ೧೨ವಿದ್ಯಾರ್ಥಿಗಳು ಪ್ರತಿನಿಧಿಸಿದ್ದರು.