1950-60ರ ದಶಕದಲ್ಲಿ ಬಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ಸಿನಿಮಾರಂಗದಲ್ಲಿನ ಚಲನಚಿತ್ರಗಳಿಗೆ ಸಂಗೀತವೇ ಜೀವಾಳವಾಗಿತ್ತು. ಶಂಕರ್-ಜೈಕಿಶನ್, ಮದನ್ ಮೋಹನ್, ಓಪಿ ನಯ್ಯರ್ ಅವರಂತಹ ಸಂಗೀತ ಸಂಯೋಜಕರ ಅದ್ಭುತ ಹಾಡುಗಳು ಪ್ರೇಕ್ಷಕರನ್ನು ಮೋಡಿ ಮಾಡಿತ್ತು. ಅದಕ್ಕೆ ತಕ್ಕಂತೆ ಸಿನಿಮಾ ನಿರ್ದೇಶಕರು ಕೂಡಾ ತಮ್ಮ ಸಿನಿಮಾ ಕಥೆಗಳನ್ನು ರಚಿಸುತ್ತಿದ್ದರು. ಈ ಸಂದರ್ಭದಲ್ಲಿ ಬಾಲಿವುಡ್ ಚಿತ್ರ ನಿರ್ಮಾಪಕ ಬಿ.ಆರ್.ಚೋಪ್ರಾ ಹಾಡುಗಳಿಲ್ಲದೇ ಸಿನಿಮಾ ನಿರ್ಮಾಣ ಮಾಡುವ ಸಾಹಸಕ್ಕೆ ಕೈಹಾಕಿದ್ದರು.
ಇದನ್ನೂ ಓದಿ:Karnataka Election; ಡಿಕೆ ಶಿವಕುಮಾರ್ ಅವರ ಹೆಲಿಕಾಪ್ಟರ್ ತಪಾಸಣೆ; ಆಕ್ರೋಶ
1960ರ ದಶಕದಲ್ಲಿ ತೆರೆಕಂಡಿದ್ದ “ಕಾನೂನ್” ಹಾಡುಗಳಿಲ್ಲದ ಮೊತ್ತ ಮೊದಲ ಹಿಂದಿ ಸಿನಿಮಾವಾಗಿದೆ. ಈ ಚಿತ್ರದಲ್ಲಿ ಅಶೋಕ್ ಕುಮಾರ್, ರಾಜೇಂದ್ರ ಕುಮಾರ್, ನಂದಾ ಅಭಿನಯಿಸಿದ್ದರು. ಬಾಲಿವುಡ್ ನ ಕಾನೂನ್ ಸಿನಿಮಾ ಮರಣದಂಡನೆ ಕಥಾಹಂದರವನ್ನೊಳಗೊಂಡಿತ್ತು. ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬರನ್ನು ವಿಚಾರಣೆಗೊಳಪಡಿಸುವ ದೃಶ್ಯದೊಂದಿಗೆ ಸಿನಿಮಾ ಆರಂಭವಾಗುತ್ತದೆ.
ಕೋರ್ಟ್ ನಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟ ಕಾಳಿದಾಸ್ (ಜೀವನ್) ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ತಾನೇ ಈ ತಪ್ಪಿತಸ್ಥ ಎಂದು ತಪ್ಪೊಪ್ಪಿಕೊಳ್ಳುತ್ತಾನೆ. ಆದರೆ ತಾನು ಅದೇ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ಈಗಾಗಲೇ ಹತ್ತು ವರ್ಷ ಜೈಲುಶಿಕ್ಷೆ ಅನುಭವಿಸಿದ್ದೇನೆ. ಈ ಕಾನೂನಿನಿಂದ ನನಗೇನು ಸಿಕ್ಕಂತಾಯ್ತು ಎಂದು ಕಾಳಿದಾಸ್ ಜಡ್ಜ್ ಬದ್ರಿ ಪ್ರಸಾದ್ (ಅಶೋಕ್ ಕುಮಾರ್ ) ಅವರನ್ನು ಪ್ರಶ್ನಿಸಿ ಭಾವನಾತ್ಮಕವಾಗಿ ತನ್ನ ನೋವನ್ನು ಹೊರಹಾಕಿ, ಕಟಕಟೆಯಲ್ಲೇ ಕುಸಿದು ಬಿದ್ದು ಸಾವನ್ನಪ್ಪುತ್ತಾನೆ.
ತುಂಬಾ ಕುತೂಹಲಕಾರಿ ಕ್ಲೈಮ್ಯಾಕ್ಸ್ ಹೊಂದಿರುವ ಕಾನೂನ್ ಸಿನಿಮಾದಲ್ಲಿ ಯಾವುದೇ ಹಾಡುಗಳಿಲ್ಲ. ಆದರೂ ಈ ಸಿನಿಮಾ ಭರ್ಜರಿ ಯಶಸ್ವಿ ಕಂಡಿತ್ತು. ಜೊತೆಗೆ ರಾಷ್ಟ್ರ ಪ್ರಶಸ್ತಿಗೂ ಭಾಜನವಾಗಿತ್ತು. ಇಂದಿಗೂ ಕೂಡಾ ನೀವು ಆ ಸಿನಿಮಾವನ್ನು ವೀಕ್ಷಿಸಿದರೆ ಆ ಕಥೆ ಪ್ರಸ್ತುತ ಎನಿಸುತ್ತದೆ. ಗ್ರಹಿಕೆ ಮತ್ತು ಸತ್ಯ ಇದರಲ್ಲಿ ಯಾವುದನ್ನು ಪರಿಗಣಿಸಬೇಕು ಎಂಬ ಒಳನೋಟವನ್ನು ಈ ಚಿತ್ರ ತೆರೆದಿಡುವಲ್ಲಿ ಯಶಸ್ವಿಯಾಗಿದೆ.