
ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆಯ ಅಂಗವಾಗಿ ಆಳ್ವಾಸ್ ಪದವಿ ಕಾಲೇಜಿನ ಗ್ರಂಥಾಲಯ ವಿಭಾಗದ ವತಿಯಿಂದ ಕುವೆಂಪು ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ‘ಗೂಗಲ್–ಎಐ ಯುಗದಲ್ಲೂ ಓದಿನ ಅನಿವರ‍್ಯತೆ’ ಕುರಿತು ಅವರು ಮಾತನಾಡಿದರು.
ಗೂಗಲ್‌ನಲ್ಲಿ ಮಾಹಿತಿ ಹುಡುಕಬಹುದು, ಎಐಯಿಂದ ಉತ್ತರ ಪಡೆಯಬಹುದು. ಆದರೆ ಆ ಮಾಹಿತಿಯ ಅರ್ಥ, ಸಂದರ್ಭ, ಸತ್ಯಾಸತ್ಯತೆ ಹಾಗೂ ಪರಿಣಾಮವನ್ನು ನಿರ್ಣಯಿಸುವ ವಿವೇಚನಾಶಕ್ತಿ ಓದಿನಿಂದಲೇ ರೂಪುಗೊಳ್ಳುತ್ತದೆ. ಓದು ಗಮನ, ಏಕಾಗ್ರತೆ, ಕಲ್ಪನಾಶಕ್ತಿ, ಶಬ್ದಸಂಪತ್ತು ಹಾಗೂ ಸಂವಹನ ಕೌಶಲವನ್ನು ಬೆಳೆಸುವ ಮೂಲಕ ವ್ಯಕ್ತಿಯ ಚಿಂತನಾ ಸಾಮರ್ಥ್ಯವನ್ನು ಗಟ್ಟಿಗೊಳಿಸುತ್ತದೆ.
ಕೃತಕ ಬುದ್ಧಿಮತ್ತೆಯನ್ನು ಶತ್ರುವಾಗಿ ನೋಡಬೇಕಾಗಿಲ್ಲ. ಅದನ್ನು ಕಲಿಕೆಯ ಸಹಭಾಗಿಯಾಗಿ ಬಳಸಬೇಕು. ಎಐಗೆ ಗುಲಾಮರಾಗದೆ, ಅದನ್ನು ಕರಗತ ಮಾಡಿಕೊಳ್ಳಬೇಕು. ಮೊದಲು ಓದಿ, ನಂತರ ಯೋಚಿಸಿ, ನಂತರ ಕೃತಕ ಬುದ್ಧಿಮತ್ತೆಯನ್ನು ವಿವೇಕಯುತವಾಗಿ ಬಳಸಬೇಕು ಎಂದು ಸಲಹೆ ನೀಡಿದರು.
ಪ್ರತಿದಿನ ಕನಿಷ್ಠ 20 ನಿಮಿಷಗಳ ಕಾಲ ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ಸ್ವೀಕರಿಸಬೇಕು. ಓದು ಒಂದು ಸ್ಪರ್ಧೆಯಲ್ಲ; ಅದು ಜೀವನಶೈಲಿಯಾಗಬೇಕು. ಆರಂಭದಲ್ಲಿ ಹೆಚ್ಚು ಸಮಯ ಮೀಸಲಿಡುವುದಕ್ಕಿಂತ, ಕಡಿಮೆ ಅವಧಿಯಿಂದ ಆರಂಭಿಸಿ ಅದನ್ನು ನಿರಂತರ ಅಭ್ಯಾಸವನ್ನಾಗಿ ಬೆಳೆಸಿಕೊಳ್ಳುವುದು ಮುಖ್ಯ. ಓದುವುದನ್ನು ಎಂದಿಗೂ ನಿಲ್ಲಿಸಬೇಡಿ; ಓದಿನ ಮೂಲಕ ಸ್ವತಂತ್ರವಾಗಿ ಯೋಚಿಸುವ, ಪ್ರಶ್ನಿಸುವ ಹಾಗೂ ಹೊಸ ವಿಚಾರಗಳನ್ನು ಅರಿಯುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಿ ಎಂದರು.
ಕಾಲೇಜಿನಲ್ಲಿ ಗ್ರಂಥಾಲಯ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.