ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮ
ಮಂಗಳೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು, ಔಟ್ ಲೋಡ್ಸ್ ಇಂಡಿಯಾ ಮತ್ತು ನ್ಯಾಯ ಸಂಸ್ಥೆಗಳ ಸಹಯೋಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ತರಬೇತಿ ಪಡೆದ ಪ್ಯಾರಾ ಲೀಗಲ್ ವಾಲಂಟಿಯರ್‌ಗಳಿಗಾಗಿ ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮ ಮಂಗಳೂರು ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ನಡೆಯಿತು.

ಮಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ, ಗೌರವಾನ್ವಿತ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಬಸವರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ಯಾರಾ ಲೀಗಲ್ ವಾಲಂಟಿಯರ್‌ಗಳು ಕಾನೂನು ಸೇವಾ ಸಂಸ್ಥೆಗಳು ಮತ್ತು ಸಾಮಾನ್ಯ ಜನರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಪ್ರಮುಖ ಕೊಂಡಿಯಾಗಿದ್ದಾರೆ. ಕಾಲಕ್ರಮೇಣ ಬದಲಾಗುತ್ತಿರುವ ಕಾನೂನುಗಳು, ಸರ್ಕಾರಿ ಯೋಜನೆಗಳು, ನ್ಯಾಯಾಂಗ ಪ್ರಕ್ರಿಯೆಗಳು ಹಾಗೂ ಸಮಾಜದ ಹೊಸ ಸವಾಲುಗಳ ಕುರಿತು PLVಗಳ ಜ್ಞಾನವನ್ನು ನಿರಂತರವಾಗಿ ನವೀಕರಿಸುವುದು ಅಗತ್ಯ. ಪುನಶ್ಚೇತನ ತರಬೇತಿಯ ಮೂಲಕ ಕಾನೂನು ಅರಿವು, ಪ್ರಕರಣ ಗುರುತಿಸುವಿಕೆ, ಸೂಕ್ತ ಮಾರ್ಗದರ್ಶನ, ದೂರು ಸಲ್ಲಿಕೆ, ಉಚಿತ ಕಾನೂನು ನೆರವು ಮತ್ತು ದುರ್ಬಲ ವರ್ಗಗಳ ಹಕ್ಕುಗಳ ಕುರಿತು ಅವರ ಕೌಶಲ್ಯವನ್ನು ಮತ್ತಷ್ಟು ಬಲಪಡಿಸಬಹುದು ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು, ಹಿರಿಯ ಸಿವಿಲ್ ನ್ಯಾಯಾಧೀಶರಾದ ಝೈಬುನ್ನಿಸಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುನಶ್ಚೇತನ ತರಬೇತಿ PLVಗಳ ಆತ್ಮವಿಶ್ವಾಸ ಹೆಚ್ಚಿಸಿ, ಪರಿಣಾಮಕಾರಿ ಕ್ಷೇತ್ರಕಾರ್ಯಕ್ಕೆ ಪ್ರೇರಣೆ ನೀಡುತ್ತದೆ. “ಪಿ.ಎಲ್.ವಿ.ಗಳಾದ ನಾವು ನ್ಯಾಯವನ್ನು ನೀಡುವವರು ಅಲ್ಲ; ಆದರೆ ನ್ಯಾಯವನ್ನು ತಲುಪಿಸುವವರು. ನಾವು ವಕೀಲರಲ್ಲದಿರಬಹುದು; ಆದರೆ ಕಾನೂನಿನ ಅರಿವನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯುವವರು. ನಮ್ಮ ಮಾತಿನಿಂದ ಒಬ್ಬ ವ್ಯಕ್ತಿಗೆ ಧೈರ್ಯ ಬಂದರೆ, ನಮ್ಮ ಸೇವೆ ಸಾರ್ಥಕ. ನಮ್ಮ ಮಾರ್ಗದರ್ಶನದಿಂದ ಒಬ್ಬ ಕುಟುಂಬಕ್ಕೆ ನ್ಯಾಯ ದೊರೆತರೆ, PLV ಆಗಿರುವ ನಮ್ಮ ಬದುಕು ಸಾರ್ಥಕ” ಎಂದರು.

