ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ…

ಹಳ್ಳಿಯೇ ಇರಲಿ, ನಗರವೇ ಇರಲಿ ಅಲ್ಲಲ್ಲಿ ಮನೆಯ ಮುಂದೆ ನುಗ್ಗೆ ಮರಗಳು ಇದ್ದೇ ಇರುತ್ತವೆ. ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ.

ನುಗ್ಗೆ ಇಂದು ಸೂಪರ್‌ ಫ‌ುಡ್‌ ಆಗಿ ಪರಿಗಣಿತವಾಗುತ್ತಿರು ವುದು ಈ ಕಾರಣಗಳಿಂದಲೇ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನುಗ್ಗೆಯ ಎಲೆಗಳ ಪುಡಿ “ಮೊರಿಂಗಾ ಪೌಡರ್‌’ ಎಂದು ಸೌಂದರ್ಯ ವರ್ಧಕ ಹಾಗೂ ಸೌಂದರ್ಯ ಪ್ರಸಾಧಕವಾಗಿ ಭಾರೀ ಬೇಡಿಕೆ ಪಡೆದಿದೆ. ನಮ್ಮ ಹಿತ್ತಲಲ್ಲೇ ಇರುವ ನುಗ್ಗೆ ಹೇಗೆ ಸೌಂದರ್ಯವರ್ಧಕ ಮದ್ದು ಎಂದು ಅರಿಯೋಣವೇ?

ನುಗ್ಗೆ ಎಲೆ, ಬೆಣ್ಣೆಹಣ್ಣು ಜೇನಿನ ಫೇಸ್‌ಪ್ಯಾಕ್‌
ಬೇಕಾಗುವ ಸಾಮಗ್ರಿ: 5 ಚಮಚ ಒಣಗಿಸಿ ಹುಡಿಮಾಡಿದ ನುಗ್ಗೆ ಎಲೆಗಳ ಪುಡಿ, ಬೆಣ್ಣೆಹಣ್ಣು ಮಸೆದದ್ದು 10 ಚಮಚ, 4 ಚಮಚ ಶುದ್ಧ ಜೇನು, 1 ಚಮಚ ನಿಂಬೆ ಅಥವಾ ಕಿತ್ತಳೆ ರಸ.

ತಯಾರಿಸುವ ವಿಧಾನ: ಇವೆಲ್ಲವನ್ನೂ ಚೆನ್ನಾಗಿ ಬೆರೆಸಿ, ಕಲಕಿ ಪೇಸ್ಟ್‌ ತಯಾರಿಸಿ ಮುಖಕ್ಕೆ ಲೇಪಿಸಿ 1/2 ಗಂಟೆ ಬಳಿಕ ಬೆಚ್ಚಗಿನ ನೀರಲ್ಲಿ ಮುಖ ತೊಳೆಯಬೇಕು. ಇದು ಮುಖಕ್ಕೆ ಉತ್ತಮ ಮಾಯಿಶ್ಚರೈಸರ್‌. ನುಗ್ಗೆಯಲ್ಲಿ ಚರ್ಮದ ಟಾನಿಕ್‌ ಆಗಿರುವ ವಿಟಮಿನ್‌ “ಈ’, “ಸಿ’ ಹಾಗೂ “ಎ’ ಅಧಿಕ ಪ್ರಮಾಣದಲ್ಲಿದೆ. ಇದು ಡೀಪ್‌ ಕಂಡೀಷನರ್‌ ಹಾಗೂ ಕ್ಲೆನ್ಸರ್‌ ಆಗಿ ಪರಿಣಾಮ ಬೀರುತ್ತದೆ. ಚರ್ಮವೂ ಯೌವ್ವನಭರಿತವಾಗಿ ನೆರಿಗೆಗಳಿಲ್ಲದಂತೆ ಮೃದು ಮಾಡುತ್ತದೆ. ಬೆಣ್ಣೆಹಣ್ಣು ಸ್ನಿಗ್ಧತೆ ನೀಡಿದರೆ, ಜೇನು ಹಾಗೂ ನಿಂಬೆ ಪೋಷಕಾಂಶ ಒದಗಿಸಿ ಕಾಂತಿ ವರ್ಧಿಸುವುದರ ಜೊತೆಗೆ “ಬ್ಲೀಚ್‌ ಇಫೆಕ್ಟ್’ನಿಂದ ಅಂದರೆ ಚರ್ಮದ ಬಣ್ಣವನ್ನು ಶ್ವೇತವರ್ಣವಾಗಿಸುತ್ತದೆ.

ನುಗ್ಗೆಪುಡಿ, ಪಪ್ಪಾಯ-ಮೊಸರಿನ ಹೇರ್‌ಪ್ಯಾಕ್‌
ಬೇಕಾಗುವ ಸಾಮಗ್ರಿ: ನುಗ್ಗೆ ಎಲೆ ಒಣಗಿಸಿ ಹುಡಿಮಾಡಿದ್ದು 5 ಚಮಚ, ಕಳಿತ ಪಪ್ಪಾಯದ ತಿರುಳಿನ ಪೇಸ್ಟ್‌ 10 ಚಮಚ, 4 ಚಮಚ ದಪ್ಪ ಮೊಸರು.

ತಯಾರಿಸುವ ವಿಧಾನ: ಇವೆಲ್ಲವನ್ನು ಚೆನ್ನಾಗಿ ಬೆರೆಸಬೇಕು. ಕೂದಲಿಗೆ ಲೇಪಿಸಿ 1 ಗಂಟೆಯ ಬಳಿಕ ಬೆಚ್ಚಗಿನ ನೀರಿನಲ್ಲಿ ಕೂದಲು ತೊಳೆದರೆ ಕೂದಲು ರೇಶಿಮೆಯ ನುಣುಪು ಪಡೆಯುವುದರ ಜೊತೆಗೆ ಕೂದಲು ಸಮೃದ್ಧವಾಗಿ ಬೆಳೆಯುತ್ತದೆ. ತುರಿಕೆ, ಕಜ್ಜಿ , ಹೊಟ್ಟು ನಿವಾರಕವೂ ಹೌದು. ಮಕ್ಕಳಿಗೂ ಉತ್ತಮ. ಒಣ ಕೂದಲು ಉಳ್ಳವರು ಪಪ್ಪಾಯದ ಬದಲಿಗೆ ಬೆಣ್ಣೆಹಣ್ಣಿನ ಪೇಸ್ಟ್‌ 10 ಚಮಚ ಬೆರೆಸಿ ಇದೇ ರೀತಿ ಹೇರ್‌ಪ್ಯಾಕ್‌ ಮಾಡಿದರೆ ಒರಟು, ಒಣಗಿದ ಕೂದಲು ಸ್ನಿಗ್ಧವಾಗಿ ಕಾಂತಿಯುತವಾಗುತ್ತದೆ.

Share

Leave a Reply

Your email address will not be published. Required fields are marked *