ಚಿಕನ್ ಕಬಾಬ್ ಅಂದ್ರೆ ಯಾರಿಗೇ ತಾನೇ ಇಷ್ಟವಿಲ್ಲ ಹೇಳಿ…ಜಸ್ಟ್ ಕಬಾಬ್ ಅಂದ ಕ್ಷಣ ಎಲ್ಲರ ಬಾಯಲ್ಲೂ ನೀರು ಬರುತ್ತೆ. ಮನೆಯಲ್ಲಿ ದೊಡ್ಡವರಿಗಷ್ಟೇ ಅಲ್ಲ ಚಿಕ್ಕ ಮಕ್ಕಳಿಗೂ ಕಬಾಬ್ ಅಂದ್ರೆ ಪಂಚಪ್ರಾಣ. ಆದರೆ ಇದು ನಾರ್ಮಲ್ ಕಬಾಬ್ ಗೂ ಟೇಸ್ಟ್ ನಲ್ಲಿ ಭಿನ್ನವಾಗಿದೆ. ಅದರಲ್ಲೂ ಇದು ಸ್ವಲ್ಪ ಮಟ್ಟಿಗೆ ಸ್ಪೈಸಿ ಇದ್ದು ಇಷ್ಟಪಡುವವರು ನಾಲಿಗೆ ಚಪ್ಪರಿಸಿ ತಿನ್ನಬಹುದು ಅದುವೇ ಗ್ರೀನ್ ಚಿಕನ್ ಕಬಾಬ್ .
ಹಾಗಾದರೆ ಈ ಗ್ರೀನ್ ಚಿಕನ್ ಕಬಾಬ್ ರೆಸಿಪಿ ಮಾಡುವ ವಿಧಾನ ಹೇಗೆ? ಇದಕ್ಕೆ ಬೇಕಾಗುವ ಸಾಮಗ್ರಿಗಳು ಯಾವುವು? ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು
ಚಿಕನ್-ಅರ್ಧ ಕೆ.ಜಿ., ಬೆಳ್ಳುಳ್ಳಿ-10ಎಸಳು, ಕಾಳುಮೆಣಸು-8ರಿಂದ10, ಹಸಿಮೆಣಸು-5, ಶುಂಠಿ, ಪುದೀನಾ ಸೊಪ್ಪು-1/4 ಕಟ್ಟು, ಕೊತ್ತಂಬರಿ ಸೊಪ್ಪು-ಅರ್ಧ ಕಟ್ಟು, ಕಾನ್‌ಪೌಡರ್-3ಚಮಚ, ಲಿಂಬೆ-1, ಮೊಟ್ಟೆ-1, ಎಣ್ಣೆ(ಕರಿಯಲು), ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
-ಮೊದಲಿಗೆ ಚಿಕನ್ ಅನ್ನು ಕಬಾಬ್ ಅಳತೆಗೆ ಕತ್ತರಿಸಿ, ಶುಚಿಯಾಗಿ ನೀರಿನಲ್ಲಿ ತೊಳೆದಿಟ್ಟುಕೊಂಡು ಅದರಲ್ಲಿನ ನೀರಿನಾಂಶ ಇರದಂತೆ ಮಾಡಿಕೊಳ್ಳಿ.
-ಒಂದು ಮಿಕ್ಸಿ ಜಾರಿಗೆ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು, ಕಾಳುಮೆಣಸು, ಪುದೀನಾ, ಕೊತ್ತಂಬರಿ ಸೊಪ್ಪು ಎಲ್ಲವನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
-ತೊಳೆದಿಟ್ಟ ಚಿಕನ್ ಗೆ ಲಿಂಬೆರಸ, ರುಚಿಗೆ ತಕ್ಕಷ್ಟು ಉಪ್ಪು ,ಮೊಟ್ಟೆ, ಕಾರ್ನ್ ಪೌಡರ್ ಮತ್ತು ಮಾಡಿಟ್ಟ ಮಸಾಲೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸುಮಾರು ಅರ್ಧ ಗಂಟೆಗಳ ಕಾಲ ಮ್ಯಾರಿನೇಟ್ ಆಗಲು ಬಿಡಿ.
-ಬಳಿಕ ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದನಂತರ ಮ್ಯಾರಿನೇಟ್ ಆದ ಚಿಕನ್‌ನನ್ನು ಒಂದೊಂದಾಗಿ ಎಣ್ಣೆಗೆ ಹಾಕಿರಿ.
-ಕೆಲ ನಿಮಿಷಗಳ ಕಾಲ ಚಿಕನ್ ಬೇಯುವವರೆಗೂ ಎಣ್ಣೆಯಲ್ಲಿ ಕರಿಯಿರಿ.
-ನಂತರ ಒಂದು ಪ್ಲೇಟ್ ಗೆ ಹಾಕಿ ಮೇಯನೇಸ್ ಜೊತೆ ತಿನ್ನಿ ಬಹಳ ರುಚಿಯಾಗುತ್ತದೆ.