ಮೂಡುಬಿದಿರೆ: ಇಲ್ಲಿನ ಪತ್ರಕರ್ತರು ಎರಡು ದಿನಗಳ ಜೋಗ ಅಧ್ಯಯನ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ಅಧ್ಯಯನ ಪ್ರವಾಸದಲ್ಲಿ ಜೋಗದಲ್ಲಿರುವ ವಿದ್ಯುತ್ ಉತ್ಪಾದನಾ ಘಟಕ, ವಿದ್ಯುತ್ ಪ್ರಸರಣ ವ್ಯವಸ್ಥೆ, ವಿದ್ಯುತ್ ಪ್ರಸರಣ ಮಾರ್ಗಗಳ ಸಮೀಕ್ಷೆ, ಪ್ರಸರಣ ಮಾರ್ಗದ ಕೆಳಭಾಗದಲ್ಲಿ ನಡೆಯುವ ಕೃಷಿ ಚಟುವಟಿಕೆಗಳ ಅಧ್ಯಯನ, ಸ್ಥಳೀಯ ಐತಿಹಾಸಿಕ ಸ್ಥಳಗಳ ಭೇಟಿ ನಡೆಯಲಿದೆ.

ಕೃಷಿತಜ್ಞರು, ರೈತ ಸಂಘಟನೆಯ ಮುಖಂಡರು, ಸಂತ್ರಸ್ಥ ರೈತರೊಂದಿಗೆ ಸಂವಾದ ನಡೆಯಲಿದೆ. ಜೊತೆಗೆ ಮಾಧ್ಯಮ ತಜ್ಞರೊಂದಿಗೆ ಸಮಾಲೋಚನೆಗಳನ್ನು ಏರ್ಪಡಿಸಲಾಗಿದೆ. ಸುಮಾರು ೧೪ಮಂದಿ ಪತ್ರಕರ್ತರು ಪ್ರವಾಸದಲ್ಲಿ ಪಾಲ್ಗೊಳ್ಳಲಿದ್ದು ಹಲವು ಆಯಾಮಗಳಲ್ಲಿ ಮಾಹಿತಿ ಕ್ರೋಢೀಕರಣ ಕೈಗೊಳ್ಳುವರು.

ಕೃಷಿಕರಿಗೆ ಧೈರ್ಯ ತುಂಬುವ ಪ್ರವಾಸ: ಈ ಪ್ರವಾಸ ಹಲವು ಧನಾತ್ಮಕ ದೃಷ್ಠಿಕೋನವನ್ನು ಹೊಂದಿದೆ. ಕರ್ನಾಟಕ ಹಾಗೂ ಕೇರಳ ಭಾಗಕ್ಕೆ ವಿದ್ಯುತ್ ಪ್ರಸರಣ ನಡೆಸುವ ಯುಕೆಟಿಎಲ್ ಯೋಜನೆಯ ಅನುಷ್ಠಾನದಿಂದ ಭೂಮಿ ಹಾಗೂ ಕೃಷಿ ಕಳೆದುಕೊಂಡ ರೈತರಿಗೆ ಪರ್ಯಾಯ ಕೃಷಿ ಮಾರ್ಗೋಪಾಯಗಳನ್ನು ತೋರಿಸುವ ಹಿನ್ನಲೆಯನ್ನು ಈ ಪ್ರವಾಸ ಇಟ್ಟುಕೊಂಡಿರುವುದು ಗಮನಾರ್ಹ ಅಂಶವಾಗಿದೆ. ಜೋಗದಲ್ಲಿ ಉತ್ಪಾದನೆಗೊಂಡ ವಿದ್ಯುತ್ ಬೆಂಗಳೂರಿಗೆ ವಿದ್ಯುತ್ ಪ್ರಸರಣ ವ್ಯವಸ್ಥೆಯ ಮೂಲಕ ತಲುಪುತ್ತಿದ್ದು, ಆ ಭಾಗದಲ್ಲೂ ಅಪಾರ ಕೃಷಿ ಭೂಮಿ ಹಾನಿಯಾಗಿದೆ. ಅಲ್ಲಿಯ ಕೃಷಿಕರು ಅನುಸರಿಸಿದ ಮಾರ್ಗೋಪಾಯಗಳ ಕುರಿತು ಮಾಹಿತಿ ಸಂಗ್ರಹಿಸಿ ಕರಾವಳಿಯ ಕೃಷಿಕರಿಗೆ ತಲುಪಿಸಿ, ಕೃಷಿಗೆ ಕೃಷಿಕರಿಗೆ ಚೈತನ್ಯ ತುಂಬುವ ಉದ್ದೇಶದಿಂದ ಪ್ರವಾಸ ಆಯೋಜಿಸಲಾಗಿದೆ.