ನಲ್ಸಾ ಮಾರ್ಗಸೂಚಿಗಳ ಪ್ರಕಾರ ಪ್ಯಾರಾ ಲೀಗಲ್ ವಾಲಂಟಿಯರ್‌ಗಳ ಪಾತ್ರ, ಸಮಾನತೆ ಕುರಿತ ಕಾನೂನುಗಳು, ಹಿರಿಯ ನಾಗರಿಕರ ಕಲ್ಯಾಣ ಕಾನೂನುಗಳು, ಪರಿಶಿಷ್ಟ ಪಂಗಡ (ST) / ಪರಿಶಿಷ್ಟ ಜಾತಿ (SC) ಸಂಬಂಧಿತ ಕಾನೂನುಗಳು, ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಸಂಬಂಧಿಸಿದ ಕಾನೂನುಗಳು, ತೃತೀಯ ಲಿಂಗಿಗಳ (Transgenders) ಕಾಯ್ದೆ, ಕಾರ್ಮಿಕ ಕಾನೂನುಗಳು,

ಜೀತದಾಳು ಕಾರ್ಮಿಕ ಪದ್ಧತಿ, ಸಾಮಾಜಿಕ ಭದ್ರತೆ, ಮಹಿಳೆಯರಿಗೆ ಸಂಬಂಧಿಸಿದ ಕಾನೂನುಗಳು, ವರದಕ್ಷಿಣೆ, ಕೌಟುಂಬಿಕ ಹಿಂಸಾಚಾರ, ವಿಚ್ಛೇದನ ಮತ್ತು ಜೀವನಾಂಶ, ಲೈಂಗಿಕ ಕಿರುಕುಳ, ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳು, ಬಾಲ್ಯವಿವಾಹ, JJ ಕಾಯ್ದೆ (Juvenile Justice Act), ಪೊಕ್ಸೋ ಕಾಯ್ದೆ, ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಎಲ್ಲಾ ಪಾಲುದಾರ ಇಲಾಖೆಗಳ ನಡುವಿನ ಸಮನ್ವಯ, ಪ್ರಮುಖ ಕ್ರಿಮಿನಲ್ ದೂರು ಪ್ರಕ್ರಿಯೆಗಳು, ಕಾನೂನು ಚೌಕಟ್ಟು ಮತ್ತು ನ್ಯಾಯಾಲಯದ ಪ್ರಕ್ರಿಯೆಗಳು, “POCSO ಕಾಯ್ದೆಯಾಚೆ ಮಕ್ಕಳ ಸುರಕ್ಷತೆ”, POCSO ಪ್ರಕರಣಗಳಲ್ಲಿ ಮಕ್ಕಳ ಕಲ್ಯಾಣ ಮತ್ತು ಪುನರ್ವಸತಿ, ಜಾಗೃತಿ ಯೋಜನೆಗಳ ಕುರಿತು ಪುನಶ್ಚೇತನ ತರಬೇತಿಯಲ್ಲಿ ಸಂಪೂರ್ಣ ಮಾಹಿತಿ ನೀಡಲಾಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ವಂದನಾ, ವೈಷ್ಣವಿ, ಶುಭಾ ಗಾಂವ್ಕರ್, ಕೃಷ್ಣ ಪ್ರಸಾದ್, ಡಾ. ರುಸ್ಕಾನಾ ಹಸನ್, ಗೀತಾ ಕುಲಕರ್ಣಿ,ಮೋತಿಲಾಲ್ ಚೌಧರಿ, ಸೌಭಾಗ್ಯ ಶೆಟ್ಟಿ, ಹರಿಣಿ, ಮೋಹನ ಜೆ.ಎಸ್,ಮಾನಸಾ ಜಿ. ಹೆಗಡೆ ಮಾಹಿತಿ ನೀಡಿದರು.
ಪ್ರಚಲಿತ ಚಾರಿಟೇಬಲ್ ಟ್ರಸ್ಟ್ (ರಿ.) ಕಾರ್ಯದರ್ಶಿ ಹನೀಷಾ ಕಾರ್ಯಕ್ರಮ ನಿರ್ವಹಿಸಿದರು. ಸುಮಾರು ೫೦ ಪಿ.ಎಲ್.ವಿ.ಗಳು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.